Sunday, November 22, 2026

ಪ್ರಾಯೋಗಿಕ ಆವೃತ್ತಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ಷಡ್ಯಂತ್ರ: ರವಿಕುಮಾರ್ ಗಣಿಗ

ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೆಣೆದಿರುವ ಷಡ್ಯಂತ್ರ.ಕುತಂತ್ರದಿಂದ ಮುಖ್ಯಮಂತ್ರಿ ಸ್ಥಾನದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಗಣಿಗ ಪಿ ರವಿಕುಮಾರ್ ಬಿಜೆಪಿ-ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.

ಮಂಡ್ಯ ತಾಲ್ಲೂಕಿನ ಬಸರಾಳು ಹಾಗೂ ಮುತ್ತೇಗೆರೆ ಗ್ರಾಮದಲ್ಲಿ ಬುಧವಾರ ಎಸ್.ಹೆಚ್.ಡಿ.ಪಿ.ಯ 10 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು,ಮುಡಾ ಹಗರಣ
ಹಿಂದುಳಿದ ವರ್ಗಗಳ ನಾಯಕ ಎರಡನೇ ಬಾರಿ ಸಿಎಂ ಆಗಿದ್ದಾರೆ ಅಂತ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರ ಗೊಳಿಸಲು ಮಾಡಿದ ಷಡ್ಯಂತ್ರ ಅಷ್ಟೇ. 50ಕೋಟಿ ಆಮಿಷ ನೀಡಿ ಶಾಸಕರನ್ನ ಖರೀದಿ ಮಾಡಲು ಹೊರಟಿದ್ರು.ಆದರೆ ನಮ್ಮ ಶಾಸಕರು ಯಾರೂ ದುಡ್ಡಿಗೆ ಬಲಿ ಬೀಳದ ಸಂದರ್ಭದಲ್ಲಿ, ಇವರ ಸರ್ಕಾರ ಇದ್ದರೆ ಒಳ್ಳೆಯ ಹೆಸರು ಮಾಡುತ್ತೆ ಎಂದು ಸಿಎಂ ಅವರನ್ನ ಈ ಕುತಂತ್ರದಲ್ಲಿ ಸಿಲುಕಿಸಿ, ಈ ರೀತಿ ಕಷ್ಟ ಕೊಡ್ತಿದ್ದಾರೆ.ಬಿಜೆಪಿ ನಾಯಕರು ಆಮಿಷ ಒಡ್ಡಿರುವುದು ಸತ್ಯ.ಆ ದಾಖಲೆ ನಮ್ಮ ಬಳಿ ಇದೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡ್ತೇವೆ. ಯಾರನ್ನ ಒಳಗೆ ಹಾಕಿಸಬೇಕು ಹಾಕಿಸ್ತೇವೆ‌.ಸಿಎಂ ಕುರ್ಚಿ ಗಟ್ಟಿಯಾಗಿದ್ದು, ಕುತಂತ್ರದಿಂದ ಅಲುಗಾಡಿಸಲುಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಅಲ್ಲಾಡಿಸಲು ಆಗಲ್ಲ ಎಂದು ಎಚ್ಚರಿಕೆ ನೀಡಿದರು.

