Sunday, October 27, 2024

ಪ್ರಾಯೋಗಿಕ ಆವೃತ್ತಿ

ಜಾರ್ಖಂಡ್ | ಸಿಎಂ ಸೊರೇನ್ ವಿರುದ್ದ ಸ್ಪರ್ಧಿಸಲು ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ ; ಸ್ಪರ್ಧಿಸುವವರಿಗೆ 5 ಕೋಟಿ ರೂ. ಪ್ಯಾಕೇಜ್ ಘೋಷಣೆ !

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದಾದರೂ ಬಿಜೆಪಿ ಅಭ್ಯರ್ಥಿಗೆ 5 ಕೋಟಿ ರೂ.ಗಳನ್ನು ನೀಡುವುದಾಗಿ ಪಕ್ಷವೆ “ಆಮಿಷ” ಒಡ್ಡುತ್ತಿದೆ ಎಂದು ಆಡಳಿತರೂಢ ಜೆಎಂಎಂ ನಾಯಕರೊಬ್ಬರು ಹೇಳಿದ್ದಾರೆ.

ಜೆಎಂಎಂ ನಾಯಕ ಮನೋಜ್ ಪಾಂಡೆ ಭಾನುವಾರ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡುತ್ತಾ, ಸಿಎಂ ಹೇಮಂತ್ ಸೊರೆನ್ ಅವರ ಕ್ಷೇತ್ರವಾದ ಬರ್ಹೈತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.

“ಅವರು ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದ್ದಾರೆ, ಆದರೆ ಇನ್ನೂ ಸರಿಯಾದ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಈಗ ಅವರು ಅಭ್ಯರ್ಥಿಯನ್ನು ಸೆಳೆಯಲು ಪಕ್ಷದೊಳಗೆ 5 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ” ಎಂದು ಅವರು ಹೇಳಿದ್ದಾರೆ. ಈಗ ಅವರು ಹಣ ನೀಡಿ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರಾದರೂ ರಾಜಕೀಯವಾಗಿ ಹುತಾತ್ಮರಾಗಲು ಬಯಸುತ್ತಾರೆಯೇ ಎಂದು ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ ಹೀಗೇಕೆ ಮಾಡುತ್ತಿದೆ ಎಂಬ ಉತ್ತರಿಸಿದ ಪಾಂಡೆ, ಕ್ಷೇತ್ರದಲ್ಲಿ ಬಿಜೆಪಿಗೆ 100-150 ಮತಗಳು ಸಿಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಆದ್ದರಿಂದ ಯಾವುದೇ ಅಭ್ಯರ್ಥಿ ಸಿಎಂ ಸೋರೆನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

“ಬಿಜೆಪಿ ಅಭ್ಯರ್ಥಿ ಕೇವಲ 250 ಮತಗಳನ್ನು ಪಡೆಯುತ್ತಾನೆಎಂದರೆ ಅದು ಎಂತಹ ಅವಮಾನಕರ ವಿಷಯ. ಅದಕ್ಕಾಗಿಯೇ ಅವರು ಯಾವುದೇ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಸೊರೆನ್ ವಿರುದ್ಧ ನಿಲ್ಲಿಸುವುದಿಲ್ಲ ಅಥವಾ ಹಣದ ದುರಾಸೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೂ ಸಲ್ಲಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಗುರುವಾರ ಬರ್ಹೈತ್ ಕ್ಷೇತ್ರದಿಂದ ಸಿಎಂ ಸೋರೆನ್ ನಾಮಪತ್ರ ಸಲ್ಲಿಸಿದರೆ, ಅವರ ಪತ್ನಿ ಕಲ್ಪನಾ ಸೊರೆನ್ ಗಂಡೇ ವಿಧಾನಸಭಾ ಸ್ಥಾನಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಬರ್ಹೈತ್ ಸಂತಾಲ್ ಪರಗಾನಾ ಪ್ರದೇಶದ ಅಡಿಯಲ್ಲಿ ಬರುತ್ತದೆ. ಇದನ್ನು ಜೆಎಂಎಂ ಭದ್ರಕೋಟೆ ಎಂದೆ ಪರಿಗಣಿಸಲಾಗಿದೆ.

2019 ರ ವಿಧಾನಸಭಾ ಚುನಾವಣೆಯಲ್ಲಿ, ಸೊರೆನ್ ಸಂತಾಲ್ ಪ್ರದೇಶದಲ್ಲಿ ಬರ್ಹೈತ್ ಮತ್ತು ದುಮ್ಕಾ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಈ ಎರಡೂ ಸ್ಥಾನಗಳಲ್ಲಿ ಅವರು ಗೆದ್ದಿದ್ದರು.

ಅವರು ಬಿಜೆಪಿಯ ಸೈಮನ್ ಮಾಲ್ಟೊ ಅವರನ್ನು 25,740 ಮತಗಳಿಂದ ಸೋಲಿಸುವ ಮೂಲಕ ಬರ್ಹೈತ್ ಕ್ಷೇತ್ರವನ್ನು ಮತ್ತು ಲೋಯಿಸ್ ಮರಾಂಡಿ ದುಮ್ಕಾ ಕ್ಷೇತ್ರದಲ್ಲಿ 13,188 ಮತಗಳ ಅಂತರದಿಂದ ಸೋಲಿಸಿದ್ದರು. ನಂತರ ಸೊರೆನ್ ಅವರು ದುಮ್ಕಾ ಸ್ಥಾನವನ್ನು ತೆರವು ಮಾಡಿದ್ದರು.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 20 ರಂದು ಫಲಿತಾಂಶ ಪ್ರಕಟವಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!