Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಮಂಡ್ಯದ ಹೃದಯಭಾಗವಾದ ನೂರಡಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಬೇಜಾವಾಬ್ದಾರಿಯಿಂದಾಗಿ ಹಲವು ಮರಗಳ ಮಾರಣಹೋಮ ನಡೆದಿರುವುದನ್ನು ಮಂಡ್ಯದ ವಿವಿಧ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ಒಕ್ಕೊರಲಿನಿಂದ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ಧಾರೆ.

ಈ ಬಗ್ಗೆ ನುಡಿಕರ್ನಾಟಕ.ಕಾಂ ನೊಂದಿಗೆ ಮಾತನಾಡಿರುವ ವಿವಿಧ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ಧಾರೆ.

ಮಾಲ್ ಕಾಣ್ತಿಲ್ಲ ಅಂತ ಕಡಿಯೋದು ನಾಚಿಗೆಗೇಡು

ಹರವು ದೇವೇಗೌಡ

ನೂರಡಿ ರಸ್ತೆಯಲ್ಲಿ ಯಾವುದೋ ಒಂದು ಮಾಲ್ ಕಾಣ್ತಿಲ್ಲ ಎಂದು ಮರಗಳನ್ನು ಕಡಿದಿರುವುದು ನಾಚಿಕೆಗೇಡಿನ ಸಂಗತಿ. ಕನಿಷ್ಟ ಅಲ್ಲಿ ಓಡಾಡುವ ನಾಗರೀಕರು, ಇದನ್ನು ತಡೆದು ಮರಗಳ ರಕ್ಷಣೆ ಮಾಡಬೇಕಿತ್ತು. ಪರಿಸರ ರಕ್ಷಣೆಯಲ್ಲಿಯೂ ಬೌದ್ದಿಕ ದಾರಿದ್ರ್ಯ ಕಾಡುತ್ತಿರುವುದು ಸರಿಯಲ್ಲ, ಇಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಂಡರುದಾರನು ಶಾಮೀಲಾಗಿದ್ದಾನೆ, ಇಬ್ಬರ ಮೇಲೂ ಕ್ರಮವಾಗಬೇಕು.

ಹರವು ದೇವೇಗೌಡ, ಪರಿಸರ ಪ್ರೇಮಿ

 


ಸಮನ್ವಯದ ಕೊರತೆಯಿಂದ ಅನಾಹುತ

ಮಂಗಲ ಯೋಗೇಶ್

ಮಂಡ್ಯನಗರಸಭೆ, ಅರಣ್ಯ ಇಲಾಖೆ, ಸೆಸ್ಕ್ ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಇಂತಹ ಅನಾಹುತ ಸಂಭವಿಸಿದೆ. ಮರಗಳನ್ನು ಕಡಿದಿರುವುದನ್ನು ನೋಡಿದರೆ ಅಲ್ಲಿ ಜೀವಸೆಲೆಯ ಉಳಿದಿಲ್ಲ, ರಸ್ತೆಗೆ ಬಂದಿರುವ ಕೊಂಬೆಗಳನ್ನು ಕಡಿಯುವುದಕ್ಕೆ ಅಭ್ಯಂತರವಿಲ್ಲ, ಆದರೆ ಇಡೀ ಮರವನ್ನೇ ಬೋಳು ಮಾಡಿರುವುದು ಸರಿಯಲ್ಲ.

