Wednesday, October 23, 2024

ಪ್ರಾಯೋಗಿಕ ಆವೃತ್ತಿ

ಕಿತ್ತೂರಿನ ರಾಣಿ ಚೆನ್ನಮ್ಮ; ವಿಜಯ ಪತಾಕೆ ಹಾರಿಸಿದ ಆ 200 ವರ್ಷಗಳ ಹಿಂದಿನ ಕಥನ…

ಕಿತ್ತೂರಿನ ರಾಣಿ ಚೆನ್ನಮ್ಮ, 23 ಅಕ್ಟೋಬರ್ 1778 ರಿಂದ 21 ಫೆಬ್ರವರಿ 1829…..

ವಿಜಯ ಪತಾಕೆ ಹಾರಿಸಿದ ಆ 200 ವರ್ಷಗಳ ಹಿಂದಿನ ಕಥನ……..

1824 ರಲ್ಲಿ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ವಿಜಯ ಸಾಧಿಸಿದ ಏಕೈಕ ಮಹಿಳೆ. ಅದಕ್ಕಿಗ 200 ವರ್ಷಗಳು…..

ಈ ಸಂದರ್ಭದಲ್ಲಿ ನಮ್ಮೆಲ್ಲರ ಮನಸ್ಸಿನಾಳದ ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮನನ್ನು ಕುರಿತು ಒಂದಷ್ಟು ನೆನಪಿನ ಅನಿಸಿಕೆಗಳು…..

ಈಗಲೂ ಶಾಲೆ, ಕಾಲೇಜುಗಳಲ್ಲಿ ಏಕಪಾತ್ರ ಅಭಿನಯ ಮಾಡಬೇಕಾದರೆ ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಮೊದಲು ಆಯ್ಕೆ ಮಾಡಿಕೊಳ್ಳುವ ಪಾತ್ರದ ಹೆಸರೇ ಕಿತ್ತೂರು ರಾಣಿ ಚೆನ್ನಮ್ಮ. ಅಷ್ಟರಮಟ್ಟಿಗೆ ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವದಲ್ಲಿ ಬಾಲ್ಯದಿಂದಲೂ ಕಿತ್ತೂರು ರಾಣಿ ಚೆನ್ನಮ್ಮ ಸಾಹಸದ, ಸ್ವಾತಂತ್ರ್ಯದ ಪ್ರತೀಕವಾಗಿ ನಮ್ಮಲ್ಲಿ ನೆಲೆಯೂರಿದ್ದಾರೆ…..

ನಿಜಕ್ಕೂ ಕಿತ್ತೂರು ರಾಣಿ ಚೆನ್ನಮ್ಮನನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸು 1800 ರ ಇಸವಿಯ ಆಸುಪಾಸಿನ ಭೌಗೋಳಿಕ, ಸಾಮಾಜಿಕ ಮತ್ತು ರಾಜಕೀಯ ಇತಿಹಾಸವನ್ನು ಗಮನಿಸಬೇಕಾಗುತ್ತದೆ, ಹಾಗೆಯೇ ಆ ಕಾಲದ ಆ ನೆಲೆಯಲ್ಲಿಯೇ ನಿಂತು ಯೋಚಿಸಬೇಕಾಗುತ್ತದೆ. ಇಲ್ಲದಿದ್ದರೆ ಇಂದಿನ ಮನಸ್ಥಿತಿಯಲ್ಲಿ ರಾಣಿ ಚೆನ್ನಮ್ಮ ಅರ್ಥವಾಗುವುದು ಕಷ್ಟ. ಹೆಚ್ಚೆಂದರೆ ಅವರ ಬಗ್ಗೆ ಮಾಹಿತಿ ಸಿಗಬಹುದಷ್ಟೇ. ಆದರೆ ಅರ್ಥವಾಗುವುದಿಲ್ಲ. ಏಕೆಂದರೆ ಮಹಿಳೆಯರ ಆಗಿನ ಪರಿಸ್ಥಿತಿ ತುಂಬಾ ಶೋಚನೀಯ ಎಂದೇ ಹೇಳಬೇಕು. ಗೌರವ, ಘನತೆಯ ದೃಷ್ಟಿಯಿಂದ ಭಾರತದಲ್ಲಿ ಮಹಿಳೆಯರಿಗೆ ಮಾನ್ಯತೆ ಕಡಿಮೆ ಏನಲ್ಲ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ ಅವರು ಪ್ರಾಮುಖ್ಯತೆ ಪಡೆಯುವುದಿಲ್ಲ.
ಕೇವಲ ಕೆಲವೇ ಕೆಲವು ಈ ರೀತಿಯ ಮಹಿಳೆಯರ ಉದಾಹರಣೆಗಳನ್ನು ಹೊರತುಪಡಿಸಿದರೆ ಬಹುತೇಕರು ಕೇವಲ ಕೌಟುಂಬಿಕ ಚೌಕಟ್ಟುಗಳಿಗೆ ಸೀಮಿತವಾಗಿದ್ದರು.

