Thursday, November 19, 2026

ಪ್ರಾಯೋಗಿಕ ಆವೃತ್ತಿ

ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ : ಪ್ರೊ.ಚ.ಸರ್ವಮಂಗಳಾ

ಭಾಷೆಯ ಮೂಲಕ ಕಾವ್ಯ ಉಸಿರಾಡುತ್ತದೆ. ಆ ಮೂಲಕ ಕಾವ್ಯದಲ್ಲಿ ಬದುಕು ಸಹ ಉಸಿರಾಡುತ್ತದೆ. ಹಾಗಾಗಿ, ಕವಿಗಳು ಪದಗಳನ್ನು ದುಂದು ವೆಚ್ಚ ಮಾಡಬಾರದು. ಪದಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಚ. ಸರ್ವಮಂಗಳಾ ಕವಿಗಳಿಗೆ ಕಿವಿಮಾತು ಹೇಳಿದರು.

ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಸರಾ ಕವಿ- ಕಾವ್ಯ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾವ್ಯೋತ್ಸವ ಮತ್ತು ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾಷೆಯನ್ನು ಆಡಂಬರವಾಗಿ ಬಳಸಬಾರದು. ಅನುಭವನ್ನೇ ಕಾವ್ಯದ ಅಂಗಡಿಯಾಗಿ ಅಭಿವ್ಯಕ್ತಿಸಬೇಕು. ಮನಸ್ಸಿಗೆ ಹಿಂಸೆಯಾದರೂ ಸರಿ ಯಾವತ್ತಿಗೂ ಕಾವ್ಯದಲ್ಲಿ ಸತ್ಯವನ್ನೇ ಹೇಳಬೇಕು. ಕಾವ್ಯ ರಚನೆಯ ಅಗತ್ಯಕ್ಕೆ ಅನುಗುಣವಾಗಿ ಪದಗಳನ್ನು ಬಳಸಬೇಕು. ಆದರೆ, ಕೆಟ್ಟ ಮತ್ತು ಹೊಲಸು ಪದಗಳು ಬಳಸಿ ಭಾಷೆಯ ಅಂದವನ್ನು, ಸೌಂದರ್ಯವನ್ನು ಕೆಡಿಸಬಾರದು ಎಂದು ಅವರು ಹೇಳಿದರು.

ಕವಿಗಳು ಪದ ಬಳಕೆಯಲ್ಲಿ ಜಿಪುಣತನ ತೋರಿಸಬೇಕು. ಕವಿತೆ ಓದುಗರ ಎದೆಯೊಳಗೆ ಸದಾಶಯದ ಬೀಜ ಮೊಳೆಯುವಂತೆ ಪರಿಣಾಮಕಾರಿ ಆಗಿರಬೇಕು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಕೆಟ್ಟ ಭಾಷೆಯ ಪ್ರಯೋಗ ನಡೆದಿದೆ. ಇದು ವ್ಯಾಪಕವಾಗುತ್ತಿದೆ ಕೂಡ ಎಂದು ವಿಷಾದ ಅವರು, ಕಾವ್ಯದಲ್ಲಿ ಜೀವಂತ ಭಾಷೆ ಬಳಸಬೇಕು ಎಂದು ಯುವ ಕವಿಗಳಿಗೆ‌ ಕರೆ ನೀಡಿದರು.

ಭಾಷೆ ಎಂದೂ ಹೊಲಸಾಗಬಾರದು. ಅದು ಹೊಲಸದಾರೆ ದೇಶ, ಸಾಹಿತ್ಯ, ಸಂಸ್ಕೃತಿ, ಧರ್ಮ ಎಲ್ಕವೂ ನಾಶವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಭಾಷೆಯು ಕನ್ನಡ ಭಾಷೆಯ ಸೌಂದರ್ಯವನ್ನು ಮತ್ತು ಮನುಷ್ಯ ಬದುಕಿನಲ್ಲಿ ಅಳವಡಿಕೊಳ್ಳಬೇಕಾದ ಮೌಲ್ಯವನ್ನು ಸಾರುತ್ತದೆ ಎಂದು ಅವರು ತಿಳಿಸಿದರು.

ನಾವುಕೆಟ್ಟಕಾಲದಲ್ಲಿ ಬದುಕುತ್ತಿದ್ದೇವೆ. ಭಾಷೆಗೂ ಒಂದು ಧರ್ಮವಿದ್ದು, ಕೆಟ್ಟ ಭಾಷೆ ಮತ್ತು ಕೆಟ್ಟ ಪದ ಬಳಕೆಯ ಮೂಲಕ ಭಾಷಾಧರ್ಮವನ್ನು ನಾಶ ಮಾಡಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿದ ಅವರು, ಬದುಕು ಮತ್ತು ಅನುಭವ ಭಾಷೆಯಲ್ಲಿ ಶಬ್ದಚಿತ್ರವಾಗಿ ಬಂದಾಗ ಜೀವಂತ ಕಾವ್ಯ ಮೂಡುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಇಂದು ಪ್ರಪಂಚದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧವನ್ನು ನಿಲ್ಲಿಸುವ ಶಕ್ತಿ ಕಾವ್ಯಕ್ಕೆ ಇದೆ. ಹೀಗಾಗಿ, ಯುದ್ಧೋನ್ಮಾದಕ್ಕೆ ಪ್ರತಿರೋಧವಾಗಿ ಕವಿಗಳು ಕಾವ್ಯವನ್ನು ಕಟ್ಟಬೇಕು. ಆ ಮೂಲಕ ಬಂದೂಕು, ಮದ್ದು ಗುಂಡಿನ ಸದ್ದಡಗಿಸಲು, ಕಾವ್ಯವೇ ಮದ್ದುಗುಂಡುಗಳಾಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು, ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಸತೀಶ್, ಮಡಿಲು ಸೇವಾ ಟ್ರಸ್ಟ್ ಸಂಸ್ಥಾಪಕ ಅರಸು ಮಡಿಲು, ನಿವೃತ್ತ ಮುಖ್ಯ ಶಿಕ್ಷಕ ಯೋಗೇಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ. ಶಾಂತರಾಜು, ಪದಾಧಿಕಾರಿಗಳಾದ ಟಿ. ಲೋಕೇಶ್ ಹುಣಸೂರು, ಡಾ.ಡಿ.ಕೆ. ಉಷಾ, ಚಂದ್ರು‌ ಮಂಡ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