-ಮಂಗಲ ಯೋಗೇಶ್, ಪರಿಸರ ರೂರಲ್ ಡೆವಲಪ್ ಮೆಂಟ್ ಸಂಸ್ಥೆ

ಮರ ಕಡಿಯುವ ಮಾಫಿಯಾ

ಮಂಡ್ಯದಲ್ಲಿ ಮಾತ್ರವಲ್ಲ ಎಲ್ಲ ಕಡೆ ಮರ ಕಡಿಯುವ ಮಾಫಿಯಾ ಕೆಲಸ ಮಾಡುತ್ತಿದೆ, ಟೆಂಡರುದಾರರೊಂದಿಗೆ ಅಧಿಕಾರಿಗಳು ಇಲ್ಲಿ ಶಾಮೀಲಾಗಿರುತ್ತಾರೆ. ಒಂದೆರಡು ಮರಗಳನ್ನು ಕಡಿಯಲು ಸೂಚಿಸಿದರೆ, ಹತ್ತಾರು ಮರಗಳನ್ನು ಕಡಿದು ಉರುಳಿಸಲಾಗುತ್ತಿದೆ. ಯಾವುದೇ ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕವಾಗಿ ಕರಪತ್ರ ಹಂಚಬೇಕು, ಅಲ್ಲದೇ ಪತ್ರಿಕೆಗಳನ್ನು ಪ್ರಕಟಣೆ ಹೊರಡಿಸಬೇಕು. ಆದರೆ ಇಲ್ಲಿ ಈ ಕ್ರಮಗಳು ಆಗಿಲ್ಲ. ಶ್ರೀರಂಗಪಟ್ಟಣದಲ್ಲೂ ಜಂಬೂಸವಾರಿ ನಡೆಯುವ ಮಾರ್ಗದಲ್ಲಿ 50 ಅಡಿ ಎತ್ತರದ ಮರಗಳ ಕೊಂಬೆಗಳನ್ನು ಕತ್ತರಿಸಲಾಗಿತ್ತು, ಅದರ ಜೊತೆಗೆ ಯಾವುದೇ ತೊಂದರೆಯನ್ನು ಕೊಡದ ಕೊಂಬೆಗಳನ್ನು ಕಡಿಯಲಾಗಿತ್ತು ಇದೊಂದು ದೊಡ್ಡ ಮಾಫಿಯಾವಾಗಿದೆ. ನೂರಡಿ ರಸ್ತೆಯ ಮರಗಳು 70 ರಿಂದ 80 ವರ್ಷಗಳಷ್ಟು ಹಳೆಯದಾದ ಮರಗಳು, ಈಗ ಅವುಗಳನ್ನು ಕಡಿಯಲಾಗಿದೆ, ಆ ಮರಗಳು ಚೇತರಿಸಿಕೊಳ್ಳಲು ಮೂರ್‍ನಾಲ್ಕು ವರ್ಷಗಳು ಬೇಕು, ಈ ಮರಗಳನ್ನು ಆಶ್ರಯಿಸಿದ್ದ ಪಕ್ಷಿಗಳು ಎಲ್ಲಿ ಹೋಗಬೇಕು, ಮರಗಳನ್ನು ಯಾವ ಪ್ರಕಟಣೆ ನೀಡಿ ಕಡಿಯಲಾಗಿದೆ ಎಂದು ಪ್ರಶ್ನೆ ಮಾಡಬೇಕಾಗಿದೆ, ಇದರ ವಿರುದ್ದ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಬೇಕಾಗುತ್ತದೆ ಎಂದರು.

