Friday, October 18, 2024

ಪ್ರಾಯೋಗಿಕ ಆವೃತ್ತಿ

ಕೈಗಾರಿಕೆ ಸ್ಥಾಪನೆಗೆ ಸರ್ಕಾರದ ಅಸಹಕಾರ : ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ನೂತನ ಕೈಗಾರಿಕೆಗಳನ್ನು ಆರಂಭಿಸಿ ಯುವ ಜನಾಂಗಕ್ಕೆ ಉದ್ಯೋಗ ದೊರಕಿಸಿಕೊಡಲು ಕೇಂದ್ರ ಸರ್ಕಾರ ಆಸಕ್ತಿ ತಳೆದಿದೆ, ಆದರೆ ರಾಜ್ಯ ಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದರು.

ಮಂಡ್ಯನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೈಸೂರು ಭಾಗದ ತುಮಕೂರು, ಹಾಸನ, ಮಂಡ್ಯ, ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನ ಕಾರ್ಖಾನೆಗಳನ್ನು ಆರಂಭಿಸಲು ಹಲವು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಆದರೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಸಾಯಿ ಎಕ್ಸ್ ಪೋಟ್ಸ್ ನಿಂದ ಉದ್ಯೋಗದ ಭರವಸೆ

ಮದ್ದೂರಿನ ಗೆಜ್ಜಲಗೆರೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸಾಯಿ ಎಕ್ಸ್ ಪೋರ್ರ್ಟ್ ಕಂಪನಿಯೂ ಕನಿಷ್ಠ ಐದಾರು ಸಾವಿರ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ್ದು, ಹೆಚ್ಚುವರಿಯಾಗಿ 150 ಎಕರೆ ಜಮೀನು ನೀಡಿದರೆ, 10 ಸಾವಿರ ಮಹಿಳೆಯರಿಗೆ ಗಾರ್ಮೆಂಟ್ಸ್ ಉದ್ಯಮದಲ್ಲಿ ಉದ್ಯೋಗ ದೊರಕಿಸುವ ಭರವಸೆ ವ್ಯಕ್ತಪಡಿಸಿದ್ದು, ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣ ಅಥವಾ ಬೆಳ್ಳೂರಿನಲ್ಲಿ ಜಮೀನು ಲಭ್ಯತೆ ಆಧಾರದಲ್ಲಿ ಅವಕಾಶ ಕಲ್ಪಿಸುವ ಚಿಂತನೆ ನನ್ನದಾಗಿದೆ ಎಂದರು.

ಸಕ್ಕರೆ ನಗರದಲ್ಲಿ ಇಂದು ಆಯೋಜನೆಗೊಂಡಿದ್ದ ಉದ್ಯೋಗ ಮೇಳದಲ್ಲಿ ಮಂಡ್ಯ ಸೇರಿದಂತೆ ನೆರೆ-ಹೊರೆ ಜಿಲ್ಲೆಗಳ ಸುಮಾರು 2000 ಮಂದಿ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು.

ಪ್ರತಿಷ್ಟಿತ ಕಂಪನಿಗಳಾದ ಹೆಚ್.ಎಂ.ಟಿ , ಬಿಎಚ್ಎಎಲ್, ಇಪಿಎಲ್, ಬಿ ಆಂಡ್ ಆರ್ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.

ಕೈಗಾರಿಕಾಭಿವೃದ್ದಿ ಬಗ್ಗೆ ಸಣ್ಣ ಚರ್ಚೆಗೂ ಅವಕಾಶ ಕಲ್ಪಿಸದ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದೇನೆ, ರಾಜ್ಯದಲ್ಲಿ ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ಘಟಕ ತೆರೆಯಲು ವಿಫುಲ ಅವಕಾಶಗಳಿವೆ. ಸಿಮೆಂಟ್ ಕಾರ್ಖಾನೆ ಆರಂಭಕ್ಕೂ ಅವಕಾಶವಿದ್ದು ಈ ಸಂಬಂಧ ಸಮಸ್ಯೆ ನಿವಾರಣೆಗೆ ಬದ್ದನಾಗಿರುವುದಾಗಿ ತಿಳಿಸಿದರು.

ನಿರುದ್ಯೋಗ ನಿವಾರಣೆಗೆ ಮೋದಿ ಆದ್ಯತೆ

ರಾಷ್ಟ್ರದ ನಿರುದ್ಯೋಗ ಸಮಸ್ಯೆಯನ್ನು ಸಾಧ್ಯವಾದ ಮಟ್ಟಿಗೆ ಬಗೆಹರಿಸುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿದ್ಧಾರೆಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ನೆರೆ-ಹೊರೆ ಜಿಲ್ಲೆಗಳ ಉದ್ಯೋಗಾಕಾಂಕ್ಷಿತರ ಅಳಲು ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ದೇಶದ ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕನಿಷ್ಠ ಒಂದೂವರೆ ಸಾವಿರ ಮಂದಿಗೆ ಉದ್ಯೋಗ ದೊರೆಕಿಸುವ ಚಿಂತನೆ ನನ್ನದಾಗಿದೆ ಎಂದರು.