ಅಂತಹ ಕಾಲಘಟ್ಟದಲ್ಲಿ ರಾಣಿ ಚೆನ್ನಮ್ಮ ಅನಿವಾರ್ಯವಾಗಿ ಮತ್ತು ಅನಿರೀಕ್ಷಿತವಾಗಿ ಒಂದು ರಾಜ್ಯದ ಮುಖ್ಯ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಬೇಕಾದ ಗುತ್ತದೆ. ಅದನ್ನು ಆಕೆ ಧೈರ್ಯವಾಗಿ ಎದುರಿಸಿದ ರೀತಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಆಗಿನ್ನು ಬ್ರಿಟಿಷ್ ಸರ್ಕಾರ ಭಾರತದಲ್ಲಿ ನೇರವಾಗಿ ಆಡಳಿತ ಮಾಡುತ್ತಿರಲಿಲ್ಲ. ಈಸ್ಟ್ ಇಂಡಿಯಾ ಕಂಪನಿ ಎನ್ನುವ ಬ್ರಿಟಿಷ್ ಮೂಲದ ಕಂಪನಿ ಆಡಳಿತ ನಡೆಸುತ್ತಿತ್ತು. ಅದು ನಿಧಾನವಾಗಿ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಲೇ ಇತ್ತು. ತನ್ನ ಒಡೆದು ಆಳುವ ನೀತಿಯಿಂದ ದಕ್ಷಿಣದವರೆಗೂ ವ್ಯಾಪಿಸಿತು.

ಶಿವಾಜಿ ಸ್ಥಾಪಿಸಿದ್ದ ಮರಾಠ ಸಾಮ್ರಾಜ್ಯ ಬಹುತೇಕ ಅವನತಿಯ ಹಾದಿಯಲ್ಲಿತ್ತು. ಮೈಸೂರು ಸಂಸ್ಥಾನದ ವಿರುದ್ಧವೂ ಹೋರಾಟ ನಡೆಯುತ್ತಿತ್ತು. ಆ ಸಮಯದಲ್ಲಿ ಬ್ರಿಟಿಷರು ನಿಧಾನವಾಗಿ ಕಿತ್ತೂರಿನ ಪ್ರಾಂತ್ಯವನ್ನು ಆಕ್ರಮಿಸಲು ಪ್ರಯತ್ನಿಸುತ್ತಾರೆ. ಆಗ ಯುದ್ಧ ನಡೆದು ಕಿತ್ತೂರು ರಾಣಿ ಚೆನ್ನಮ್ಮ ಆಗಿನ ಬ್ರಿಟಿಷ್ ಸೈನ್ಯದ ಮುಖ್ಯ ಅಧಿಕಾರಿ ಸೆಂಟ್ ಜಾನ್ ಥ್ಯಾಕರೆಯ ಸೈನ್ಯವನ್ನು ಸೋಲಿಸಿ, ಅವನನ್ನು ಕೊಂದು ಅವರ ಸೈನ್ಯವನ್ನು ವಾಪಸ್ಸು ಕಳುಹಿಸುವುದು ಆಗಿನ ಕಾಲಕ್ಕೆ ಅಷ್ಟು ಸುಲಭವಾಗಿರಲಿಲ್ಲ. ಟಿಪ್ಪು ಸುಲ್ತಾನ್ ಮುಂತಾದ ಕೆಲವರು ಸಹ ಅದೇ ಕಾಲಕ್ಕೆ ಬ್ರಿಟಿಷರ ವಿರುದ್ಧ ಅಷ್ಟೇ ತೀವ್ರವಾಗಿ ಹೋರಾಡುತ್ತಿದ್ದರು. ಆದರೆ ಇವರಿಗೆಲ್ಲ ಬಲಿಷ್ಠವಾದ ಸೈನ್ಯದ ಬೆಂಬಲ ಇತ್ತು. ಆದರೆ ರಾಣಿ ಚೆನ್ನಮ್ಮನಿಗೆ ಆ ರೀತಿಯ ಅನುಕೂಲಗಳು ಇರಲಿಲ್ಲ. ಆದರೂ ಸಹ ಇದ್ದ ತನ್ನ ಸಣ್ಣ ಸೈನ್ಯದೊಂದಿಗೆ ಕೆಚ್ಚೆದೆಯ ಧೈರ್ಯ ಮತ್ತು ಸಾಹಸದಿಂದ ಹೋರಾಡಿದರು. ಆಗ ಆಕೆಗೆ ಅಷ್ಟೇ ಸಮರ್ಥವಾಗಿ, ಅತ್ಯಂತ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ, ಕೆಚ್ಚೆದೆಯ ಧೈರ್ಯದಿಂದ ಬೆನ್ನೆಲುಬಾಗಿ ನಿಂತು ಹೋರಾಡಿದ್ದು ಸಂಗೊಳ್ಳಿ ರಾಯಣ್ಣ. ಅವರನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಲೇ ಬೇಕು……

