Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅನ್ನದಾನಿ ಹೇಳಿಕೆಗೆ ಕಾಂಗ್ರೆಸ್ ಮುಖಂಡರ ಖಂಡನೆ

ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಅಧಿಕಾರಿಗಳ ಬಗ್ಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅನಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಕೂಡಲೇ ಕ್ಷಮೆಯಾಚಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದರು.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನಡಿಯಲ್ಲಿ ಸೇವೆ ಸಲ್ಲಿಸುವ ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ, ತಾವು ಶಾಸಕರಾಗಿದ್ದ ಅವಧಿಯಲ್ಲಿ ನಿಮಗೂ ರಕ್ಷಣೆ ನೀಡಿದ್ದವರು ಪೊಲೀಸರೇ ಎನ್ನುವುದನ್ನು ಮರೆಯಬಾರದು, ಶಾಸಕರಿಗೆ ಬಕೆಟ್ ಹಿಡಿಯುತ್ತಾರೆ ಎಂಬ ಪದವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಹಿಂದಿನ ಅಧಿಕಾರದ ಅವಧಿಯಲ್ಲಿ ಜಡ್ಡು ಹಿಡಿದಿದ್ದ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ಹಾಲಿ ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ ಅವರು ಮಾಡುತ್ತಿದ್ದಾರೆ, ಸಾರ್ವಜನಿಕರ ಕೆಲಸಗಳು ಯಾವುದೇ ತೊಂದರೆ ಇಲ್ಲದೇ ನಡೆಯುತ್ತಿದೆ, ಮಾಜಿ ಶಾಸಕರು ಮನಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು, ಮುಂದುವರಿಸಿದರೇ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾ.ಪಂ ಮಾಜಿ ಉಪಾಧ್ಯಕ್ಷ ಮಾರ್ಕಾಲು ಸಿ.ಮಾಧು ಮಾತನಾಡಿ, ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಡಾ. ಕೆ.ಅನ್ನದಾನಿ ಶಾಸಕರಾಗಿದ್ದ ಅವಧಿಯಲ್ಲಿ ಮಳವಳ್ಳಿಯಿಂದಲೇ ಆರಂಭವಾಗಿತ್ತು, ಸರ್ಕಾರಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹೆಣ್ಣುಭ್ರೂಣ ಪತ್ತೆ ಮಾಡುತ್ತಿದ್ದ ಸ್ಕ್ಯಾನಿಂಗ್ ಸೆಂಟರ್‌ನ ಮಾಲೀಕರನ್ನು ಬಂಧಿಸಿದ್ದು, ಅನ್ನದಾನಿ ಅಧಿಕಾರದಲ್ಲಿರುವಾಗಲೇ ಎನ್ನುವುದನ್ನು ಮರೆಯಬಾರದು ಎಂದರು.

ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನವರು ಕೊಟ್ಟಿರುವ ಅಂಬೇಡ್ಕರ್ ಪುತ್ಥಳಿಯನ್ನು ಪಟ್ಟಣಕ್ಕೆ ತಂದು ಪ್ರತಿಷ್ಠಾಪಿಸಿದ ನೀವು ಕೊಟ್ಟವರನ್ನೇ ಕಾರ್ಯಕ್ರಮಕ್ಕೆ ಕರೆದಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ ಪಡೆದು ಗೆಲುವು ಪಡೆದ ನೀವು ದಲಿತ ಸಂಘಟನೆಗಳ ಪದಾಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ, ಕೂಡಲೇ ಕ್ಷೆಮೆಯಾಚಿಸಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ಆಸ್ಪತ್ರೆಯಲ್ಲಿ ನಡೆದ ಶಿಶು ಸಾವು ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಜೊತೆಗೆ ಶಾಸಕರು ಕೂಡ ನಿರ್ಲಕ್ಷ್ಯ ವಹಿಸಿರುವ ವೈದ್ಯರ ವಿರುದ್ದ ಶಿಸ್ತು ಕ್ರಮಕ್ಕೆ ಶೀಫಾರಸ್ಸು ಮಾಡಿದ್ದಾರೆ, ಮಾಜಿ ಶಾಸಕ ಡಾ. ಕೆ.ಅನ್ನದಾನಿ ಜನರು ಮರೆತು ಹೋಗುತ್ತಾರೆಂದು ಪದೇ ಪದೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನಗಳ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಮಳವಳ್ಳಿ ಜನರ ಮತ ಪಡೆದ ಎಚ್‌.ಡಿ ಕುಮಾರಸ್ವಾಮಿ ಮಳವಳ್ಳಿ ಕ್ಷೇತ್ರವನ್ನು ಅಭಿವೃದ್ದಿಪಡಿಸುವುದು ಅವರ ಕರ್ತವ್ಯವಾಗಿದೆ ಎನ್ನುವುದನ್ನು ಮಾಜಿ ಶಾಸಕರು ಮರೆಯಬಾರದು, ಕೇಂದ್ರ ಸಚಿವರಿಂದ ಏನೇನು ಅನುದಾನ ತಂದು ಅಭಿವೃದ್ದಿ ಪಡಿಸುತ್ತೀರೋ ಪಡಿಸಲಿ ಸ್ವಾಗತಿಸುತ್ತೇವೆ, ಆದರೇ ಶಾಸಕರನ್ನು ಆಗಿಂದಾಗ್ಗೆ ಟೀಕಿಸುವುದು ಸರಿಯಲ್ಲ, ನೀವು ಗೆದ್ದಾಗ 24 ಸಾವಿರ ಮತಕೊಟ್ಟು ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ, ನೀವು ಮನೆಯಲ್ಲಿ ಇರಿ ಎಂದು ನರೇಂದ್ರಸ್ವಾಮಿ ಅವರಿಗೆ ಹೇಳುತ್ತಿದ್ದೀರಿ, ಪ್ರಸ್ತುತದಲ್ಲಿ ನರೇಂದ್ರಸ್ವಾಮಿ ಅವರನ್ನು 46 ಸಾವಿರ ಮತಗಳಿಂದ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ, ಗೆದ್ದವರು ತಾಲ್ಲೂಕನ್ನು ಅಭಿವೃದ್ದಿಪಡಿಸುತ್ತಾರೆ, ನೀವು ಸುಮ್ಮನೆ ಮನೆಯಲ್ಲೀರಿ ಎಂದು ಕುಟುಕಿದರು.

ಗೋಷ್ಠಿಯಲ್ಲಿ ಮುಖಂಡರಾದ ಬಂಕ್ ಮಹದೇವು, ಕೃಷ್ಣಮೂರ್ತಿ, ರವೀಂದ್ರ ಜಯರಾಜು, ಕಿರಣ್‌ಶಂಕರ್, ಮಹದೇವು, ಪ್ರಮೀಳ, ವೇದಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!