ಮಂಡ್ಯ ಜಿಲ್ಲೆಯಲ್ಲಿ ಡಿ. 20, 21, ಮತ್ತು 22 ರಂದು ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದೆ. ಯಾವುದೇ ಪರಿಸ್ಥಿಯಲ್ಲೂ ಕುಡಿಯುವ ನೀರು ಪೂರೈಕೆ ವೇಳೆ ಅಡಚಣೆ ಯಾಗದಂತೆ ನೋಡಿಕೊಳ್ಳಿ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುಡಿಯುವ ನೀರಿನ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮೇಳನ ನಡೆಯುವ 3 ದಿನ ಮುಂಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಹಾಗೂ ನೀರನ್ನು ಸಂಗ್ರಹ ಮಾಡುವ ಟ್ಯಾಂಕರ್ ಹಾಗೂ ನೀರನ್ನು ಪರೀಕ್ಷೆಗೆ ಒಳಪಡಿಸಿ ಶುದ್ಧ ನೀರು ಸಂಗ್ರಹಣೆಗೆ ಆದ್ಯತೆ ನೀಡಬೇಕು. ನೀರು ಪೋಲಾಗದಂತೆ ಗಮನ ಹರಿಸಿ, ಈಗಾಗಲೇ ಎಲ್ಲೆಲ್ಲಿ ನೀರಿನ ಪಾಯಿಂಟ್ ಗಳಿವೆಯೋ ಅಲ್ಲಲ್ಲಿ ವ್ಯವಸ್ಥಿತವಾಗಿ ಪೈಪ್ ಲೈನ್ ಕಾರ್ಯ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ನಿರ್ವಹಣಾ ಸಮಿತಿ ಕುಡಿಯಲು, ಅಡುಗೆ ಮಾಡಲು ಮತ್ತು ಶೌಚಾಲಯಕ್ಕೆ ಕ್ರಮ ಬದ್ಧವಾಗಿ ನೀರು ಪೂರೈಕೆ ಮಾಡಬೇಕು. ಸಮ್ಮೇಳನ ಪ್ರಾರಂಭ ವಾದ 3 ದಿನ ನೀರನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಿದರು.
ಸಮ್ಮೇಳನಕ್ಕೆ ನೀರು ಒದಗಿಸಲು ನಗರದಲ್ಲಿ ಆಯ್ಕೆ ಮಾಡಲಾದ 2 ಟ್ಯಾಂಕ್ ಗಳಿಗೆ 4 ಲಕ್ಷ ಲೀಟರ್ ಸಾಮರ್ಥ್ಯವಿದೆ. ಈ ಟ್ಯಾಂಕ್ ಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ನೀರು ಒದಗಿಸಲು ಕ್ರಿಯಾಯೋಜನೆ ರೂಪಿಸಿ ನೀರು ಪೂರೈಸಬೇಕೆಂದರು.
ಈಗಾಗಲೇ ಸಮ್ಮೇಳನ ಅಗತ್ಯತೆಗೆ 10 ರಿಂದ 15 ನೀರಿನ ಪಾಯಿಂಟ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಸ್ಥಾಪಿಸಲಾಗುವ ಶೌಚಾಲಯಗಳಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ. ಶೌಚಾಲಯ ಹಾಗೂ ಕುಡಿಯುವ ನೀರಿನ ಪಾಯಿಂಟ್ ಸ್ಥಾಪಿಸುವ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಿ ಎಂದರು.
ಜಿಲ್ಲೆಯ ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ. ಎಸ್ ಸಿ. ಸುರೇಶ ಅವರು ಮಾತನಾಡಿ, ನೀರು ಪೂರೈಕೆಗೆ 10 ರಿಂದ 15 ಪಾಯಿಂಟ್ ಹಾಕಿಕೊಳ್ಳಲಾಗಿದ್ದು, ಪ್ರತಿ ಪಾಯಿಂಟ್ ಗೆ 10 ರಿಂದ 15 ನಲ್ಲಿ ಹಾಕಲಾಗುತ್ತದೆ. ಇದರೊಂದಿಗೆ 1000 ನೀರಿನ ಕ್ಯಾನ್ ಗಳನ್ನು ಸಹ ಪೂರೈಸಲು ಕ್ರಿಯಾಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಅದರೊಂದಿಗೆ ನಗರದಲ್ಲಿನ 3 ನೀರಿನ ಟ್ಯಾಂಕ್ ಹಾಗೂ ಸ್ಥಳೀಯ ಬೋರ್ ವೆಲ್ ಗಳಿಂದ ನೀರು ಪೂರೈಕೆ ಮಾಡಲು ವ್ಯವಸ್ಥೆಯಾಗಿದೆ . ಜೊತೆಗೆ ನೀರಿನ ಟ್ಯಾಂಕ್ ಗಳನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಹಾಗೂ ಸಂಚಾಲಕ ಪ್ರಮೋದ್ ಕುಮಾರ್, ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಇಂಜಿನಿಯರ್ ಎಸ್, ನಾಗರಾಜ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಬಾ ಸಾಬ್, ಆಹಾರ ಇಲಾಖೆ ಜಂಟಿ ನಿರ್ದೇಶಕರು ಎಂ. ಪಿ ಕೃಷ್ಣ ಕುಮಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಇದ್ದರು.