                                                             –  ರಮೇಶ್, ಪರಿಸರಪ್ರೇಮಿ ಶ್ರೀರಂಗಪಟ್ಟಣ

ಮರಗಳೊಂದಿಗೆ ಬದುಕುತ್ತಿದ್ದ ನನಗೆ ಆಘಾತ

ಅರವಿಂದ ಪ್ರಭು

ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವ ಮುನ್ನ ಇದೇ ಮರದ ಕೆಳಗೆ ನಿಂತು ಹೋಗಿದ್ದೆ, ಮುಂಜಾವಿಗೆ ವಾಕಿಂಗ್ ಬರುವಷ್ಟರಲ್ಲಿ ಮರ ಸಂಪೂರ್ಣವಾಗಿ ರಂಬೆ ಕಂಬಗಳಿಲ್ಲದೆ ಬೋಳು ಬೋಳಾಗಿ ನಿಂತಿತ್ತು, ಮರಕಟುಕರ ಮಷೀನ್ ಗಳು ಸದ್ದು ಮಾಡುತ್ತಿದ್ದವು, ಹಲವು ವರ್ಷಗಳಿಂದ ಇದೇ ಮರಗಳೊಂದಿಗೆ ಬದುಕುತ್ತಿದ್ದ ನನಗೆ ಆಘಾತವಾಯಿತು. ಕೈ ಕಾಲು ರುಂಡಗಳಿರದ ದೇಹದಂತೆ ಕಂಡಿತು. ಅರಣ್ಯ ಇಲಾಖೆ ಮರಗಳ ಪೋಷಣೆ ಮಾಡಬೇಕೆ ಹೊರತು ಕೊಲ್ಲಬಾರದು.

-ಅರವಿಂದ ಪ್ರಭು ಮುಖ್ಯಸ್ಥರು ಚಿತ್ರಕೂಟ

ಪರಿಸರದ ಸುಂದರತೆಯನ್ನೇ ಕುರೂಪಗೊಳಿಸಿದ್ದಾರೆ

ಬಿ.ಟಿ.ವಿಶ್ವನಾಥ್

ಈಗ ಪಕ್ಷಿಗಳು ಸಂತತಿ ಬೆಳೆಸಿಕೊಳ್ಳಲು ಗೂಡು ಕಟ್ಟುವ ಕಾಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಟೆಂಡರ್‌ದಾರನ ದುರಾಸೆ ಮೂಕಪಕ್ಷಿಗಳ ಆವಾಸಸ್ಥಾನವನ್ನೇ ಕಿತ್ತುಕೊಂಡಿದೆ. ಮತ್ತೆ ಮರ ಚಿಗುರಲು ಕನಿಷ್ಠ ಎರಡು ವರ್ಷಗಳು ಬೇಕು. ಅಲ್ಲಿಯತನಕ ಇಲ್ಲಿ ಗಿಳಿ, ಕೋಗಿಲೆಗಳ ಸದ್ದು ಕೇಳಿಸುವುದಿಲ್ಲ. ಮುಂಬರುವ ಬೇಸಿಗೆಯಲ್ಲಿ ಮರಗಳ ನೆರಳು ನೂರಡಿ ರಸ್ತೆಯಲ್ಲಿ ಇರುವುದಿಲ್ಲ. ಅರಣ್ಯ ಇಲಾಖೆಯು ಸಾರ್ವಜನಿಕವಾಗಿ ಬಾರಿ ವಾಹನಗಳಿಗೆ ತೊಂದರೆಯಾಗುವ ಮರದ ಕೊಂಬೆಗಳನ್ನು ಕಡಿಯಲು ಮಾತ್ರ ಅನುಮತಿಸಿತ್ತು. ಆದರೆ ರಸ್ತೆ ಬರಿಯ ಬಹುತೇಕ ಎಲ್ಲ ಮರದ ಕೊಂಬೆಗಳನ್ನು ಕಡಿಯಲಾಗಿದೆ ಅಲ್ಲದೇ ಟೆಂಡರುದಾರನೊಂದಿಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಜನರಿಗೆ ನೆರಳು ನೀಡುತ್ತಿದ್ದ ಮರಗಳ ಮಾರಣ ಹೋಮ ನಡೆಸಿದ್ದಾರೆ.