ಕೇಂದ್ರ ಸರ್ಕಾರ ಆಟೋ ಮೊಬೈಲ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಬಿಡಿ ಭಾಗಗಳ ತಯಾರಿಕೆಗೆ ವಿಫುಲ ಅವಕಾಶ ಕಲ್ಪಿಸಲು ಪೂರಕ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು, ಇದು ಪ್ರಧಾನ ಮಂತ್ರಿಯವರ ಬದ್ದತೆಯ ಕಾರ್ಯವಾಗಿದ್ದು, ಇದರಿಂದ ಯುವ ಜನರಿಗೆ ವಿಫಲ ಉದ್ಯೋಗಾವಕಾಶ ದೊರೆಯಲಿದೆ ಎಂದರು.

ಇಂದಿನ ಉದ್ಯೋಗ ಮೇಳದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿವರೆಗಿನ ನಿರುದ್ಯೋಗಿಗಳಿಗೂ ಉದ್ಯೋಗದ ಅವಕಾಶ ದೊರೆಯಲಿದ್ದು, ಇತರೆ ಉದ್ಯೋಗಾಕಾಂಕ್ಷಿಗಳಿಂದ ಪಡೆರುವ ಅರ್ಜಿಗಳನ್ನು ಗಮನಿಸಿ ಬಿ.ಎ., ಎಂಎ, ಎಂಎಸ್ಸಿ, ಬಿಇ, ಎಂ.ಕಾಂ ಹಾಗೂ ಕಂಪ್ಯೂಟರ್ ಆಧಾರಿತ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ತಿಳಿದರು.

ಮಂಡ್ಯ ಜನರ ನಿರೀಕ್ಷೆ ಅಪಾರವಾಗಿದ್ದು, ಹಂತ ಹಂತವಾಗಿ ಹಲವು ಕೈಗಾರಿಕೆಗಳನ್ನು ಆರಂಭಿಸುವ ಉತ್ಸುಕತೆ ಇದ್ದು, ಬಿಎಚ್ಇಎಲ್ ವಿಸ್ತರಣೆ, ಹೆಚ್ಎಂಟಿ ಕಾರ್ಖಾನೆ ಮತ್ತು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕಟಿಬದ್ದವಾಗಿರುವುದಾಗಿ ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಆರಂಭದಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ ಮಾತನಾಡಿ, ಕುಮಾರಸ್ವಾಮಿ ಅವರ ಬಹಳ ದಿನಗಳ ಬಯಕೆ ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಈಡೇರಿದೆ, ಜಿಲ್ಲೆ ಸೇರಿದಂತೆ ನೆರೆ-ಹೊರೆಯ ಯುವ ಜನರಿಗೆ ಉದ್ಯೋಗ ದೊರಕಿಸುವ ಮೂಲಕ ಅವರ ಪೋಷಕರ ಬದುಕಿಗೂ ಆಸರೆಯಾಗುವ ಸದುದ್ದೇಶದಿಂದ ದೆಹಲಿ ಮತ್ತು ಮುಂಬೈನಿಂದ ಹಲವು ಕೈಗಾರಿಕಾ ಕಂಪನಿಗಳ ಮುಖ್ಯಸ್ಥರನ್ನು ಮೇಳಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವಿವಿಧ ಉದ್ದಿಮೆಗಳ ಪ್ರತಿನಿಧಿಗಳಾದ ಕೊಹ್ಲಿ, ಕುಪ್ಪು ಸದಾಶಿವ ಮೂರ್ತಿ, ಸುರೇಂದ್ರ ನಾಥ್, ರವಿಕುಮಾರ್, ಶರ್ಮಾ, ಸಂಜಯ್ ಬಂಗೇರಾ, ಅಮಿತ್ ಮುಖರ್ಜಿ ಸೇರಿದಂತೆ ಹಲವರಿದ್ದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಹೆಚ್.ಟಿ.ಮಂಜು, ವಿವೇಕಾನಂದ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಕೆ.ಎಸ್.ವಿಜಯ್ ಆನಂದ್, ಬಿ.ಆರ್.ರಾಮಚಂದ್ರು, ನಗರಸಭೆ ಅಧ್ಯಕ್ಷ ನಾಗೇಶ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿ ಆಸೀನರಾಗಿದ್ದರು.

ಬೃಹತ್ ಕೈಗಾರಿಕಾ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಡುವ ಪ್ರತ್ಯೇಕ ವಿಭಾಗ ತೆರೆಯಲು ಚಿಂತಿಸಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!