ಈ ಬಗ್ಗೆ ನೀವುಗಳು ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ನಾಟಕ, ಸಿನಿಮಾ ನೋಡುವುದನ್ನು ಬಿಟ್ಟು ನಿಜವಾದ ಕರ್ನಾಟಕದ ಅಧಿಕೃತ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಬೇಕು. ಅದು ಈ ಸಿನಿಮಾಗಳಿಗಿಂತ, ನಾಟಕಗಳಿಗಿಂತ ಅತ್ಯಂತ ರೋಚಕವಾಗಿರುತ್ತದೆ. ಏಕೆಂದರೆ ನಿಜಕ್ಕೂ ಬದುಕಿನ ಆಳದಲ್ಲಿ ಜೀವಿಸುವವರಿಗೆ ಸಿನಿಮೀಯತೆಯನ್ನು ಮೀರಿ, ಭಾವನೆಗಳನ್ನು ನಿಯಂತ್ರಿಸಿ ವಾಸ್ತವದ ಮುಖದ ಅರಿವಾಗುತ್ತದೆ……

ಈಗ ಚಿತ್ರಗಳಲ್ಲಿ ನೋಡುವಂತೆ ಕತ್ತಿ ಹಿಡಿದು, ಕಿರೀಟ ಧರಿಸಿ ಕಣ್ಣು ಅರಳಿಸಿ, ಕುದುರೆಯನ್ನೇರಿ ಯುದ್ಧ ಮಾಡುವುದು ಒಂದು ರೋಮಾಂಚನ ಅನಿಸಿದರೂ, ವಾಸ್ತವದಲ್ಲಿ ಅದು ಅತ್ಯಂತ ಸಾಹಸಭರಿತ, ಧೈರ್ಯವಂತ, ಸಾವಿಗೆ ಅಂಜದ, ದೇಶಪ್ರೇಮದ ಮಹೋನ್ನತ ಹೆಜ್ಜೆಯಾಗಿರುತ್ತದೆ. ಆ ಸಂದರ್ಭದ ಭಾವನೆಗಳನ್ನು ಹಿಡಿದಿಡಲು ಯಾವ ಭಾಷೆಯ ಯಾವ ಅಕ್ಷರಗಳಿಗೂ ಸಾಧ್ಯವಿಲ್ಲ. ಇನ್ನು ಕೃತಕ ದೃಶ್ಯಗಳಿಗೆ ಹೇಗೆ ಸಾಧ್ಯ. ಅದು ಅನನ್ಯತೆಯ ಆಂತರ್ಯದ ಪ್ರತಿಕ್ರಿಯೆ…..

ಈಗಿನ ಸಂದರ್ಭದಲ್ಲಿ ನಿಜಕ್ಕೂ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಚರ್ಚಿಸಬೇಕಾಗಿರುವುದು ಕಿತ್ತೂರಿನ ವಿಜಯೋತ್ಸವದ ಈ 200 ವರ್ಷಗಳ ಆ ಹೆಣ್ಣಿನ ಧೈರ್ಯ, ಸಾಹಸಗಳ ಮಾನಸಿಕ ಮತ್ತು ದೈಹಿಕ ಹೋರಾಟವನ್ನು‌. ಏಕೆಂದರೆ ಈ ಆಧುನಿಕ ಕಾಲದಲ್ಲಿ ಮಹಿಳೆ ಸಮಾನತೆ, ಸ್ವಾತಂತ್ರ್ಯ ಪಡೆದು ಆರ್ಥಿಕ ಸ್ವಾವಲಂಬನೆ, ಸ್ವಾಭಿಮಾನ ಸಾಧಿಸಿ ಬದುಕನ್ನು ರೂಪಿಸಿಕೊಳ್ಳುತ್ತಿರುವಾಗ ನಮಗೆ ಆದರ್ಶ ಆದರ್ಶವಾಗಬೇಕಾಗಿರುವುದು ಯಾವುದೋ ಸಿನಿಮಾ ನಟ ನಟಿಯರು ಅಥವಾ ದೊಡ್ಡ ದೊಡ್ಡ ಮಾಡೆಲ್ ಗಳು ಅಲ್ಲ. ನಿಜಕ್ಕೂ ಮಂಥನಕ್ಕೆ ಒಳಗಾಗಬೇಕಾಗಿರುವುದು ಸಾಂಪ್ರದಾಯಿಕ, ಕೌಟುಂಬಿಕ ಹಿನ್ನೆಲೆಯ ಸಾಮಾನ್ಯ ಮಹಿಳೆ ಸಹ ಹೇಗೆ ಧೈರ್ಯದಿಂದ ಬದುಕನ್ನು ಅನಿವಾರ್ಯ ಮತ್ತು ಅನಿರೀಕ್ಷಿತ ಆಘಾತಗಳಿಂದ ಚೇತರಿಸಿಕೊಂಡು ಮುಂದುವರಿಯಬೇಕೆಂಬುದು. ಮಹಿಳೆ ಕೇವಲ ಭೋಗದ ವಸ್ತುವಲ್ಲ, ಆಡಂಬರದ ಜೀವನವಲ್ಲ, ಸೌಂದರ್ಯದ ಖನಿಯಲ್ಲ. ಆಕೆ ತನ್ನ ಅಸ್ತಿತ್ವಕ್ಕಾಗಿ ಹುಲಿಯಂತೆ ಹೋರಾಡಿ
ಗೆಲ್ಲಬಹುದಾದ ಸಾಮರ್ಥ್ಯದ ಜೀವಿ ಎಂಬುದನ್ನು……

