Monday, October 21, 2024

ಪ್ರಾಯೋಗಿಕ ಆವೃತ್ತಿ

ಕ.ಸಾ.ಪ ಅಧ್ಯಕ್ಷನ ಹುಚ್ಚಾಟ ಮತ್ತು ಸರ್ವಾಧಿಕಾರಿಯ ವರ್ತನೆಗೆ ಕಡಿವಾಣ ಹಾಕುವವರು ಯಾರು ?

ಎನ್. ಜಗದೀಶ್ ಕೊಪ್ಪ, ಸಾಹಿತಿಗಳು

ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಡಿಸಂಬರ್ ತಿಂಗಳಿನಲ್ಲಿ ನಡೆಯಲಿರುವ 87 ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲಿ ಈ ಕುರಿತು ಸಮಾಲೋಚನೆಯ ಸಭೆಗಳು ನಡೆಯುತ್ತಿವೆ. ಇತ್ತೀಚೆಗೆ ನಾಲ್ಕೈದು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ಸಭೆಯಲ್ಲಿ ಕ.ಸಾ.ಪ. ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿದ ನಂತರ, ಅಲ್ಲಿನ ಮಾಜಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಪಿ.ಡಿ.ತಿಮ್ಮಪ್ಪ ಎಂಬುವರು ಮಾತನಾಡಿ, ಈ ಬಾರಿಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ಕೊಡುಗೆಯ ಕುರಿತು ವಿಚಾರಗೋಷ್ಟಿ ಇರಬೇಕು ಎಂದು ಹೇಳಿದರು. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂಬ ವ್ಯಕ್ತಿಯ ಉತ್ತರ ಹೀಗಿತ್ತು. ‘’ ನೀವು ಯಾರ ಬಳಿ ಮಾತನಾಡುತ್ತಿದ್ದೀರಾ ಎಂಬ ಪ್ರಜ್ಞೆ ಇದೆಯಾ? ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ನಾನು. ಕ.ಸಾ.ಪ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಇಪ್ಪತ್ತು ಮಂದಿಯ ಠೇವಣಿ ಕಳೆದು ಅಧ್ಯಕ್ಷನಾಗಿ ಆಯ್ಕೆಯಾದವನು ನಾನು’’ ಎಂದು ಉತ್ತರಿಸಿದ ವರದಿ ದಿನಪತ್ರಿಕೆಗಳಲ್ಲಿ ವರದಿಯಾಗಿದೆ.

ಈ ಮಹಾಶಯ ಮಂಡ್ಯ ನಗರಲ್ಲಿ ಕಳೆದ ತಿಂಗಳು ನಡೆದ ಸುದ್ದಿಗೋಷ್ಟಿಯಲ್ಲಿ ಇದೇ ಮಾತನ್ನು ಉಚ್ಚರಿಸಿದ್ದ ವೀಡಿಯೋ ದೃಶ್ಯವನ್ನು ಮಂಡ್ಯದ ಮಿತ್ರ ನನಗೆ ಕಳಿಸಿದ್ದರು. ಅಲ್ಲಿಯೂ ಸಹ ಕ.ಸಾ.ಪ. ಇತಿಹಾಸದಲ್ಲಿ ನಾನು ದಾಖಲೆ ನಿರ್ಮಿಸಿದ್ದೀನಿ. 65 ಸಾವಿರ ಮತಗಳಿಂದ ಜಯಗಳಿಸಿದ್ದೀನಿ. ರಾಜಕಾರಣಿಗಳು ಮತದಾರರಿಂದ ಆಯ್ಕೆಯಾದರೆ, ನಾನು ಕನ್ನಡಿಗರಿಂದ ಆಯ್ಕೆಯಾಗಿದ್ದೀನಿ ಎಂಬ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು.. ಈ ವ್ಯಕ್ತಿಯ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಜನಪ್ರತಿನಿಧಿಗಳಿಗೆ ಮತ ಹಾಕುವವ ಮತದಾರರು ಕೀಳು, ರಾಜಕಾರಣಿಗಳಿಗಿಂತ ತಾನು ಶ್ರೇಷ್ಟ ಎಂಬ ಭಾವನೆಯಿತ್ತು. ಇಂತಹ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಾದ ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಈ ವ್ಯಕ್ತಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ನಿಜಕ್ಕೂ ವಿಷಾಧನೀಯ ಸಂಗತಿ.

