Tuesday, October 22, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಾತಿ ಜನಗಣತಿ ಅಂಗೀಕರಿಸಿ, ಅನುಷ್ಟಾನಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯದಲ್ಲಿಂದು ದಲಿತ ಸಂಘರ್ಷ ಸಮಿತಿಯಿಂದ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಅವರ ನೇತೃತ್ವದಲ್ಲಿ ಜಾತಿಗಣತಿ ವರದಿ ಅಂಗೀಕರಿಸಿ ತಕ್ಷಣವೇ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ದಲಿತ, ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ 50 ರಿಂದ ಶೇ 75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಯಿತು.

ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಮಾತನಾಡಿ ಇತ್ತೀಚೆಗೆ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸಿದ್ದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸುತ್ತದೆ ಎಂದರು.

ರಾಜ್ಯದ ಜನಸಂಖ್ಯೆಯ ಬಹು ಭಾಗವಾಗಿರುವ ಆದಿವಾಸಿಗಳು,ಅಲೆಮಾರಿ ಗಳು, ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಮುಂತಾದ ಶೋಷಿತ ಸಮುದಾಯಗಳು ಹಲವು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದವು. ಆದರೆ ಜಾತಿ ಕೇಂದ್ರಿತ ಪಕ್ಷ ರಾಜಕಾರಣವು ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದವು. ಇದರಿಂದಾಗಿ ಸಮಾಜದಲ್ಲಿ ಅಸಮಾನತೆಯ ಕಂದಕಗಳು ಮತ್ತಷ್ಟು ಹೆಚ್ಚಾಗುತ್ತಲೇ ಬರುತ್ತಿತ್ತು. ಈ ನಿಟ್ಟಿನಲ್ಲಿ ‘ಸಾಮಾಜಿಕ ನ್ಯಾಯ”ದ ಗುರಿಗಳನ್ನು ತಲುಪಲು ಕಾಲ ಕಾಲಕ್ಕೆ ಜಾತಿ ಜನಗಣತಿಯ ನಿಖರ ವಿವರಗಳನ್ನು ಆಧರಿಸಿ ಮೀಸಲಾತಿ ಹೆಚ್ಚಳ ಹಾಗೂ ಹಿಂದುಳಿದ ದುರ್ಬಲ ತಳಸಮುದಾಯಗಳ ಉನ್ನತಿಗಾಗಿ ಇನ್ನಿತರ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯ. ಈ ಕೊರತೆಯನ್ನು ತಮ್ಮ ಸರ್ಕಾರವು ನೀಗಿಸಲೊರಟಿರುವುದು ನಿಜಕ್ಕೂ ಅಭಿನಂದನಾರ್ಹವಾದುದು ಎಂದರು.

ಜಾತಿ ಜನಗಣತಿ ವರದಿ ಸ್ವೀಕಾರಗೊಂಡ ಕೂಡಲೇ ಕೆಲವು ಪಟ್ಟಭದ್ರ ಜಾತಿವಾದಿ ವ್ಯಕ್ತಿಗಳು ಹಾಗೂ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ತೀವ್ರ ಅಸಮಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿ. ಈ ಪಟ್ಟಭದ್ರ ಜಾತಿವಾದಿಗಳು ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದನ್ನು ದಸಂಸವು ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ‘ಸಾಮಾಜಿಕ ನ್ಯಾಯ’ ವಿರೋಧಿಯಾದ ಅಸಮಾಧಾನಗಳನ್ನು, ವಿರೋಧ ಪ್ರತಿಭಟನೆಗಳನ್ನು ತಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸದೆ ‘ಸಾಮಾಜಿಕ ನ್ಯಾಯ’ದ ಪರವಾಗಿ ದೃಢ ನಿಲುವು ತಾಳಬೇಕೆಂದು
ಮನವಿ ಮಾಡಿದರು.

ಈ ಜಾತಿ ಜನಗಣತಿ ವರದಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಈಗಿರುವ ಶೇ 50 ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ಕರ್ನಾಟಕ ರಾಜ್ಯದ ‘ಸಾಮಾಜಿಕ ನ್ಯಾಯ’ದ ಪರಂಪರೆಯನ್ನು ತಾವು ಮತ್ತು ತಮ್ಮ ಸರ್ಕಾರ ಮತ್ತೊಮ್ಮೆ ಎತ್ತಿ ಹಿಡಿದು ದೇಶಕ್ಕೇ ಮಾದರಿ ಆಡಳಿತ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹುಲ್ಕೆರೆ ಮಹದೇವ, ಕೆ ನಾಗರಾಜ್, ವೈ ರಾಜಶೇಖರ್, ಬಿ ಜೆ ನಾಗರಾಜ್, ಎಂ ಮಹದೇವಪ್ಪ, ಸೋಮಶೇಖರ್ ಹೆಚ್ ಪಿ, ಮಂಚಯ್ಯ ಚಂದ್ರಶೇಖರ್ ಮೊದಲಾದವರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!