Saturday, October 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನಾಡು ನುಡಿ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿ: ಡಾ.ಮಹೇಶ್ ಜೋಶಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು ನುಡಿಯ ಹಬ್ಬವಾಗಿದ್ದು, ನೊಂದಣಿ ಮಾಡಿಕೊಳ್ಳುವವರು ಡಿಸೆಂಬರ್ 20, 21 ಹಾಗೂ 22 ರಂದು 3 ದಿನ ಸಂಪೂರ್ಣವಾಗಿ ಭಾಗವಹಿಸಿ ಸಂಭ್ರಮಿಸಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಂಡ್ಯ ತಾಲ್ಲೂಕು ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ವಿವಿಧ ಪ್ರಚಾರ ಕಾರ್ಯಗಳನ್ನು ಕೈಗೊಂಡು ಸಾಹಿತ್ಯ‌ ಸಮ್ಮೇಳಕ್ಕೆ ಆಹ್ವಾನಿಸಿ ಪ್ರತಿಯೊಬ್ಬರ ಮನೆ ಹಾಗೂ ಮನವನ್ನು ತಲುಪಬೇಕು ಎಂದರು.

ಕನ್ನಡದ ಹಬ್ಬದಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯ

ಬಹಳಷ್ಟು ಜನರು ಸಾಹಿತ್ಯ ಸಮ್ನೇಳನದ ಉದ್ಘಾಟನೆಗೆ ಆಗಮಿಸಿ ನಂತರ ಜಿಲ್ಲೆಯ ಪ್ರವಾಸಿ ತಾಣಕ್ಕೆ ತೆರಳಿ‌ ಸಮಾರೋಪ ಸಮಾರಂಭಕ್ಕೆ ಬರುತ್ತಾರೆ ಹಾಜರಾತಿ ಪ್ರಮಾಣ ಪತ್ರ ಪಡೆಯುತ್ತಾರೆ. ಇದು ದೂರದೃಷ್ಟಕರ ಸಂಗತಿ. ಕನ್ನಡದ ಹಬ್ಬದಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯ ಎಂದು ಅತ್ಮವಲೋಕನ‌ ಮತ್ತು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಕಳೆದ ಬಾರಿ ನಡೆದ ಕನ್ನಡ ಸಾಹಿತ್ಯ ‌ಸಮ್ಮೇಳನದಲ್ಲಿ ಸುಮಾರು 6 ಕೋಟಿ ರೂ ಮೊತ್ತದ ಪುಸ್ತಕ ‌ಮಾರಾಟವಾಗಿತ್ತು. ಇನ್ನೂ‌ ಹೆಚ್ಚಿನ ಪುಸ್ತಕ ಮಾರಾಟ ತಾಂತ್ರಿಕ ತೊಂದರೆಯಿಂದ ಆಗಲಿಲ್ಲ. ಈ ಬಾರಿ ವಿಶೇಷ ನಿಗಾ ವಹಿಸಿ ಯಾವುದೇ ತಾಂತ್ರಿಕ‌ ತೊಂದರೆಯಾಗದಂತೆ ಕನ್ನಡ ಪುಸ್ತಕ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ವಿವಿಧ ಇಲಾಖೆಗಳ ಮಾಹಿತಿ ಮಳಿಗೆಗಳ ಜೊತೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಸಹ ತೆರೆಯಲಾಗುವುದು‌. ವಾಣಿಜ್ಯ ಮಳಿಗೆಗಳಲ್ಲಿ ಯಾವುದೇ ಅಶ್ಲೀಲ ವಸ್ತು ಅಥವಾ ನಮ್ಮ ಸಂಸ್ಕೃತಿಗೆ ದಕ್ಕೆ ಬಾರದ ರೀತಿ ವ್ಯವಸ್ಥೆ ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಕಂಪನ್ನು ಎಲ್ಲ ಕಡೆ ಸಾರುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳಲ್ಲಿ ಕನ್ನಡ ಭಾಷೆಯಲ್ಲಿ ಸಂದೇಶಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಎಮರೈಟ್ಸ್ ಹಾಗೂ ಬ್ರಿಟಿಷ್ ಎರ್ ಲೈನ್ ಗಳಲ್ಲಿ ಸಂದೇಶ ಹಾಗೂ ಮೆನು ವಿನಲ್ಲೂ ಕನ್ನಡ ಭಾಷೆ ಬಳಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ಸಮ್ಮೇಳನದ ಯಶಸ್ಸಿಗೆ ಶ್ರಮಿಸಿ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20,21 ಹಾಗೂ 22 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವಲ್ಲ ಇದು ಪ್ರತಿಯೊಬ್ಬರ ಮನೆಯ ಕನ್ನಡದ ಹಬ್ಬ‌. ಇದರ ಯಶಸ್ಸಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಆಹ್ವಾನಿಸಲು ಗೀತೆ