ಸಾಹಿತಿ ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲಾಡಳಿತಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ನಾನು ಕೇಳ ಬಯಸುವ ಪ್ರಶ್ನೆಗಳಿವು…

ಒಂದು- ಮೈಸೂರು ಸಂಸ್ಥಾನದ ಭಾಗವಾಗಿದ್ದ ಹಾಗೂ 1939 ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ ಮಂಡ್ಯ ಜಿಲ್ಲೆಯ ಇತಿಹಾಸ ಕುರಿತು ಸಮ್ಮೇಳನದಲ್ಲಿ ವಿಚಾರಗೋಷ್ಟಿ ಇರಬೇಕಲ್ಲವೆ? ಹಾಗಿದ್ದರೆ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಟಿಪ್ಪು ಸುಲ್ತಾನ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ಕುರಿತಾಗಿ ಉಪನ್ಯಾಸಗಳು ಇರಲೇ ಬೇಕು. ಇವುಗಳನ್ನು ಸಮ್ಮೇಳನದ ಗೋಷ್ಟಿಗಳಲ್ಲಿ ಅಳವಡಿಸಬೇಕು ಎಂದು ಹೇಳುವ ನೈತಿಕ ಶಕ್ತಿ ಅಥವಾ ಅಧಿಕಾರ ನಿಮಗೆ ಇದೆಯಾ? ಇಲ್ಲದಿದ್ದರೆ, ಕ.ಸಾ.ಪ. ಅಧ್ಯಕ್ಷನ ಅಡಿಯಾಳುಗಳಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೀವಿ ಎಂದು ನೀವೆಲ್ಲರೂ ಬಹಿರಂಗವಾಗಿ ಒಪ್ಪಿಕೊಳ್ಳಿ.

ಎರಡು- ಸರ್.ಎಂ.ವಿಶ್ವೇಶ್ವರಯ್ಯ ಮೈಸೂರು ದಿವಾನರಾಗಿದ್ದರು, ಕನ್ನಂಬಾಡಿ ಕಟ್ಟೆ ನಿರ್ಮಾಣ ಮಾಡಿದ ಇಂಜಿಯರ್ ಗಳಲ್ಲಿ ಅವರೂ ಸಹ ಒಬ್ಬರಾಗಿದ್ದರು. ಅದರ ಬಗ್ಗೆ ಯಾರಿಗೂ ಸಂಶಯವಿಲ್ಲ ಮತ್ತು ಅಗೌರವವಿಲ್ಲ. ಆದರೆ, ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಿ, ದಿವಾನ್ ಹುದ್ದೆಗೆ ರಾಜಿನಾಮೆ ನೀಡಿ ಹೋದರು. ನಂತರ ದಿವಾನ್ ಹುದ್ದೆಗೆ ಏರಿದ ನಾಲ್ವಡಿಯವರ ಬಾಲ್ಯದ ಸಹಪಾಠಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಅಗಣಿತವಾದುದು. ಅವರ ಸಾಧನೆ ಆ ಕಾಲಘಟ್ಟದಲ್ಲಿ ಇಡೀ ದೇಶದ ಸಂಸ್ಥಾನಗಳಿಗೆ ಹರಡಿತ್ತು. ರಾಜಸ್ತಾನದ ದೊರೆ ಜೈಪುರಕ್ಕೆ ಕರೆಸಿಕೊಂಡು ಜೈಪುರ ಸಂಸ್ಥಾನವನ್ನು ಅಭಿವೃದ್ಧಿ ಪಡಿಸಿದನು. ಇಂದು ಜೈಪುರದ ಮುಖ್ಯ ಅಂಚೆ ಕಚೇರಿ ಕಟ್ಟಡದ ಎದುರಿನ ರಸ್ತೆಗೆ ಮಿರ್ಜಾ ಇಸ್ಮಾಯಿಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಆ ರಸ್ತೆಯಲ್ಲಿ ಇಸ್ಮಾಯಿಲ್ ಅವರು ಮೈಸೂರು ಮತ್ತು ಬೆಂಗಳೂರಿನಿಂದ ಕರೆದುಕೊಂಡು ಹೋಗಿದ್ದ ಕಟ್ಟಡ, ರಸ್ತೆ ಮತ್ತು ಕಾಲುವೆ ನಿರ್ಮಾಣದ ಕಾರ್ಮಿಕರು ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದಾರೆ. ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆಯ ಬಗ್ಗೆ ಉಪನ್ಯಾಸ ಬೇಡವೆ?

