ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಯಶ್ವಂತ್ ಎಸ್ ಎ, ಎಂಬ 22 ವರ್ಷದ ಯುವಕ ಮಂಡ್ಯ ಸಮೀಪ ಸಿದ್ದಯ್ಯನ ಕೊಪ್ಪಲು ಬಳಿ ಇರುವ ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು 9:11:24 ರಂದು ಮಧ್ಯಾಹ್ನ 2 ರಿಂದ 3 ಗಂಟೆ ಸಮಯದಲ್ಲಿ ಕಾಲೇಜಿನಿಂದ ತನ್ನ ಸ್ನೇಹಿತರ ಜೊತೆಗೂಡಿ ಯಲಿಯೂರು ಬಳಿಯ ಕಾಳೇನಳ್ಳಿ, ವಿಶ್ವೇಶ್ವರಯ್ಯ ನಾಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ಇಳಿಜಾರು ಪ್ರದೇಶದಲ್ಲಿ ನಾಲೆಗೆ ಇಳಿದು ಒಬ್ಬರ ಕೈನ್ನೊಬ್ಬರು ಹಿಡಿದು ಸುತ್ತುವರೆದು ನಿಂತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರಿಗೆ ಬಿದ್ದ ನಂತರ ಅಲ್ಲಿದ್ದ ಕೆಲವರು ಇಬ್ಬರನ್ನು ರಕ್ಷಣೆ ಮಾಡಿ ಮತ್ತೊಬ್ಬ ಯುವಕ ವಿದ್ಯಾರ್ಥಿ ಯಶ್ವಂತ್ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿರುತ್ತಾರೆ.
ಅಲ್ಲಿನ ಸ್ಥಳೀಯರು ಬಟ್ಟೆ ಒಗೆಯುವ ಮಹಿಳೆಯರು ಹೇಳುವ ಪ್ರಕಾರ ಈ ಹುಡುಗನಿಗೆ ಈಜು ಬಾರದಿದ್ದರೂ ಕೂಡ ಸ್ನೇಹಿತರು ಒತ್ತಾಯದ ಮೇರೆಗೆ ನಾವಿದ್ದೇವೆ ಕೈ ಜೋಡಿಸಿ ಹಿಡಿದುಕೊಳ್ಳುತ್ತೇವೆ ಜೊತೆಗಿದ್ದೇವೆ ಬಾ ಎಂದು ಒಳಗೆ ಕರೆದುಕೊಂಡು ಹೋಗಿರುತ್ತಾರೆ.
ಒಳಗೆ ಹೋದ ತಕ್ಷಣ ಯಾರೋ ಒಬ್ಬ ಆಕಸ್ಮಿಕವಾಗಿ ಕಾಲ ಜಾರಿ ಹಿಂದಕ್ಕೆ ಬಿದ್ದ ತಕ್ಷಣ ಇನ್ನಿಬ್ಬರು ಜೊತೆಗೆ ಬಿದ್ದು ಬಟ್ಟೆ ಒಗೆಯುತ್ತಿದ್ದ ಮಹಿಳೆಯರ ಸಮ್ಮುಖದಲ್ಲಿ ಇಬ್ಬರನ್ನು ಕಾಪಾಡುತ್ತಾರೆ ಆದರೆ ಯಶ್ವಂತ್ ಎಂಬ ಯುವಕ ಅವರ ಕಣ್ಣೆದುರೇ ಮುಳುಗುತ್ತಾನೆ.
ಈ ವಿಷಯ ತಿಳಿದು ಸಂಬಂಧಿಕರು ಮದ್ದೂರು ತಾಲೂಕು ಸೋಮನಹಳ್ಳಿಯಿಂದ ದೌಡಾಯಿಸಿ ಬಂದ ನಂತರ ಕಾಳೇನಳ್ಳಿ ಹಾಗೂ ಅಲ್ಲಿಯ ಸ್ಥಳೀಯರು ಸಹ ಇದಕ್ಕೆ ಸಹಕಾರ ಕೊಟ್ಟು ಯುವಕನ ರಕ್ಷಣೆ ಮಾಡಲು ಹರಸಹಾಸ ಮಾಡಿದರು.ಇದರೊಟ್ಟಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ತಮ್ಮ ಬೋಟಿನೊಂದಿಗೆ ಹುಡುಕಲು ಸತತ ಪ್ರಯತ್ನ ಪಟ್ಟರು ಅಷ್ಟರಲ್ಲಿ ಕತ್ತಲಾಗಿತ್ತು ನಂತರ ಶೋದ ಕಾರ್ಯ ಪ್ರಯತ್ನವನ್ನು ನಾಳೆಗೆ ಮುಂದೂಡಿದರು.
ಈ ವಿಷಯವನ್ನು ತಿಳಿದ ಪೊಲೀಸ್ ಅಧಿಕಾರಿ ಗಂಗಾಧರ್ ಸ್ವಾಮಿ ಅವರು ಯಲಿಯೂರು ಬಳಿಯ ಕಾಳೆನಳ್ಳಿ ಬಳಿ ಇರುವ ವಿಶ್ವೇಶ್ವರಯ್ಯ ನಾಲೆಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ನಂತರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಇದರ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.




