Friday, October 18, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯೇತರ ಸಮ್ಮೇಳನಾಧ್ಯಕ್ಷರ ಆಯ್ಕೆ ಸಾಹಿತ್ಯಕ್ಕೆ ಮಾಡುವ ದೊಡ್ಡದ್ರೋಹ ; ಎಲ್.ಎನ್.ಮುಕುಂದರಾಜ್

ಸಾಹಿತ್ಯೇತರರನ್ನು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಅದು ಸಾಹಿತ್ಯಕ್ಕೆ ಮಾಡುವ ದೊಡ್ಡದ್ರೋಹ, ಅಂತಹ ದುಸ್ಸಾಹಸಕ್ಕೆ ಕೇಂದ್ರ ಕಸಾಪ ಅಧ್ಯಕ್ಷರು ಮುಂದಾಗಬಾರದು ಎಂದು ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಹೇಳಿದರು.

ಮಂಡ್ಯ ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರು ಸಾಹಿತಿಗಳಾಗಿದ್ದರೆ, ನಿಜವಾದ ಓದುಗರಾಗಿದ್ದರೆ, ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ನಿರ್ಧಾರ ಕೈಗೊಳ್ಳುವುದಿಲ್ಲ, ಸಾಹಿತ್ಯದ ಗಂಧವೇ ಗೊತ್ತಿರದವರು ಇಂತಹ ನಿರ್ಧಾರ ಮಾಡುವರು, ಸಾಹಿತ್ಯೇತರರನ್ನು ಅಧಿಕಾರಕ್ಕೆ ಬಂದಾಗ ಒಪ್ಪಲು ಸಾಧ್ಯವಿಲ್ಲ ಎಂದರು.

ಭಾಷಿಕ ಲೋಕ ಕಟ್ಟಬೇಕಾದ ಜವಾಬ್ದಾರಿ ಲೇಖಕರ ಮೇಲಿದೆ. ಪಂಪ, ಕುಮಾರವ್ಯಾಸರಂತಹ ಕವಿಗಳ ಸಾಹಿತ್ಯಗಳನ್ನು ಬರೆಯದಿದ್ದರೆ ಕನ್ನಡವಿಲ್ಲ, ಶೇಕ್ಸ್ ಸ್ಪಿಯರ್ ಇಲ್ಲದಿದ್ದರೆ ಆಂಗ್ಲ ಭಾಷೆಯ ಅಸ್ಥಿತ್ವ ಏನೆಂದು ತಿಳಿಯುತ್ತಿರಲಿಲ್ಲ, ಲೇಖಕರು ಬದುಕನ್ನು ಹೇಗೆ ನಡೆಸಬೇಕೆಂಬ ದಾರಿ ತೋರಿಸುವವರಾಗಿದ್ದು, ಲೇಖಕರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯ ಮಾಡಿದರು.

ಸಾಹಿತ್ಯ ಎಂಬ ಪ್ರಜ್ಞೆ ಕನ್ನಡದ ಪ್ರಜ್ಞೆ. ಸಾಹಿತ್ಯ ಭಾಷೆಯ ಮೂಲಕ ಘಟಿಸುತ್ತಿರುವ ಒಂದು ವಿದ್ಯಮಾನ. ಭಾಷೆಯನ್ನು ಪ್ರಧಾನವಾದ ಸಾಧನೆಯನ್ನಾಗಿಸಿಕೊಂಡು ಕನ್ನಡ ಕಟ್ಟುವಂತಹ ಕೆಲಸವನ್ನು ಸಾಹಿತಿಗಳು ಮಾಡುತ್ತಿದ್ದಾರೆ ಎಂದರು.

ವೈಭವದ ಸಂಭ್ರಮ

ಸಾಹಿತ್ಯ ಸಮ್ಮೇಳನ ತನಗೆ ತಾನೇ ಒಂದು ವೈಭವದ ಸಂಭ್ರಮ. ಸಮ್ಮೇಳನದಲ್ಲಿ ಹೆಚ್ಚಾಗಿ ಭಾಗವಹಿಸುವವರು ಶಿಕ್ಷಕರೇ ಆಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗ ನೀಡುವ ಶಿಕ್ಷಕರು ಪ್ರತಿನಿಧಿ ಶುಲ್ಕ ಪಾವತಿಸಿ ಭಾಗಿಯಾಗುತ್ತಾರೆ. ಇತ್ತೀಚೆಗೆ, ಕಾರ್ಮಿಕ ವಲಯ, ರೈತರು, ಆಟೋ ಚಾಲಕರು, ಬಸ್ ಚಾಲಕರು ಸೇರಿದಂತೆ ಅನೇಕರು ಕನ್ನಡದ ಮೇಲಿನ ಅಭಿಮಾನದಿಂದ ಭಾಗವಹಿಸುತ್ತಾರೆ ಎಂದು ಒತ್ತಿ ಹೇಳಿದರು.