ಮೂರು- ಇತ್ತೀಚೆಗೆ ಕಾಸರಗೋಡು ಜಿಲ್ಲಾಧ್ಯಕ್ಷ ನಿಧನ ಹೊಂದಿದ ಕಾರಣಕ್ಕಾಗಿ ಮೂರು ತಿಂಗಳಲ್ಲಿ ಅಲ್ಲಿಗೆ ಪರ್ಯಾಯ ಅಧ್ಯಕ್ಷನನ್ನು ನೇಮಕ ಮಾಡಲಾಯಿತು. ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮಂಡ್ಯ ಜಿಲ್ಲೆಯ ಅಧ್ಯಕ್ಷ ನಿಧನ ಹೊಂದಿ ಒಂದು ವರ್ಷವಾಯಿತು. ಈ ಜಿಲ್ಲೆಗೆ ಪರ್ಯಾಯ ಅಧ್ಯಕ್ಷನನ್ನು ಏಕೆ ನೇಮಕ ಮಾಡಿಲ್ಲ ? ಇದನ್ನು ಪ್ರಶ್ನಿಸುವ ಅಧಿಕಾರ ಅನುದಾನ ನೀಡುವ ಸರ್ಕಾರಕ್ಕೆ ಇಲ್ಲವೆ? ತಾನೇ ಎಲ್ಲಾ ಹೊಣೆಯನ್ನು ಹೊರಲು ರಾಜ್ಯ ಕ.ಸಾ.ಪ. ಅಧ್ಯಕ್ಷನಿಗೆ ಸಾಧ್ಯವೆ? ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಒಳನೋಟಗಳು, ಇಲ್ಲಿನ ಜನರ ಅಭಿರುಚಿ, ಭಾಷೆ ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತಾಗಿ ಹಾವೇರಿ ಜಿಲ್ಲೆಯ ಗೋವಿಂದ ಭಟ್ಟನ ಮರಿಮೊಮ್ಮಗ ಎಂದು ಹೇಳುವ ಈ ವ್ಯಕ್ತಿಗೆ ಏನು ಗೊತ್ತಿದೆ? ಈತನಿಗೆ ಸಂತ ಶಿಶುನಾಳನಿಗೆ ಇದ್ದ ಭಾವಕ್ಯತೆಯ ಪ್ರಜ್ಞೆ ಇದೆಯಾ?

ನಾಲ್ಕು- ನಾಡಿನ ಕನ್ನಡ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಿಗೆ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವಾಗ, ಜಿಲ್ಲೆಯ ಹಿರಿಯ ಸಾಹಿತಿಗಳ ಪೂರ್ವಭಾವಿಯಾಗಿ ಸಭೆ ಕರೆದು ಅವರ ಸಲಹೆ ಕೇಳಬೇಕು ಎಂಬ ಪ್ರಜ್ಞೆ ಏಕೆ ಮೂಡಲಿಲ್ಲ? ಆತ ಕೇಳಿದಷ್ಟು ಹಣ ನೀಡಲು ಮುಂದಾಗಿರುವ ಸರ್ಕಾರಕ್ಕೆ ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿಗಳು ಮತ್ತು ಬರಹಗಾರರಾಗಿ ಮೈಸೂರು ನಗರದಲ್ಲಿ ಪ್ರೊ. ಸಿ.ಪಿ.ಕೆ. ಪ್ರೊ.ರಾಮೇಗೌಡ, ಎಂ.ಕೃಷ್ಣೇಗೌಡ ಮತ್ತು ಬೆಂಗಳೂರು ನಗರದಲ್ಲಿ ನರಹಳ್ಳಿ ಬಾಲಸುಬ್ರಮಣ್ಯ, ಕೆ.ಸತ್ಯನಾರಾಯಣ, ನಾಗತಿಹಳ್ಳಿ ಚಂದ್ರಶೇಖರ, ಆಲೂರು ಚಂದ್ರಶೇಖರ್ ಹಾಗೂ ಶಿವಮೊಗ್ಗದಲ್ಲಿ ಬಿ.ಚಂದ್ರೇಗೌಡ ಹೀಗೆ ನನ್ನ ತಲೆಮಾರಿನ ಅನೇಕ ಬರಹಗಾರರಿದ್ದು ಅವರ ಸಲಹೆ ಪಡೆಯಬೇಕು ಎಂಬ ಕನಿಷ್ಟ ಪ್ರಜ್ಞೆಯಾದರೂ ಇರಬೇಕಿತ್ತಲ್ಲವೆ?

