Thursday, May 16, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಜಾಗದಲ್ಲಿ ಕಾಂಗ್ರೆಸ್ ಮುಖಂಡರು ಅಥವಾ ಮುಸ್ಲಿಮರು ಇದ್ದಿದ್ರೆ ಹಿಂಗೆ ಮಾಡ್ತಿದ್ರಾ !

ಜೆಡಿಎಸ್ ಯುವನಾಯಕ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಕುಟುಂಬವನ್ನು, ದೇವೇಗೌಡರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದು, ಕಾನೂನಿನ ಪ್ರಕಾರ ಹಾಗೂ ನೈತಿಕತೆಯ ಪ್ರಕಾರ ಸರಿಯಾಗಿದೆ.

ಏಕೆಂದರೆ ಪ್ರಜ್ವಲ್ ರೇವಣ್ಣ ಮಾಡಿರುವ ತಪ್ಪಿಗೆ ಪ್ರಜ್ವಲ್ ಮಾತ್ರವೇ ಹೊಣೆಗಾರನೇ ಹೊರತು, ಬೇರೆ ಯಾರು ಹೊಣೆಗಾರರಲ್ಲ. ಆದರೆ ಇದೇ ತರಹ ಯಾವುದಾದರೂ ‌ಅಪರಾಧ ಕೃತ್ಯದಲ್ಲಿ ಕಾಂಗ್ರೆಸ್ ನಾಯಕರು ಅಥವಾ ಮುಸ್ಲಿಂ ಯುವಕರು ಭಾಗಿಯಾಗಿದ್ದರೆ, ಆಗಲೂ ಕುಮಾರಸ್ವಾಮಿ ನಡೆ ಮತ್ತು ಮಿತ್ರಪಕ್ಷ ಬಿಜೆಪಿ ನಿಲುವು ಇದೇ ಆಗಿರುತ್ತಿತ್ತಾ ?

ಅದರಲ್ಲೂ ಈ ಪ್ರಕರಣದಲ್ಲಿ ಮುಸ್ಲಿಂ ಯುವಕ ಭಾಗಿಯಾಗಿದ್ದರೆ ಅವರ ಕುಟುಂಬ, ಸಮುದಾಯ‌ವನ್ನು ಬೀದಿಗೆ ತಂದು, ಎಲ್ಲರನ್ನೂ ಕ್ರಿಮಿನಲ್ ಗಳು, ಭಯೋತ್ಪಾದಕರು ಎನ್ನುವಂತೆ ಪ್ರತಿಪಾದಿಸುತ್ತಿದ್ದರು. ಅವರ ಕುಟುಂಬಕ್ಕೆ ಪ್ರಶ್ನೆ ಕೇಳುವವರು, ಕೃತ್ಯ ಮಾಡಿದ ವ್ಯಕ್ತಿಯ ಮನೆಗೆ ಬುಲ್ಡೋಜರ್ ನುಗ್ಗಿಸುವವರು ಕುಮಾರಸ್ವಾಮಿ ಅವರ ಅಭಿಪ್ರಾಯಕ್ಕೆ ಏನು ಹೇಳುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿರುತ್ತಿತ್ತು.

ಒಂದು ವೇಳೆ ಈ ಹಗರಣದಲ್ಲಿ ಕಾಂಗ್ರೆಸ್ ನಾಯಕನೊಬ್ಬ ಇದ್ದಿದ್ದಿರೆ ಇಷ್ಟು ಹೊತ್ತಿಗೆ ಮೀಡಿಯಾಗಳು ಹೇಗೆ ನಡೆದುಕೊಂಡಿರುತ್ತಿದ್ದವು ? ಇದರಲ್ಲಿ ಭಾಗಿಯಾದ ವ್ಯಕ್ತಿ ಮುಸ್ಲಿಂ ಆಗಿದ್ದರೆ ಮೀಡಿಯಾ ಹೇಗೆ ನಡೆದುಕೊಂಡಿರುತ್ತಿತ್ತು? ಒಂದು ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರದಿದ್ದರೆ ಮೀಡಿಯಾ ಮತ್ತು ಬಿಜೆಪಿಯ ನಡವಳಿಕೆ ಹೇಗಿರುತ್ತಿತ್ತು? ಒಂದು ವೇಳೆ ಪ್ರಜ್ವಲ್ ರೇವಣ್ಣ ಜಾಗದಲ್ಲಿ ದಲಿತ ಅಥವಾ ಹಿಂದುಳಿದ ಸಮುದಾಯದ ಮುಖಂಡರು ಇದ್ದಿದ್ದರೆ ಇವರೆಲ್ಲರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಎನ್ನುವ ಪ್ರಶ್ನೆಗಳಿಗೆ ಮೀಡಿಯಾಗಳೇ ಉತ್ತರಿಸಬೇಕಿದೆ…

