Friday, October 18, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳು ವಾಲ್ಮೀಕಿಯಂತಹ ಜ್ಞಾನ ಗಳಿಸಿಕೊಳ್ಳಬೇಕು: ರವಿಕುಮಾರ್

ಮಹರ್ಷಿ ವಾಲ್ಮೀಕಿಯು ಬಹಳ ಜ್ಞಾನ ಭಂಡಾರವನ್ನು ಹೊಂದಿ ಮಹಾಗ್ರಂಥ ರಾಮಾಯಣವನ್ನು ರಚಿಸಿದ್ದಾರೆ. ಆದ್ದರಿಂದ ಜೀವನದಲ್ಲಿ ಪ್ರತಿಯೊಬ್ಬರ ಮಕ್ಕಳು ಸಹ ವಾಲ್ಮೀಕಿಯವರಂತಹ ಜ್ಞಾನ ಭಂಡಾರವನ್ನು ಬೆಳೆಸಿಕೊಳ್ಳಬೇಕು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರ ಶಾಸಕ ಪಿ ರವಿಕುಮಾರ್ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಕಛೇರಿ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ವಾಲ್ಮೀಕಿ ಎಂದಾಕ್ಷಣ ನಮಗೆಲ್ಲ ನೆನಪಾಗುವುದೇ ರಾಮಾಯಣ ಕಾವ್ಯ. ವಾಲ್ಮೀಕಿಯವರು ಯಾವುದೇ ಗುರುಕುಲಕ್ಕೆ ಹೋಗಿ ಗುರುಗಳಿಂದ ಪಾಠ ಕಲಿತವರಲ್ಲ. ಏಕೆಂದರೆ ಹಿಂದಿನ ಕಾಲದಲ್ಲಿ ಶೂದ್ರರಿಗೆ ಯಾವುದೇ ವೈದಿಕರು ವಿದ್ಯೆ ನೀಡುತ್ತಿರಲಿಲ್ಲ. ಶೂದ್ರರಾಗಿ ಹುಟ್ಟಿದ ವಾಲ್ಮೀಕಿ ಅವರು ಯಾವುದೇ ಗುರುವಿನ ಸಹಾಯ ಪಡೆಯದೆ ರಾಮಾಯಣವೆಂಬ ಮಹಾಗ್ರಂಥವನ್ನು ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದರು.

ವಾಲ್ಮೀಕಿ ಅವರು ರಾಮಾಯಣದಲ್ಲಿ ಬರುವ ಪಾತ್ರಗಳನ್ನು ತುಂಬಾ ಉತ್ತಮವಾಗಿ, ಸವಿಸ್ತಾರವಾಗಿ, ಅದ್ಬುತವಾಗಿ ತೋರಿಸಿದ್ದಾರೆ. ಅವರು ಸಂಸ್ಕೃತ ಭಾಷೆಯಲ್ಲಿ ಬರೆದ ರಾಮಾಯಣವನ್ನು ಹೊಸ ಕನ್ನಡಕ್ಕೆ ಹಲವಾರು ಕವಿಗಳು ಭಾಷಾಂತರ ಮಾಡಿದ್ದಾರೆ. ನಮ್ಮ ಸರ್ಕಾರವು ಕೂಡ ವಾಲ್ಮೀಕಿ ಜನಾಂಗದ ಏಳಿಗೆಗೆ ಅನುದಾನವನ್ನು ನೀಡಿ ಮುಂದಿನ ದಿನಗಳಲ್ಲೂ ಕೂಡ ಸದಾ ಕಾಲ ಜೊತೆಯಾಗಿರುತ್ತದೆ ಎಂದು ಹೇಳಿ ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.

ಮೌಲ್ಯಗಳನ್ನು ಅಳವಡಿಸಿಕೊಳ್ಳಿ ; ಡಾ.ಕುಮಾರ

ಭರತ ಖಂಡಕ್ಕೆ ರಾಮಾಯಣವೆಂಬ ಗ್ರಂಥವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ವ್ಯಕ್ತಿತ್ವದಲ್ಲಿ ಅಡಗಿರುವ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಪ್ರಪಂಚದ ಮೊದಲ ಮಹಾಕಾವ್ಯ ರಾಮಾಯಣ ಎಂಬ ಮಾತಿದ್ದು, ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರನ್ನು ಆದಿಕವಿ, ಮೊದಲ ಕವಿ ಎಂದು ಕರೆಯಲಾಗುತ್ತದೆ. ರಾಮಾಯಣ ಮಹಾಕಾವ್ಯವು ಸುಮಾರು 24,000 ಶ್ಲೋಕಗಳನ್ನು ಒಳಗೊಂಡಿದ್ದು, ಈ ಮಹಾಕಾವ್ಯದ ನೆಲೆಗಟ್ಟಿನಲ್ಲಿ ದೇಶದ ಎಲ್ಲಾ ಭಾಷೆಯಲ್ಲಿಯೂ ರಾಮಾಯಣ ಕಾವ್ಯವು ರಚಿತವಾಗಲು ಮಹರ್ಷಿ ವಾಲ್ಮೀಕಿ ಅವರು ಕಾರಣರಾಗಿದ್ದಾರೆ. ಕುವೆಂಪು ಹಾಗೂ ಪಂಪ ಕವಿಗಳು ಸೇರಿದಂತೆ ಇನ್ನಿತರೆ ಕವಿಗಳು ರಾಮಾಯಣವನ್ನು ಬರೆಯಲು ವಾಲ್ಮೀಕಿಯ ಸಂಸ್ಕೃತ ಭಾಷೆಯ ರಾಮಾಯಣ ಮೂಲಾಧಾರವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದ ಕಷ್ಟ ಹಾಗೂ ನೋವುಗಳನ್ನು ತಾವೇ ಅನುಭವಿಸಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿ ಅವರು ತಮ್ಮ ಗ್ರಂಥವಾದ ರಾಮಾಯಣದಲ್ಲಿ ತಿಳಿಸಿದ್ದಾರೆ. ಜೊತೆಗೆ ಪ್ರಸ್ತುತ ಜಗತ್ತಿನಲ್ಲಿ ನಂಬಿಕೆಯ ಕೊರತೆ ಇದ್ದು, ಜೀವನದಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ ಎಂಬ ಅಂಶವನ್ನು ರಾಮಾಯಣ ಗ್ರಂಥದಲ್ಲಿ ತಿಳಿಯಬಹುದಾಗಿದೆ ಎಂದರು.

ಮಂಡ್ಯ ಎ ಇ ಟಿ ಮಹಾ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಪಕ ಹೆಚ್ ಪಿ ಧರ್ಮೇಶ್ ಮಾತನಾಡಿ, ರಾಮಾಯಣ ಕಾವ್ಯದಲ್ಲಿ ಭರತ ಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿ, ಸರೋವರ, ಜಲಪಾತ, ಪ್ರಾಣಿಗಳು, ಪಕ್ಷಿಗಳು ಸೇರಿದಂತೆ ಪ್ರಕೃತಿ ಸೌಂದರ್ಯವನ್ನು ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದರು.

ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ಪಡೆದ ವಾಲ್ಮೀಕಿ ಜನಾಂಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷ ಸಿಡಿ ಗಂಗಾಧರ,ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರುಗಳಾದ ಶ್ರೀಧರ್, ಶಿವಲಿಂಗು, ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಸಭೆ ಪೌರಾಯುಕ್ತ ಎಂ ಪಿ ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!