ಹಗಲುಗನಸು

ನಾನು ಈ ಅವಧಿಯಲ್ಲೇ ಮತ್ತೆ ಮುಖ್ಯಮಂತ್ರಿ ಆಗ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ. ಅವರು ಕೊಟ್ಟಾಗ ಕುದುರೆ ಏರಲ್ಲ, ಬಿದ್ದೋಗ್ತಾರೆ. ಬಿದ್ದಾಗ ಮತ್ತೆ ಕುದುರೆ ಹಿಡಿಯೋದಕ್ಕೆ ಓಡ್ತಾರೆ. 19 ಸೀಟ್ ಬಂದು ಮುಖ್ಯಮಂತ್ರಿ ಆಗ್ತಿನಿ ಅನ್ನೋದು ಅಸಾಧ್ಯ. ನಮ್ಮನ್ನೆಲ್ಲ ರೆಬಲ್ ಒಕ್ಕಲಿಗರು ಅನ್ಕೊಂಡವರೆ ಇವರೆಲ್ಲ‌. ನಾವೇ ಒರಿಜಿನಲ್ ಒಕ್ಕಲಿಗರು,ಮತ್ತು ಕೆಲಸ ಮಾಡೋರು.ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಏನೂ ಕೆಲಸ ಮಾಡಿಲ್ಲ.ನಿಖಿಲ್ ಕುಮಾರಸ್ವಾಮಿ ಬೈಕ್ ನಿಂದ ಬಿದ್ದಿದ್ದಾರೆ.ರಸ್ತೆ ಸರಿ ಇಲ್ಲದ ಕಾರಣ ನಿಖಿಲ್ ಬಿದ್ದಿದ್ದಾರೆ. ಮುಖ್ಯಮಂತ್ರಿ ಆಗಿದ್ದವರ ಕ್ಷೇತ್ರದಲ್ಲಿನ ರಸ್ತೆಗಳೆಲ್ಲ ಗುಂಡಿ ಬಿದ್ದು ಹಾಳಾಗಿದೆ. ಆದ್ರೂ ಜನರು ಅವರಿಗೆ ಓಟ್ ಹಾಕ್ತಾರೆ ಅಂದ್ರೆ ಅರ್ಥವಾಗಲ್ಲ. ನಾವು ಒರಿಜಿನಲ್,ಆದರೂ ಒಕ್ಕಲಿಗರು ಯಾಕೊ ಜಾಸ್ತಿ ಪ್ರೀತಿ ಮಾಡಲ್ಲ. ನಮ್ಮನ್ನ ನಾಲ್ಕು ಬಾರಿ ಗೆಲ್ಲಿಸಿದ್ರೆ ನಾವೂ ಮಂತ್ರಿ ಮುಖ್ಯಮಂತ್ರಿ ಆಗ್ತೇವೆ. ರಾಜ್ಯದ ಅಭಿವೃದ್ಧಿ ಮಾಡ್ತೇವೆ. ಶಾಸಕರಾಗಿ ಅಭಿವೃದ್ಧಿ ಮಾಡಿದ್ದೇವೆ ಜನರು ಕೈ ಹಿಡಿಬೇಕು ಎಂದರು.

ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ದ ಕ್ರಮ ಕೈಗೊಳ್ಳಬೇಕು

ಮಂಡ್ಯ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟು ದಂಧೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಹಳ್ಳಿ- ಹಳ್ಳಿಗಳಲ್ಲಿ ಯುವಕರು ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ಸಿಲುಕಿ ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದು,ಅವರ ತಂದೆ-ತಾಯಿಯ ಕಣ್ಣಲ್ಲಿ ಬದುಕಿರುವರೆಗೂ ನೀರು‌ತರಿಸುತ್ತಿದ್ದಾರೆ. ನನ್ನ ಕ್ಷೇತ್ರದ ಕಸಬಾ ಹೋಬಳಿಯ ಬೂದನೂರು, ಕನ್ನಲಿ, ಹನಕೆರೆ, ಕಚ್ಚಿಗೆರೆ ಮೊದಲಾದ ಕಡೆ ಜಮೀನುಗಳಲ್ಲಿ ಇಸ್ಪೀಟು ದಂಧೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು ಕೂಡಲೇ ಕ್ರಿಕೆಟ್ ಬೆಟ್ಟಿಂಗ್,ಇಸ್ಪೀಟು ದಂಧೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಬೂದನೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿರುವನೊಬ್ಬ ದಿನಕ್ಕೆ 25 ಲಕ್ಷ ವಹಿವಾಟು ನಡೆಸುತ್ತಾನೆ. ಈ ಹಿಂದೆ ಈತನ ವಿರುದ್ಧ ದೂರು ಬಂದಾಗ ಮಾಜಿ ಮುಖ್ಯಮಂತ್ರಿಯೊಬ್ಬರು ಆಗಿನ ಎಸ್ಪಿ ಯತೀಶ್ ಅವರಿಗೆ ಫೋನ್ ಮಾಡಿದ್ದರು. ಪ್ರತಿ ಬಾರಿ ಐಪಿಎಲ್ ಬಂದಾಗಲೂ ಈ ಭಾಗದ ಯುವಕರು ಬೈಕ್ ಗಳನ್ನು ಮಾರಿಕೊಂಡು ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ಈಗಾಗಲೇ ಮೂರು ವ್ಯಕ್ತಿಗಳು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಬೆಟ್ಟಿಂಗ್,ಜೂಜು ದಂಧೆ ನಡೆಯಲು ನಾನು ಬಿಡಲ್ಲ.ಪೋಲಿಸರು ಕೂಡಲೇ ಕೈಗೊಳ್ಳಬೇಕು ಎಂದರು.