ಈಗಿ ಸಾಹಿತ್ಯದಲ್ಲಿ ಬರವಣಿಗೆಗಳ ತೀಕ್ಷ್ಣತೆ ತೀವ್ರತೆಯು ಇತ್ತೀಚೆಗಿನ ಬರವಣಿಗೆಗಳಲ್ಲಿ ಬಹಳ ದಟ್ಟವಾಗಿ ಬರುತ್ತಿದೆ. ಶ್ರೀಹರ್ಷ ಸಾಲಿಮಠ, ದಯಾ ಸಂದನಘಟ್ಟ, ಟಿ.ಕೆ.ದಯಾನಂದ, ಗುರುಪ್ರಸಾದ್ ಕಟ್ಟಲಗೆರೆ, ಚಾಂದ್ ಪಾಷ, ವಿ.ಆರ್.ಕಾರ್ಪೆಂಟರ್, ಕಡಲ ಬೇಟೆಗಾರ ನಾಗರಾಜ್ ಎಂಬ ಸಾಹಿತಿಗಳು ಶ್ರೇಷ್ಠವಾದ ಬರಹಗಳನ್ನು ನೀಡುತ್ತಿದ್ದು, ಅವರುಗಳನ್ನು ಹುಡುಕಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದರು.

ಇಂದಿನ ಸಮಸ್ಯೆಗಳಿಗೆ ಉತ್ತರವಿದೆ

ಮಹಿಳೆಯರು, ಮುಸಲ್ಮಾನರು, ದಲಿತ ಸಮುದಾಯಕ್ಕೆ ಸೇರಿದ ಯುವ ಬರಹಗಾರರು ಸಾಕಷ್ಟು ತೀಕ್ಷ್ಣವಾದ ಬರಹಗಳನ್ನು ಬರೆಯುತ್ತಿದ್ದಾರೆ. ಇವುಗಳನ್ನು ಓದಿಗಾಗ ಈ ಕಾಲದ ಬರಹಗಳು ಎಷ್ಟು ಮುನ್ನೆಲೆಗೆ ಬಂದಿವೆಯೆಂದು ತಿಳಿಯಬಹುದು. ಪಂಪನಲ್ಲಿಯೂ ಈ ಕಾಲದ ಸಮಸ್ಯೆಗಳಿಗೆ ಉತ್ತರವಿದೆ ಎಂದು ಹೇಳಬಹುದಾಗಿದೆ. ಈ ಸಾಲಿನಲ್ಲಿ ರನ್ನ, ಕುವೆಂಪು, ಬೇಂದ್ರೆ, ಅನಂತಮೂರ್ತಿ, ತೇಜಸ್ವಿ ಸೇರಿದಂತೆ ಎಲ್ಲರಲ್ಲಿಯೂ ಇಂದಿನ ಸಮಸ್ಯೆಗಳಿಗೆ ಉತ್ತರವಿದೆ ಎಂದು ಹೇಳಿದರು.

ಹೆಚ್.ಎಲ್.ನಾಗೇಗೌಡ, ಜೀ.ಶಂ.ಪ, ಅರ್ಚಕ ರಂಗಸ್ವಾಮಿ ಅವರನ್ನು ನೆನಪಿಸಿಕೊಂಡಾಗ ಮಂಡ್ಯ ಜಿಲ್ಲೆ ಸಾಂಸ್ಕೃತಿಕವಾಗಿ ಅತ್ಯಂತ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದ್ದು, ಈ ನೆಲೆದಲ್ಲಿ ಸೌಹಾರ್ದತೆಯನ್ನು ಗಮನಿಸಬಹುದಾಗಿದೆ. ಜಿಲ್ಲೆಯ ಜನರ ಸಾಂಸ್ಕೃತಿಕ ಮನೋವೃತ್ತಿ ದೊಡ್ಡ ಮಟ್ಟದ್ದು, ಇಲ್ಲಿಯ ಜನರ ಹೃದಯ ಸಕ್ಕರೆಯಂತೆ ಮಧುವಾದುದು ಎಂದು ಕೊಂಡಾಡಿದರು.