ಸಮ್ಮೇಳನದ ಗೀತೆ ಬಿಡುಗಡೆ ಅಕ್ಟೋಬರ್ 23 ರಂದು ಸಾಹಿತ್ಯ ಸಮ್ಮೇಳನದ ಕಾರ್ಯಾಕಾರಿ ಸಮಿತಿ ಸಭೆ ನಡೆಯಲಿದ್ದು, ಅಂದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಲು ಗೀತೆ ಸಿದ್ಧಪಡಿಸುತ್ತಿದ್ದು, ಅಕ್ಟೋಬರ್ 23 ರಂದು ಬಿಡುಗಡೆ ಮಾಡಲಾಗಿದೆ. ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ 200 ರಿಂದ 300 ಮಕ್ಕಳು ನೃತ್ಯ ಪ್ರದರ್ಶನ ಮಾಡಲಿದ್ದಾರೆ ಎಂದರು.

ಪತ್ರ ಅಭಿಯಾನ ಹೊರ ರಾಜ್ಯ ಹಾಗೂ ದೇಶದಲ್ಲಿರುವ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ವಿದ್ಯಾರ್ಥಿಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಗೌರವಪೂರ್ವಕವಾಗಿ ಆಹ್ವಾನಿಸಿ ಶಿಕ್ಷಕರು ಪತ್ರ ಬರೆಯಿಸಿ ಎಂದರು.

ಟಿಕೇಟ್ ಗಳ ಮೇಲೆ ಆಹ್ವಾನ ಕೆ.ಎಸ್.ಆರ್.ಟಿ.ಸಿ ಟಿಕೇಟ್ ಗಳ ಮೇಲೆ, ನಂದಿನಿ ಹಾಲಿನ ಪ್ಯಾಕೇಟ್ ಗಳ ಮೇಲೆ, ವಿದ್ಯುತ್ ಬಿಲ್ ಗಳ ಮೇಲೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024 ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಬನ್ನಿ- ಭಾಗವಹಿಸಿ- ಯಶಸ್ವಿಗೊಳಿಸಿ ಎಂದು ಮುದ್ರಿಸಿ ಪ್ರಚಾರ ನೀಡುವಂತೆ ಪತ್ರ ಬರೆಯಲಾಗಿದೆ ಎಂದರು.

ಗ್ರಾಮ ಹಾಗೂ ಶಾಲಾ ಮಟ್ಟದಲ್ಲಿ ಪ್ರಚಾರ ಮಾಡಿ; ಡಾ.ಹೆಚ್.ಎಲ್. ನಾಗರಾಜು

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಕೆಲಸಗಳು ಗ್ರಾಮ ಮಟ್ಟದಲ್ಲಿ ನಡೆಯಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶಿಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಒಟ್ಟುಗೂಡಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಹೆಚ್ಚು ಜನರು ಸಾಹಿತ್ಯ ಸಮ್ಮೇಳನ ಹಾಗೂ ಸಮ್ಮೇಳನದ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಸಂಘಟಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಅವರು ತಿಳಿಸಿದರು.

ಸ್ಮರಣಾ ಸಂಚಿಕೆ ಶೀರ್ಷಿಕೆ ಸಲ್ಲಿಸಿ

ಸ್ಮರಣ ಸಂಚಿಕೆಗೆ ಶೀರ್ಷಿಕೆಯನ್ನು ಸಾರ್ವಜನಿಕರು ಲಿಖಿತ ರೂಪದಲ್ಲಿ ಪತ್ರದ ಮೂಲಕ ತಮ್ಮ ಹೆಸರು, ವಿಳಾಸದೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ತಲುಪಿಸಬೇಕು. ಆಯ್ದ ಅತ್ಯುತ್ತಮ ಶೀರ್ಷಿಕೆಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದರು.

ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ತಹಶಿಲ್ದಾರ್ ಶಿವಕುಮಾರ್ ಬಿರಾದರ್ , ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಸಂಚಾಲಕಿ ಡಾ: ಮೀರಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಪಟೇಲ್ ಪಾಂಡು, ಚಂದ್ರಲಿಂಗು, ಅಪ್ಪಾಜಪ್ಪ, ಹುಸ್ಕೂರು ಕೃಷ್ಣೇಗೌಡ, ಪದ್ಮಿನಿ ನಾಗರಾಜು ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!