ಯೋಗೇಶ್ವರ್ ಗೆಲ್ತಾರೆ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 10 ಸಾವಿರ ಮತಗಳ ಅಂತರದಿಂದ ಗೆಲ್ಲೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯತ್ನಾಳ್ ಬಾಯಿ ಮುಚ್ಚಿಸಲಿ

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಸಿಎಂ ರಾಜೀನಾಮೆಗೆ ಕ್ಷಣಗಣನೆ ಎಂದು ರಾತ್ರಿ ಎಲ್ಲಾ ಕನಸು ಕಾಣ್ತಾರೆ, ಬೆಳಗ್ಗೆ ಬಂದು ಹೇಳ್ತಾರೆ. ಮೊದಲು ಅವರ ಪಕ್ಷದ ಯತ್ನಾಳ್ ಬಾಯಿ ಮುಚ್ಚಿಸಲಿ. ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಅವರು ವಿಜಯೇಂದ್ರ ಅವರನ್ನು ನಮ್ಮ ಅಧ್ಯಕ್ಷರೇ ಅಲ್ಲ ಅಂತಾರೆ.ಮೊದಲು ಅವರ ಬಾಯಿ ಮುಚ್ಚಿಸಲಿ‌. ನಂತರ ನಮ್ಮ ಸಿಎಂ ಬಗ್ಗೆ ವಿಜಯೇಂದ್ರ ಮಾತನಾಡಲಿ ಎಂದು ಗುಡುಗಿದರು.
ನೇಗಿಲಿನಲ್ಲಿ ಹೊಡೀತಾರೆ.

ರಾಜಕಾರಣದ ಟೆರರಿಸಂ ಮಾಡ್ತಿದ್ದಾರೆ

ವಕ್ಫ್ ವಿವಾದ ಕಳೆದ ಬಿಜೆಪಿ ಸರ್ಕಾರದಲ್ಲಿ ಮಾಡಿರುವ ಕುತಂತ್ರವಾಗಿದೆ. ಬಿಜೆಪಿಯವರು ರಾಜಕಾರಣದ ಟೆರರಿಸಂ ಮಾಡ್ತಿದ್ದಾರೆ. ಬಿಜೆಪಿಯವರು ಬಿತ್ತನೆ ಹಾಕಿ,ನೀರು ಹಾಕಿ,ಮೊಳಕೆ ಬರಿಸಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬ್ಲಾಸ್ಟ್ ಮಾಡುವ ತಂತ್ರ ಮಾಡಿದ್ದಾರೆ.ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷ ಮುಸ್ಲಿಮರ ಪರವಾಗಿದೆ ಎಂದು ಬಿಂಬಿಸಲು ಹೊರಟಿದೆ.ಬೆಂಗಳೂರಿನ ಹೃದಯ ಭಾಗದಲ್ಲಿರುವ ಸಾವಿರಾರು ಕೋಟಿ ಬೆಲೆ ಬಾಳುವ ವಿಂಡ್ಸರ್ ಮ್ಯಾನರ್,ರ‌್ಯಾಡಿಸನ್ ಬ್ಯೂ ಹೋಟೆಲ್,ಏರ್ ಲೈನ್ಸ್ ಹೋಟೆಲ್ ಅದನ್ನು ಮೊದಲು ವಕ್ಫ್ ಬೋರ್ಡ್ ಬಿಡಿಸಿಕೊಂಡು ತನ್ನ ಆಸ್ತಿ ಎಂದು ಬೋರ್ಡ್ ಹಾಕಲಿ.ನಮ್ಮ ರೈತರ ತಂಟೆಗೆ ಬಂದ್ರೆ ನೇಗಿಲು ತಕೊಂಡು ಹೊಡಿತಾರೆ ಎಂದು ಎಚ್ಚರಿಕೆ ನೀಡಿದರು.

