ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಬೇಸಿಗೆ ಶಿಬಿರಗಳು ವರದಾನವಾಗಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹೇಮಗಿರಿ ಶಾಖೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ ಸೈ ಡ್ಯಾನ್ಸ್ ಶಾಲೆಯ ವತಿಯಿಂದ ಆಯೋಜಿಸಿದ್ದ 3ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ವ್ಯಕ್ತಿತ್ವವನ್ನು ವಿಕಸಿತಗೊಳಿಸಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಚಿಮ್ಮಿಸಲು ಮಕ್ಕಳ ಬೇಸಿಗೆ ಶಿಬಿರಗಳು ಸಂಜೀವಿನಿಯಾಗಿವೆ. ಮಕ್ಕಳು ನಾಲ್ಕು ಗೋಡೆಗಳ ಬಂಧನದಿಂದ ಹೊರ ಬಂದು ತಮಗಿಷ್ಠವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು, ಸೃಜನಶೀಲ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಸೈ ನೃತ್ಯ ಶಾಲೆಯ ವ್ಯವಸ್ಥಾಪಕರಾದ ಪೂಜಾ ಶಶಿಕುಮಾರ್ ದಂಪತಿಗಳು ಹಾಡು, ನೃತ್ಯ, ಯೋಗ, ಧ್ಯಾನ, ಸಾಂಸ್ಕೃತಿಕ ಚಟುವಟಿಕೆಗಳನ್ನು ತಜ್ಞರ ಮೂಲಕ ಸಂಯೋಜನೆ ಮಾಡಿಸಿ ಮಕ್ಕಳ ಮನಸ್ಸನ್ನು ಸಾಂಸ್ಕೃತಿಕವಾಗಿಯೂ ಗಟ್ಟಿಗೊಳಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ ಎಂದರು.
ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರ್ ಇಲ್ಲವೇ ಡಾಕ್ಟರ್ಗಳನ್ನಾಗಿ ಮಾಡಬೇಕೆಂಬ ಮನಸ್ಸನ್ನು ಬದಲಿಸಿ ಮಕ್ಕಳ ಆಸಕ್ತಿ ಹಾಗೂ ಇಚ್ಛೆಗೆ ಅನುಗುಣವಾಗಿ ಸಾಧನೆ ಮಾಡಲು ಬೇಸಿಗೆ ಶಿಬಿರಗಳು ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಮಕ್ಕಳ ಸಾಧನೆಯ ಪ್ರತಿಭೆಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿವೆ ಎಂದು ರಾಮಕೃಷ್ಣೇಗೌಡ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಂಪಾದಕರು ಹಾಗೂ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಉದ್ಯಮಿ ಬಿ.ರಾಜಶೇಖರ್, ಬಿಗ್ ಬಾಸ್ ಮೋಹನ್, ಉದ್ಯಮಿ ಅರವಿಂದ್ ಕಾರಂತ್, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.