ಬುಲ್ಡೋಜರ್ ಪ್ರೇಮಿಗಳಿಂದ ಮೌನವ್ರತ

ಮುಸ್ಲಿಂ ಸಮುದಾಯದ ಯುವಕರು ಎಲ್ಲಿಯಾದರೂ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ತಕ್ಷಣ ದಿಢೀರ್ ಎಂದು‌ ಪ್ರತ್ಯಕ್ಷವಾಗಿ ಬುಲ್ಡೋಜರ್ ನಿಂದ ಆರೋಪಿಯ ಮನೆಯನ್ನು ನಾಶ ಪಡಿಸಬೇಕು ಎಂದು ಆಗ್ರಹಿಸುವವರ ಸಂಖ್ಯೆ ದೊಡ್ಡದಾಗಿರುತ್ತಿತ್ತು.

ಆದರೆ ಈ ದೇಶದ ಅತ್ಯಂತ ದೊಡ್ಡ ಲೈಂಗಿಕ ದೌರ್ಜನ್ಯವಾದ ಪ್ರಜ್ವಲ್ ರೇವಣ್ಣನವರ ಮನೆಗೆ ಬುಲ್ಡೋಜರ್ ನುಗ್ಗಿಸಲು ಆಗ್ರಹಿಸುತ್ತಾರೆ ಎಂದರೆ, ಯಾರೂ ಸಹ ಇದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ತಿಪ್ಪೆ ಸಾರಿಸುತ್ತಿದ್ದಾರೆ.

ಇದೆ ರೀತಿ ಬಡವರು, ಸ್ಲಂ ಜನರು ಹಾಗೂ ಮುಸ್ಲಿಮರು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದಾಗ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ‌ ಎಂದು ಹೇಳಲು ಆದ್ಯಾವ ಶಕ್ತಿಗಳು ತಡೆಯುತ್ತವೆ ಎಂಬ ಚರ್ಚೆ ಇಂದು ಸಮಾಜದಲ್ಲಿ ಜೋರಾಗಿಯೇ ನಡೆಯುತ್ತಿದೆ.

ಪ್ರಜ್ವಲ್ ರೇವಣ್ಣ ಪರವಹಿಸಿ ಮಾತನಾಡುವವರೂ ಕೂಡ ಅವರ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಇದೇ ಪರಿಸ್ಥಿತಿ ಬಂದಿದ್ದರೆ, ಆಗಲೂ ಹೀಗೆ ಮಾತನಾಡುತ್ತಿದ್ದರೇ ಅಂತ ತಮ್ಮ ಆತ್ಮಸಾಕ್ಷಿಯನ್ನು ಕೇಳಿ ಕೊಳ್ಳಬೇಕಿದೆ‌‌. ಸಾವಿರಾರು ಹೆಣ್ಣುಮಕ್ಕಳ ಮಾನದ ಪ್ರಶ್ನೆ ಇದು. ಸರ್ಕಾರ ನಿರ್ದಾಕ್ಷಿಣ್ಯವಾಗಿ ಪ್ರಜ್ವಲ್ ಲೈಂಗಿಕ ಹಗರಣದ ಸಮಗ್ರ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂಬುದು ಮಹಿಳಾ ಪರ ಹೋರಾಟಗಾರರ ಆಗ್ರಹವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!