ರೈತರ ಒಂದಿಂಚೂ ಭೂಮಿ ಯಾವುದೇ ಕಾರಣಕ್ಕೂ ಕೊಡಲ್ಲ.ನಮ್ಮ ಸರ್ಕಾರ ರೈತರ ಪರ ಇದೆ.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ನೋಟಿಸ್ ನೀಡದಂತೆ ಸೂಚನೆ ಕೊಟ್ಟಿದ್ದಾರೆ.ವಕ್ಫ್ ಬೋರ್ಡ್ ರೈತರ ಜೊತೆ ಚೆಲ್ಲಾಟವಾಡಬಾರದು. ಕಳೆದ ಬಿಜೆಪಿ ಸರ್ಕಾರದಲ್ಲಿ ಮಾಡಿರುವ ಕುತಂತ್ರ ಇದು. ವಕ್ಫ್ ವಿವಾದ ರಾಜಕೀಯ ಟೆಕ್ನಿಕ್.ಬಿಜೆಪಿ-ಜೆಡಿಎಸ್ ಪರವಾದ ಅಧಿಕಾರಿಗಳು ಮಾಡಿರುವ ಷಡ್ಯಂತ್ರ.ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಗುರುತಿಸಿ ಸಸ್ಪೆಂಡ್ ಮಾಡಬೇಕು. ನಮ್ಮ ಸರ್ಕಾರಕ್ಕೂ ವಕ್ಫ್ ಗೂ ಸಂಬಂಧ ಇಲ್ಲ.ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನಿಶ್ ಮೇಲೂ ತನಿಖೆ ಆಗಲಿ ಎಂದರು.

ಎರಡು ನಾಲಿಗೆ

ವರ್ಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂದು ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದು, ಈಗ ಅವರೇ ಹೋರಾಟ ಮಾಡುತ್ತಿದ್ದಾರೆ.ಬೊಮ್ಮಾಯಿ ಅವರದ್ದು ಎರಡು ನಾಲಿಗೆ. ಅವರೇ ಮಗುವನ್ನು ಚಿವುಟುತ್ತಾರೆ, ತೊಟ್ಟಿಲನ್ನು ತೂಗುತ್ತಾರೆ. ಬಿಜೆಪಿಯ ರಾಜಕೀಯ ಅಸ್ತಿತ್ವ ಇರುವುದೇ ಭಾವನಾತ್ಮಕ ವಿಚಾರಗಳನ್ನು ಮುಂದೆ ಮಾಡಿ ಜನರನ್ನು ಹೊಡೆದಾಡಿಸಿ ಅಧಿಕಾರಕ್ಕೆ ಬರುವುದು.ಅವರೇ ಬಾವುಟವನ್ನು ಏರಿಸುತ್ತಾರೆ,ಅವರೇ ಇಳಿಸುತ್ತಾರೆ.ಧರ್ಮ-ಧರ್ಮಗಳ ಜನರ ಮಧ್ಯೆ ಗಲಾಟೆ ಮಾಡಿಸುವುದು ಅವರ ಸಿದ್ಧಾಂತ ಎಂದು ಕಿಡಿ ಕಾರಿದರು.

ಒಳ ಒಪ್ಪಂದವಿಲ್ಲ

ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ಯಾವುದೇ ಒಳ ಒಪ್ಪಂದವಾಗಿಲ್ಲ. ಕಳೆದ ಬಾರಿ ಬೊಮ್ಮಾಯಿಯವರು 7,000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರ ಎದುರು ಗೆದ್ದಿದ್ದರು.ಶಿಗ್ಗಾಂವಿಯಲ್ಲಿ 75 ಸಾವಿರದಷ್ಟು ಅಲ್ಪಸಂಖ್ಯಾತರ ಮತಗಳಿವೆ. ಈ ಹಿನ್ನಲೆಯಲ್ಲಿ ಮತ್ತೆ ಅನುಕಂಪದ ಮೇಲೆ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಯಾವುದೇ ಒಳ ಒಪ್ಪಂದವಿಲ್ಲ ಎಂದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