ಮೊಟ್ಟಮೊದಲ ಮಹಿಳಾ ಲೇಖಕಿಯನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಮಂಡ್ಯ ಜಿಲ್ಲೆಯದ್ದಾಗಿದೆ. ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ವಿಚಾರವನ್ನು ಪರಿಷತ್ತಿನ ಅಧ್ಯಕ್ಷರು ತೇಲಿ ಬಿಟ್ಟಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಪರಿಗಣಿಸುವುದು ಎಷ್ಟು ಸರಿ ಎಂಬುದನ್ನು ಅವಲೋಕಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಇತರೆ ಕ್ಷೇತ್ರಗಳಲ್ಲಿ ಸಾಹಿತಿಗಳು ಯಾರಿಗೂ ಕಾಣುವುದಿಲ್ಲ

ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ಸಾಹಿತಿಗಳಿಗೆ ಆದ್ಯತೆ ದೊರೆಯುತ್ತದೆ. ಇತರೆ ಕ್ಷೇತ್ರಗಳಲ್ಲಿ ಸಾಹಿತಿಗಳು ಯಾರಿಗೂ ಕಾಣುವುದಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಸಣ್ಣ ಹಿನ್ನಡೆ ಕಾಣಲು ಸಾಹಿತಿಗಳನ್ನು ತೊಡಗಿಸಿಕೊಳ್ಳದೇ ಇರುವುದು ಕಾರಣವಾಗಿದೆ. ತಮಿಳು, ಮಳಿಯಾಳಂ ಸಿನಿಮಾಗಳಲ್ಲಿ ಸಾಹಿತಿಗಳನ್ನು ತೊಡಗಿಸಿಕೊಳ್ಳುತ್ತಿದ್ದು, ರಾಷ್ಟ್ರಮಟ್ಟದ ಆದ್ಯತೆ ದೊರೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿಗಳನ್ನು ಹಾಗೂ ಸಾಹಿತ್ಯವನ್ನು ಬೇರೆ ಕ್ಷೇತ್ರಗಳಲ್ಲಿ ಅತ್ಯಂತ ಅವಗಣನೆಗೆ ಒಳಮಾಡಲಾಗಿದೆ. ಸಾಹಿತಿಗಳ ವಿರುದ್ಧ ಲೇವಡಿ ಮಾಡಿ ಸಾಹಿತಿಗಳನ್ನು ಕುಗ್ಗಿಸಲಾಗುತ್ತಿದೆ. ಜಾತ್ಯಾತೀತತೆ, ವೈಜ್ಞಾನಿಕತೆ ಸಾಹಿತಿಗಳಲ್ಲಿದೆ, ಇವುಗಳು ಚಾಲ್ತಿಗೆ ಬರುವುದನ್ನು ತಡೆಯಲು ಸಾಹಿತಿಗಳನ್ನು ಕುಗ್ಗಿಸುವ ಹುನ್ನಾರವಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು.

ನಿಜವಾದ ಧರ್ಮಿಯರು ಸಾಹಿತಿಗಳು, 12ನೇ ಶತಮಾನದಲ್ಲಿ ಬಸವಣ್ಣ ಲಿಂಗಾಯತ ಧರ್ಮ ಕಟ್ಟಿದರೆ, ನಮ್ಮ ಕಾಲದ ಕವಿ ಕುವೆಂಪು ಅವರು ವಿಶ್ವಮಾನವ ಧರ್ಮವನ್ನು ಕಟ್ಟಿದ್ದಾರೆ. ದಯಯೇ ಧರ್ಮದ ಮೂಲವಾಗಿದ್ದು, ಇದನ್ನು ಬಿಟ್ಟು ಅಮಾನವೀಯ ವರ್ತನೆ ಸಾಹಿತಿಗಳಲ್ಲಿ ಇಲ್ಲ. ಮಾನವತಾ ಧರ್ಮವನ್ನು ಹೊಂದಿದ ಸಾಹಿತಿಗಳನ್ನು ಹೊರಗಿಟ್ಟು ಇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ವಿಚಾರನ್ನು ಒಪ್ಪುವುದಿಲ್ಲ.

ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಆದರೆ ಸಮ್ಮೇಳನಕ್ಕೆ ನೀಡುವ ಹಣವನ್ನು ಶಾಲೆಗಳ ಉದ್ದಾರಕ್ಕೆ ಬಳಕೆ ಮಾಡಲಿ, ಹರಿಕೇಸರಿ, ಬಿಜ್ಜಳನಂತಹ ದೊರೆಗಳು ಕವಿಗಳಿಗೆ ಆಧ್ಯತೆ ನೀಡಿದ್ದಾರೆ. ರಾಜಕಾರಣದ ಸ್ಥಿರತೆ ಕಾಪಾಡಲು ಕವಿಗಳ ಅವಶ್ಯಕತೆಯಿದೆ ಎಂದು ಹೇಳಿದರು.

ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಡಿ.ಎಲ್.ಲಿಂಗರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!