Friday, October 25, 2024

ಪ್ರಾಯೋಗಿಕ ಆವೃತ್ತಿ

ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಜಟಾಪಟಿ | ಸಚಿವ ಝಮೀರ್ ಅಹ್ಮದ್ ಕಾರಿಗೆ ಕಲ್ಲೇಟು

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹುಲಗೂರಿನಲ್ಲಿ ಸಚಿವ ಝಮೀರ್ ಅಹ್ಮದ್ ಕಾರಿನ ಮೇಲೆ ಕೆಲ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಮತ್ತೋರ್ವ ಆಕಾಂಕ್ಷಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಅಜ್ಜಂಪೀರ್ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು.

ಅವರ ಮನವೊಲಿಸಲು ಸಚಿವರಾದ ಝಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮತ್ತು ವಕ್ಫ್ ಬೋರ್ಡ್‌ ಅಧ್ಯಕ್ಷ ಅನ್ವರ್ ಭಾಷಾ ತೆರಳಿದ್ದರು. ಈ ವೇಳೆ ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಝಮೀರ್ ಕಾರಿನ ಮೇಲೆ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ.

ಬೈಕಿನಲ್ಲಿ ಬಂದು ಖಾದ್ರಿ ನಾಮಪತ್ರ ಸಲ್ಲಿಕೆ

ಸಚಿವರಾದ ಝಮೀರ್ ಅಹ್ಮದ್ ಮತ್ತು ರಹೀಂ ಖಾನ್ ನೇತೃತ್ವದಲ್ಲಿ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಕೆಗೆ ಯತ್ನಿಸಿದರೂ ಅದು ವಿಫಲವಾಗಿದೆ. ಖಾದ್ರಿ ಅವರು ಕೊನೆಯ ಕ್ಷಣದಲ್ಲಿ ಚುನಾವಣಾಧಿಕಾರಿಯ ಕಚೇರಿಗೆ ಬೈಕಿನಲ್ಲಿ ದೌಡಾಯಿಸಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

ಯಾಸೀರ್ ಅಹ್ಮದ್ ಖಾನ್ ನಾಮಪತ್ರ ಸಲ್ಲಿಕೆ

ಗೊಂದಲಗಳ ನಡುವೆ ಎಐಸಿಸಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾಗಿರುವ ಯಾಸೀರ್ ಅಹ್ಮದ್ ಖಾನ್ ಪಠಾಣ್ ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಬಿನ್ನಾಭಿಪ್ರಾಯ ಇಲ್ಲ ನಾವೆಲ್ಲರೂ ಈ ಮೊದಲೇ ಜನತಾ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿದ್ದೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದೆ. ಕಾಂಗ್ರೆಸ್‌ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಒಲವು ಇದೆ. ಕಳೆದ ನಾಲ್ಕು ತಿಂಗಳಿನಿಂದ ಕ್ಷೇತ್ರದಲ್ಲಿ ನಿರಂತರ ಸುತ್ತಾಟ ನಡೆಸಿದ್ದೇನೆ” ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!