– ಬಿ.ಟಿ.ವಿಶ್ವನಾಥ್, ಪ್ರಗತಿಪರ ವಕೀಲರು

ಅಧಿಕಾರಿಗಳ ಲಾಭಿ

ಪ್ರೊ.ಸತ್ಯಮೂರ್ತಿ

ಮರ ಕಡಿತದ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಲಾಭಿಗೆ ಒಳಗಾಗಿದ್ದಾರೆ. ರಸ್ತೆಯಲ್ಲಿ ಓಡಾಡುವ ಕಬ್ಬಿನ ಲಾರಿಗಳಿಗೆ ಅಡ್ಡಿಯಾಗುತ್ತಿದ್ದ ಕೊಂಬೆಗಳನ್ನು ಕಡಿದಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಆಗಿದ್ದರೆ ಬೆಳಗಿನ ಜಾವ 6 ಗಂಟೆಗೆ ಬಂದು ಮರಗಳನ್ನು ಕಡಿಯವ ಅವಶ್ಯಕತೆ ಏನಿತ್ತು. ಎಲ್ಲ ಕೊಂಬೆಗಳನ್ನು ಕಡಿದುರುಳಿಸಲಾಗಿದೆ. ಇದರ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಟೆಂಡರುದಾರರ ಲಾಭಿ ಇದೆ, ಇಬ್ಬರ ಮೇಲೂ ಕ್ರಮವಾಗಬೇಕು

– ಪ್ರೊ.ಸತ್ಯಮೂರ್ತಿ, ಕೆಂಪೇಗೌಡ ಒಕ್ಕಗಲಿರ ಕ್ಷೇಮಾಭಿವೃದ್ದಿ ಸಂಘ,ಮಂಡ್ಯ

ಅರಣ್ಯ ಸಂಪತ್ತಿನ ವ್ಯವಸ್ಥಿತ ಲೂಟಿ

ನಾಗಣ್ಣಗೌಡ

ತನ್ನ ವಿಸ್ತಾರವನ್ನೆ ಜನರ ಬಾಯಲ್ಲಿ ತನ್ನ ಹೆಸರಾಗಿಸಿಕೊಂಡದ್ದು ಮಂಡ್ಯದ ಜನಪ್ರಿಯ ನೂರಡಿ ರಸ್ತೆ. ಮಂಡ್ಯ ನಗರದಿಂದ ಮೈಸೂರು ಜಿಲ್ಲೆಯ ಬನ್ನೂರು ಸಂಪರ್ಕಿಸುವ ಈ ರಸ್ತೆ ಮಂಡ್ಯದ ಅರಸು ರಸ್ತೆ ಇದ್ದಂತೆ, ಮೈಸೂರಿನ ಅರಸು ರಸ್ತೆಗಿಂತಲೂ ಇದು ವಿಶಾಲವಾಗಿದೆ. ರಸ್ತೆ ಬದಿಯ ಸಾಲು ಮರಗಳು ಸೃಷ್ಟಿಸಿದ ನೆರಳಿನ ತೋಪು ಈ ರಸ್ತೆಗೆ ಮೆರಗು ಹೆಚ್ಚಿಸಿತ್ತು. ಅರಣ್ಯ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಹೊಡೆಯಲು..ಬ್ರಿಟಿಷರಂತೆ ದೋಚುವ ಆಶಯವನ್ನು ನಮ್ಮ ಅರಣ್ಯ ಇಲಾಖೆ ಇಂದು ಚಾಚೂತಪ್ಪದೆ ಅನುಚಾನವಾಗಿ ಪಾಲಿಸಿದೆ. ಅಧಿಕಾರಿಗಳಿಗೆ ನಾಚಿಕೆಯಾಗಬೇಕು.