ಐದು- ಸಾಹಿತ್ಯ ಸಮ್ಮೇಳನಕ್ಕೆ ಹತ್ತು ಎಕರೆ ಜಾಗ ಸಾಕಾಗುವುದಿಲ್ಲ ಎಂದು ಹೇಳುವ ಈ ಮೂರ್ಖ ಶಿಖಾಮಣಿಗೆ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಐವತ್ತು ಎಕರೆ ಪ್ರದೇಶದ ಮೈದಾನ ಇದೆ? ಇಂದು ಮಂಡ್ಯದ ಸಮ್ಮೇಳನಕ್ಕೆ ನಗರದಿಂದ ಐದು ಕಿಲೋಮೀಟರ್ ದೂರದಲ್ಲಿ ಐವತ್ತು ಎಕರೆ ಕಬ್ಬನ್ನು ಕಡಿದು, ರೈತರಿಗೆ ಎರಡು ವರ್ಷದ ಪರಿಹಾರ ನೀಡಿ, ಕಬ್ಬಿನಗದ್ದೆಯಲ್ಲಿ ಐದು ಕೋಟಿ ಹಣವನ್ನು ಖರ್ಚು ಮಾಡಿ ವೇದಿಕೆ ನಿರ್ಮಾಣ ಮಾಡಲು ಬಳಸುವುದು ಮೂರ್ಖತನ ಎಂದು ರಾಜ್ಯ ಸರ್ಕಾರಕ್ಕೆ ಅನಿಸುತ್ತಿಲ್ಲವೆ? ಮಂಡ್ಯದ ಸರ್ಕಾರಿ ಕಾಲೇಜಿನ ಎದುರಿಗಿನ ಹನ್ನೆರೆಡು ಎಕರೆ ಮೈದಾನವನ್ನು ಅದರಲ್ಲೂ ವಿಶೇಷವಾಗಿ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಜಾಗವನ್ನು ನಿರಾಕರಿಸಿರುವ ಈತನ ಮಾತಿಗೆ ಕುಣಿಯುತ್ತಿರುವ ಮಂಡ್ಯ ಜಿಲ್ಲಾಡಳಿತಕ್ಕೆ ಬುದ್ದಿ ಹೇಳುವವರು ಯಾರು?

ಆರು- ಅಮೇರಿಕಾದಲ್ಲಿರುವ ವಿಶ್ವೇಶ್ವರಯ್ಯನವರ ಮೊಮ್ಮಗಳನ್ನು ಮಂಡ್ಯಕ್ಕೆ ಆಹ್ವಾನಿಸಿ ಸಮ್ಮೇಳನವನ್ನು ಉದ್ಘಾಟಿಸುವ ಅವಶ್ಯಕತೆ ಇತ್ತೆ? ಬೇಕಿದ್ದರೆ, ಮಂಡ್ಯದ ಜನತೆಯ ಪರವಾಗಿ ಆ ಪುಣ್ಯಾತ್ಮನ ಮೊಮ್ಮಗಳಿಗೆ ಅದ್ದೂರಿಯಾಗಿ ಸನ್ಮಾನ ಮಾಡುವುದರ ಜೊತೆಗೆ ಒಂದು ಲಕ್ಷ ರೂಪಾಯಿ ಮೌಲ್ಯದ ರೇಷ್ಮೆ ನೀಡಿ ಗೌರವಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಒಂದು ರೀತಿಯಲ್ಲಿ ವಿಶ್ವೇಶ್ವರಯ್ಯನವರಿಗೆ ಮಂಡ್ಯ ಜನರ ಋಣ ಸಂದಾಯ ಎಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೀವಿ.

ಸಮ್ಮೇಳನದ ಉದ್ಘಾಟನೆಗೆ ಮಂಡ್ಯ ಸಾಹಿತ್ಯ ಲೋಕದ ಮೇಲೆ ಅಪಾರವಾದ ಪ್ರಭಾವ ಬೀರಿರುವ ಕುವೆಂಪು ಅವರ ಪುತ್ರಿ ಅಥವಾ ಮೊಮ್ಮಕ್ಕಳು ಇಲ್ಲವೆ, ಶಿವರಾಮ ಕಾರಂತರ ಮೊಮ್ಮಕ್ಕಳು ಅಥವಾ ಮಂಡ್ಯ ನೆಲದ ಪು.ತಿ.ನ. ಅಥವಾ ಕೆ.ಎಸ್. ನರಸಿಂಹಸ್ವಾಮಿ ಮಕ್ಕಳು ಇಲ್ಲವೇ, ಮೊಮ್ಮಕ್ಕಳು ಇದ್ದಾರಲ್ಲವೆ? ಅವರನ್ನು ಕರೆಸಬಹುದು ಎಂದು ಹೇಳುವ ಕನಿಷ್ಠ ಜ್ಞಾನ ಮಂಡ್ಯದ ಸಾಹಿತಿಗಳಿಗೆ ಅಥವಾ ಜಿಲ್ಲಾಡಳಿತಕ್ಕೆ ಇಲ್ಲವೆ?

