ಶಿವಶರಣೆ ಅಮ್ಮಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ನಾಲ್ಕನೇ ವರ್ಷದ ಶಿವಾರಾಧಾನ ಶರಣ ಸಮ್ಮೇಳನವನ್ನು ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದ ಶ್ರೀದಂಡಿನಮ್ಮ ಲಕ್ಷ್ಮಿದೇವಿ ದೇವಸ್ಥಾನದ ಆವರಣದಲ್ಲಿ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಡಾ.ಶಂಕರ್ ಹಲ್ಲೇಗೆರೆ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ತತ್ವಪದ ಸ್ಪರ್ಧೆ, ಆದ್ಯಾತ್ಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಡೆಯಲಿರುವ ಸಮ್ಮೇಳನವು ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದ ಕಾರ್ಯಕ್ರಮವನ್ನು ಮೈಸೂರು ಬಸವಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿದೇವಿ ಉದ್ಘಾಟಿಸುವರು, ಖ್ಯಾತ ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸುವರು ಎಂದರು.
ತಾ.ನಾ.ಶಿವಕುಮಾರ್ ಅವರಿಗೆ ಹಾಸನದ ಹೀರೆಕಲ್ ನ ವೀರಭದ್ರೇಶ್ವರ ಮಠದ ನಂದೀಶ್ವರ ಸ್ವಾಮೀಜಿ ಆದ್ಯಾತ್ಮ್ ಪ್ರಶಸ್ತಿ ಪ್ರದಾನ ಮಾಡಳಿದ್ದು, ಡಾ.ಶಂಕರ್ ಹಲ್ಲೇಗೆರೆ ವಿರಚಿತ ತತ್ವಪದಗಳ ದೇಹವೆಂಬೋ ಡಂಬ ಸಿ.ಡಿ ಯನ್ನು ಹಾಸನ ಜವನಹಳ್ಳಿ ಮಠದ ಸಂಗಮೇಶ್ವರ ಸ್ವಾಮಿಗಳು ಬಿಡುಗಡೆ ಮಾಡುವರು. ಶಂಕರ್ ಹಲ್ಲೇಗೆರೆ ವಿರಚಿತ ಹಲ್ಲೇಗೆರೆಯ ತತ್ವಪದಗಳು ಭಾಗ-4 ಪುಸ್ತಕವನ್ನು ಕೊಡಗಿನ ಎಡೆಮೂಡ್ನಳ್ಳಿಯ ವಿರಕ್ತ ಮಠದ ಮಲ್ಲೇಶ್ವರ ಸ್ವಾಮೀಜಿ, ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಸುಜ್ಞಾನ ಚಿಂತನೆ ಪುಸ್ತಕವನ್ನು ಧನಗೂರು ವೀರಸಿಂಹಾಸನ ಮಠದ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡುವರು ಎಂದು ವಿವರಿಸಿದರು.
ಅಂದು ಬೆಳಿಗ್ಗೆ 8.30 ರಿಂದ 10 ರವರೆಗೆ ಪ್ರಥಮ ಹಂತದ ತತ್ವಪದ ಸ್ಪರ್ಧೆ, ಮಧ್ಯಾನ್ಹ 1.30ರಿಂದ 3 ಗಂಟೆ ವರೆಗೆ ಎರಡನೇ ಹಂತದ ತತ್ವಪದ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಮಾರೋಪ ಕಾರ್ಯಕ್ರಮ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಬೈರಮಂಗಲ ರಾಮೇಗೌಡರಿಗೆ ಅಭಿನಂದನೆ ಹಾಗೂ ತತ್ವಪದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವಿದ್ಯಾಶಂಕರ್ ಉಪಸ್ಥಿತರಿದ್ದರು.