-ಎಂ.ಬಿ. ನಾಗಣ್ಣಗೌಡ, ಕರುನಾಡ ಸೇವಕರು

ಅರಣ್ಯ ಇಲಾಖೆಯ ನಿರ್ಲಕ್ಷ್ಯ

ಪೂರ್ಣಿಮ, ಕರ್ನಾಟಕ ಜನಶಕ್ತಿ

ನೂರಡಿ ರಸ್ತೆಯಲ್ಲಿ ಇದ್ದ ಮರಗಳನ್ನು ಅವೈಜ್ಞಾನಿಕವಾಗಿ  ಮನಸೋ ಇಚ್ಚೆ ಕತ್ತರಿಸಿ ಬಿಸಾಡಿರುವುದು ಅರಣ್ಯ ಅಧಿಕಾರಿಗಳ‌ ಬೇಜವಾಬ್ದಾರಿ ತನವನ್ನು ತೋರುತ್ತದೆ. ಪರಿಸರ ಸಂರರಕ್ಷಣೆಗಾಗಿ ಒಂದು ಮರ ಕಡಿದರೆ ಬದಲಿಗೆ ಎರಡು ಸಸಿ ನೆಟ್ಟು ಪರಿಸರ ಕಾಪಾಡಬೇಕು ಎನ್ನುವ ಕಾಲದಲ್ಲಿ ಇರುವ ಮರಗಿಡಗಳನ್ನು ನಾಶ ಮಾಡಿ ವ್ಯಾಪಾರ ವಹಿವಾಟು ನಡೆಸುವ ಮಾಲ್ ಗಳಿಗೆ ಅದರ ಮಾಲೀಕರಿಗೆ ಅನುಕೂಲ ಮಾಡಿ ಕೊಡುವ ಭರದಲ್ಲಿ ಮಂಡ್ಯದ ಪರಿಸರವನ್ನು ಹಾಳು ಮಾಡಲು ಮುಂದಾಗಿರುವುದು ಖಂಡನೀಯ. ಅಲ್ಲದೆ ಹಿಂದೆ ಮರಗಳು ಒಣಗಿ ಕರೆಂಟ್ ಕಂಬಗಳ ಮೇಲೆ ಓಡಾಡುವ ಸಾರ್ವಜನಿಕರ ವಾಹನಗಳ ಮೇಲೆ ಬಿದ್ದು ಸಾವು ನೋವು ಸಂಭವಿಸಿದ ಕಾಲದಲ್ಲಿ ಒಣಗಿದ ಮರಗಳನ್ನು ಕಡಿದು ಅವ್ಯವಸ್ಥೆಯನ್ನು ಸರಿಪಡಿಸಲಾಗದೆ ಇದ್ದ ಪರಿಸ್ಥಿತಿಯನ್ನು ನಾವು ಗಮನಿಸಿದ್ದೇವೆ.

ಆದರೆ ಈಗ ಹಸಿರಾಗಿದ್ದ ಮರಗಳ ಮಾರಣ ಹೋಮ ನಡೆಸಿ ಮಂಡ್ಯನಗರದ ಪರಿಸರದ ಸುಂದರತೆಯನ್ನೆ ಕುರೂಪಗೊಳಿಸಿದ್ದಾರೆ, ಅಲ್ಲದೆ ಅರಣ್ಯ ಅಧಿಕಾರಿಗಳು ಬರುವ ಮುಂಚೆಯೇ ಟೆಂಡರ್ ದಾರ ಈ ಮಟ್ಟದ ದಾರ್ಷ್ಟ್ಯ ತೋರಲು ಅಧಿಕಾರ ಕೊಟ್ಟವರಾರು ? ಸಂಪೂರ್ಣ ಹಾಳಾದ ನಂತರ ಕ್ರಮ ಮಹಿಸಿದರೆ ಮರಗಳನ್ನು ನಾಳೆ ಬೆಳಿಗ್ಗೆ ಎತ್ತಿ ನಿಲ್ಲಿಸಲು ಸಾಧ್ಯವೇ..? ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಾಗದು ಎಂದಾದ ಮೇಲೆ ಹಾಳುಗೆಡವಲು ಅಧಿಕಾರ ಎಲ್ಲಿಂದ ಬರಬೇಕು. ಮಂಡ್ಯ ಜಿಲ್ಲಾಡಳಿತ ಇಂತಹ ಕೃತ್ಯಗಳಿಗೆ ಎಡೆ ಮಾಡಿಕೊಟ್ಟಿರುವುದು ಸರಿಯಾದುದಲ್ಲ. ಅನಾಗರೀಕವಾಗಿ ನಡೆದುಕೊಂಡಿರುವ ಟೆಂಡರ್ ದಾರ ಮತ್ತು ಬೇಜವಾಬ್ದಾರಿ ತನದಿಂದ ನಡೆದು ಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮ ಆಗಲೇಬೇಕು.