ಇದನ್ನು ಇಂದು ಸಮಾಜಕ್ಕೆ ನಾವು ತೋರಿಸಬೇಕಿದೆ ಮತ್ತು ಮನವರಿಕೆ ಮಾಡಿಕೊಡಬೇಕಿದೆ. ಕೇವಲ ಒಂದು ಪ್ರೇಮದ ವೈಫಲ್ಯಕ್ಕಾಗಿ, ಕೇವಲ ಒಂದು ಅನಿರೀಕ್ಷಿತ ದುಃಖಕ್ಕಾಗಿ, ಕೇವಲ ಆರ್ಥಿಕ ನಷ್ಟಕ್ಕಾಗಿ, ಒಂದು ಮಳೆಗೆ ಒಂದು ಬಿಸಿಲಿಗೆ ಒಂದು ಭೂಕಂಪ, ಸುನಾಮಿ, ಪ್ರವಾಹಕ್ಕಾಗಿ ಇಡೀ ಬದುಕೇ ಸರ್ವನಾಶವಾಯಿತು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಬದುಕನ್ನೇ ನಾಶಪಡಿಸಿಕೊಳ್ಳುವ ಮನಸ್ಥಿತಿಯ ಮಹಿಳೆಯರಿಗೆ ಮಾದರಿಯಾಗಿ ನಿಲ್ಲಬೇಕಾಗಿರುವುದು ಕಿತ್ತೂರು ರಾಣಿ ಚೆನ್ನಮ್ಮನಂತ ವ್ಯಕ್ತಿತ್ವ. ಅದರ ಬಗ್ಗೆ ನಾವೆಲ್ಲರೂ ಯೋಚಿಸಬೇಕಿದೆ…..

ಒಬ್ಬ ಐತಿಹಾಸಿಕ ವ್ಯಕ್ತಿ ನಮಗೆ ಪ್ರೇರಣೆಯಾಗಬೇಕಾಗಿರುವುದು ಅವರ ವ್ಯಕ್ತಿತ್ವದಿಂದಲೇ ಹೊರತು ಕೇವಲ ಮನರಂಜನೆಯು ಅಥವಾ ಒಂದು ಪಾತ್ರವಾಗಿಯಲ್ಲ. ಒಂದು ಬದುಕಿನ ಆದರ್ಶಗಳಾಗಿ. ಅದರಲ್ಲಿನ ಪ್ರಮುಖ ಗುಣಗಳು ನಮಗೆ ಮುಖ್ಯವಾಗಬೇಕು. ಇಂತಹ ಸಂದರ್ಭದಲ್ಲಿ ಇನ್ನೂರು ವರ್ಷಗಳ ಹಿಂದೆ ಜೀವಂತವಿದ್ದ, ಯುದ್ಧದಲ್ಲಿ ಹೋರಾಡಿ ಮಡಿದ ಕಿತ್ತೂರು ರಾಣಿ ಚೆನ್ನಮ್ಮ ನಮಗೆ ಈಗ ಮಾತ್ರವಲ್ಲ ಬದುಕಿನ ಸಂಕಷ್ಟದ ಸಮಯದಲ್ಲಿ, ಅನಿವಾರ್ಯವಾದ ಪರಿಸ್ಥಿತಿಯಲ್ಲಿ ಹೇಗೆ ನಾವು ಅಸಹಾಯಕರಾಗದೆ, ಧೈರ್ಯವಾಗಿ ಹೋರಾಡಬೇಕು ಎಂಬುದಕ್ಕೆ ಆಕೆ ಒಂದು ಮಾದರಿಯಾಗಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!