Thursday, November 19, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಇರುವವರೆಗೆ ಶಂಕರ್ ನಾಗ್ ಹೆಸರು ಚಿರಸ್ಥಾಯಿ; ವಿನಯ್ ಕುಮಾರ್

ರಂಗಭೂಮಿ, ಚಿತ್ರನಟನಷ್ಟೇ ಅಲ್ಲದೇ ನಿರ್ದೇಶಕನೂ ಆಗಿದ್ದ ಪಾದರಸದಂತಹ ವ್ಯಕ್ತಿತ್ವದ ಶಂಕರ್ ನಾಗ್ ಅವರ ಹೆಸರು ಕರ್ನಾಟಕ ಇರುವವರಗೆ ಚಿರಸ್ಥಾಯಿಯಾಗಿರಲಿದೆ ಎಂದು ಮಂಕುತಿಮ್ಮ ಟ್ರಸ್ಟ್ ನ ವಿನಯ್ ಕುಮಾರ್ ಅಭಿಪ್ರಾಯಪಟ್ಟರು.

ಚಿತ್ರಕೂಟ ಬಳಗದಿಂದ ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆದ ಮಿಂಚಿನ ಓಟಗಾರ ಶಂಕರ್‌ನಾಗ್ ಜನ್ಮದಿನ ಮತ್ತು ನಿತ್ಯಸಚಿವ ಕೆವಿ ಶಂಕರಗೌಡರ ನೆನಪಿನಲ್ಲಿ ಸಂಗೀತ, ಶ್ರಮದಾನ, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ… ಬಳಿಯುವ ‘ಶಂಕರ ನಿರಂತರ’ ಕಾರ್ಯಕ್ರಮದಲ್ಲಿ ‘ಸಮಾಜಮುಖಿ ಶಂಕರ್ ನಾಗ್ ಒಂದು ಅವಲೋಕನ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಚಿತ್ರರಂಗದಲ್ಲಿ ಹೆಸರು ಹೇಳಿದ ಕೂಡಲೇ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಟ ಯಾರಾದರೂ ಇದ್ರೆ, ಅದು ಶಂಕರ್ ನಾಗ್ ಮಾತ್ರ. ಅತ್ಯಂತ ಹೆಚ್ಚು ಚುರುಕಿನ ವ್ಯಕ್ತಿತ್ವದ ಶಂಕರ್ ನಾಗ್, ಅದ್ಭುತವಾಗಿ ಸಮಯ ಪರಿಪಾಲನೆಯಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಅವರು ಕೇವಲ 34 ವರ್ಷಗಳ ಜೀವಿತಾವಧಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಒಂದೇ ವರ್ಷದಲ್ಲಿ 15 ಚಿತ್ರಗಳನ್ನು ಮಾಡಿದ ದಾಖಲೆ ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಸತ್ತಾಗ ಎಲ್ಲರೂ ಮಲಗುವುದು ಇದ್ದೇ ಇದೆ, ಆದರೆ ಬದುಕಿದ್ದಾಗ ಕೆಲಸ ಮಾಡಬೇಕೆಂದು ಶಂಕರ್ ನಾಗ್ ಅವರ ನುಡಿಯಾಗಿತ್ತು. ಅದರಂತೆ ಅವರು ಜೀವಿಸಿದ್ದರು ಎಂದರು.

ಸುಮಾರು 35 ವರ್ಷಗಳ ಹಿಂದೆಯೇ ಅವರು ಸುರಂಗ ಮೆಟ್ರೋದ ಬಗ್ಗೆ ಚಿಂತನೆ ನಡೆಸಿ, ಪ್ಯಾರಿಸ್ ಗೆ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ ಬಂದಿದ್ದರು. ಬೆಂಗಳೂರಿಗೂ ಅಂತಹ ಮೆಟ್ರೋ ಬೇಕು ಎಂಬ ಕನಸ್ಸು ಕಂಡಿದ್ದರು. ಅಲ್ಲದೇ ಕಾರ್ಖಾನೆಗಳ ಹಾರುಬೂದಿಯಿಂದ ಇಟ್ಟಿಗೆ ತಯಾರಿಸುವ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಆಗಿದ ಕಾಲದಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ಹೆಲಿಕಾಪ್ಟರ್ ಬಳಕೆ ಮಾಡುವ ಕನಸ್ಸು ಕಂಡಿದ್ದರು. ಅಲ್ಲದೇ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದರು. ಅಲ್ಲದೇ ಬೇರೆ ದೇಶಗಳ ಹೊಸ ತಂತ್ರಜ್ಞಾನವನ್ನು ಅರಿಯಲು ಕಾತರಿಸುತ್ತಿದ್ದರು. ಇಷ್ಟೇ ಅಲ್ಲದೇ ರೇಕಾರ್ಡಿಂಗ್ ಗೆ ಚೈನೈಗೆ ಹೋಗಬೇಕಾಗಿದ್ದ ಸಂದರ್ಭದಲ್ಲಿ ಕಲಾವಿದರನ್ನೆಲ್ಲ ಒಟ್ಟುಗೂಡಿಸಿ ಸಂಕೇತ್ ಸ್ಟುಡೀಯೋ ಸ್ಥಾಪಿಸಿದ್ದರು. ಇದು ಅವರ ಬಹುಮುಖಗಳನ್ನು ಅನಾವರಣಗೊಳಿಸುತ್ತದೆ ಎಂದು ನುಡಿದರು.

ಕರ್ನಾಟಕ ಜನಶಕ್ತಿ ಹೋರಾಟಗಾರ್ತಿ ಪೂರ್ಣಿಮ, ಶಿಲ್ಪ ಅವರು ‘ಅರಿವಿನ ಪಯಣ’ ಎಂಬ ಕಿರುನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.

ಧೀರ ಭಗತ್ ರಾಯ್ ಚಿತ್ರದ ಉದಯೋನುಖ ನಟ ರಾಕೇಶ್  ದಳವಾಯಿ ಅವರನ್ನು ಚಿತ್ರಕೂಟ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೈತರ ಶಾಲೆಯ ಸಂಸ್ಥಾಪಕ ಪ್ರೊ.ಸತ್ಯಮೂರ್ತಿ, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ,  ಚಿಕ್ಕಮಂಡ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್ ದೇವರಾಜು, ನುಡಿಕರ್ನಾಟಕ ಸಂಪಾದಕ ಸಂತೋಷ್ ಜಿ, ಚಿತ್ರಕೂಟ ಬಳಗದ ಅರವಿಂದ ಪ್ರಭು, ಧನುಷ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