ಕ.ಸಾ.ಪ. ಅಧ್ಯಕ್ಷನಾಗಿರುವ ಮಹೇಶ್ ಜೋಶಿ ಗುರು ಗೋವಿಂದ ಭಟ್ಟನ ಮರಿಮೊಮ್ಮಗನೋ ಅಥವಾ ತಿರುಪತಿ ತಿಮ್ಮಪ್ಪನ ಮರಿಮೊಮ್ಮಗನೋ ಆಗಿರುವುದು ನಮಗೆ ಮುಖ್ಯವಲ್ಲ, ಸಾಹಿತ್ಯೇತರ ವ್ಯಕ್ತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವುದು ಹುಚ್ಚುತನದ ಮತ್ತು ಸರ್ವಾಧಿಕಾರದ ಪರಮಾವಧಿ. ಇದನ್ನು ರಾಜ್ಯದ ಯಾವ ಪ್ರಜ್ಞಾವಂತ ಕನ್ನಡಿಗನೂ ಒಪ್ಪುವುದಿಲ್ಲ. ಅದರ ಮುಂದಿನ ಪರಿಣಾಮ ಊಹಿಸಲೂ ಅಸಾಧ್ಯವಾಗಿದೆ. ತಾನು ಹೇಳಿದ್ದು ನಡೆಯಲೇಬೇಕು ಎನ್ನುವುದಾದರೆ, ಮಂಡ್ಯ ಜಿಲ್ಲೆಯ ಜನರ ಸಿಟ್ಟು ಬಹುತೇಕ ಮಂದಿಗೆ ತಿಳಿದಿಲ್ಲ. ಕೈಗೆ ಕಬ್ಬಿನ ಜೊಲ್ಲೆಯನ್ನು ತೆಗೆದುಕೊಂಡರೆ, ಮಂಗನ ಕುಣಿತವನ್ನು ಕುಣಿಸುತ್ತಾರೆ. ಮಂಡ್ಯದ ಜನರ ಬಾಯಲ್ಲಿ ಬರುವ ‘’ ಮನೆಯಲ್ಲಿ ಮುರಿಯುವುದು ಮುದ್ದೆ, ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮುರಿಯುವುದು ಮುದ್ದೆ’’ ಎಂಬ ಮಾತು ಕ.ಸಾ.ಪ. ಅಧ್ಯಕ್ಷನಿಗೆ ಗೊತ್ತಿಲ್ಲ.

ಈ ಕೂಡಲೇ ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಈ ಮನುಷ್ಯನ ಸರ್ವಾಧಿಕಾರಕ್ಕೆ ಕಡಿವಾಣ ಹಾಕುವುದರ ಮೂಲಕ ಹದ್ದು ಬಸ್ತಿನಲ್ಲಿಡಬೇಕು. ಕಸಾ.ಪ. ಸ್ವಾಯತ್ತತೆಯ ಸ್ವತಂತ್ರ ಸಂಸ್ಥೆ ಎನ್ನುವುದಾದರೆ, ರಾಜ್ಯ ಸರ್ಕಾರದ ಅನುದಾನವನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರದ ಅನುದಾನದಲ್ಲಿ ನಡೆಯುವ ಸಂಸ್ಥೆಗಳು ಸರ್ಕಾರ ನೀಡಬಹುದಾದ, ಸಾರ್ವಜನಿಕ ಹಿತಾಸಕ್ತಿಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದು ನೈತಿಕ ಬದ್ಧತೆ ಮತ್ತು ಕಡ್ಡಾಯವು ಹೌದು. ಮಂಡ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ಕೊಡುಗೆ ಕುರಿತ ಉಪನ್ಯಾಸ ಇಲ್ಲದಿದ್ದರೆ ಇದು ನನ್ನ ಮಿತ್ರ ಚಂದ್ರಕಾಂತ ವಡ್ಡು ಹೇಳಿದ ಹಾಗೆ ಅಖಲ ಭಾರತ ಕನ್ನಡ ಅಸಾಹಿತ್ಯ ಸಮ್ಮೇಳನವಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!