– ಪೂರ್ಣಿಮ ಕರ್ನಾಟಕ ಜನಶಕ್ತಿ

                         

ಜಾಗತಿಕವಾಗಿ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಅರಣ್ಯ ಇಲಾಖೆ ಹಸಿರು ನಾಶ ಮಾಡಿ ಬೋಳು ಮರಗಳ ಮಂಡ್ಯ ನಗರವನ್ನು ನಿರ್ಮಿಸಲು ಹೊರಟಿದೆ. ಪರಿಸರ ಪ್ರೇಮಿಗಳಾದ ನಾವು ಈ ಪಾರಂಪರಿಕ ಮರಗಳನ್ನು ಉಳಿಸಿಕೊಡಬೇಕೆಂದು ಕೋರುತ್ತೇವೆ. ತಪ್ಪಿತಸ್ತರ ಮೇಲೆ ಕ್ರಮ ಜರುಗಿಸಬೇಕು ನಾಗರೀಕರು ಆಗ್ರಹಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯಿಂದ ಮನುಷ್ಯರಲ್ಲದೇ, ಪ್ರಾಣಿ ಪಕ್ಷಿಗಳು ಕೂಡ ಜೀವಿಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರಳು ನೀಡುತ್ತಿದ್ದ ಮರಗಳ ಕೊಂಬೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಕಡಿದು ಉರುಳಿಸಿರುವುದು ನಾಚಿಕೆಗೇಡಿನ ಸಂಗತಿ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಿತ್ರ ಕಲಾವಿದ ಸೋಮು ವರದ ಆಗ್ರಹಿಸಿದ್ಧಾರೆ.

ಕಳೆದ ಜುಲೈನಲ್ಲೂ ಮರಗಳ ಕೊಂಬೆಗಳ ಕಡಿತ

ಕಳೆದ ಜುಲೈನಲ್ಲೂ ನೂರಡಿ ರಸ್ತೆಯಲ್ಲಿ ಹತ್ತಾರು ಮರಗಳ ಕೊಂಬೆಗಳನ್ನು ಅವೈಜ್ಞಾನಿಕವಾಗಿ ಕಡಿಯಲಾಗಿತ್ತು. ಆಗಲೂ ಇದೇ ರೀತಿ ಸಾರ್ವಜನಿಕರು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರಾದರೂ, ಈಗ ಅಂತಹ ಘಟನೆಗಳ ಮತ್ತೇ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸ್ಥಳೀಯರು ದೂರಿದ್ದರು.

ಕಳೆದ ಜುಲೈನಲ್ಲೂ ಮರಗಳ ಕೊಂಬೆಗಳನ್ನು ಕಡಿದಿದ್ದ ದೃಶ್ಯ

ಅರಣ್ಯಾಧಿಕಾರಿ ಸ್ಪಷ್ಟನೆ ಏನು ? 

ಈ ಕುರಿತಂತೆ  ಅರಣ್ಯ ಸಂರಕ್ಷಣಾಧಿಕಾರಿ ರಾಜುರವರು, ತಪ್ಪಿತಸ್ಥರ ವಿರುದ್ದ ರೇಂಜ್ ಫಾರೆಸ್ಟ್ ಆಫೀಸರ್ ಅವರಿಗೆ ಸೂಚನೆ ನೀಡಿದ್ದು,  ಟೆಂಡರ್ ದಾರ ಈ ವಿಚಾರದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದರೆ, ಪರಿಶೀಲಿಸಿ  ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿ ಕರ್ನಾಟಕ.ಕಾಂ.ಗೆ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!