Sunday, May 19, 2024

ಪ್ರಾಯೋಗಿಕ ಆವೃತ್ತಿ

ಜಗ್ಗಿ ವಾಸುದೇವ್ ಯೋಗ ಕೇಂದ್ರದಿಂದ 6 ಮಂದಿ ನಾಪತ್ತೆ| ಹೈಕೋರ್ಟ್‌ಗೆ ಪೊಲೀಸರ ವರದಿ

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ‘ಸದ್ಗುರು’ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಯೋಗ ಕೇಂದ್ರದಿಂದ 2016ರಿಂದ ಈವರೆಗೆ ಆರು ಮಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ, ಯಾರಾದರೂ ಮರಳಿ ಬಂದಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮದ್ರಾಸ್ ಹೈಕೋರ್ಟ್‌ಗೆ ಪೊಲೀಸರು ತಿಳಿಸಿದ್ದಾರೆ.

ತಿರುಮಲೈ ಎಂಬವರು ತಮ್ಮ ಸಹೋದರ ಗಣೇಶನ್‌ ಕಾಣೆಯಾಗಿದ್ದಾರೆ. ಅತನನ್ನು ಹುಡುಕಿಸಿಕೊಡಬೆಕೆಂದು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂಎಸ್ ರಮೇಶ್ ಮತ್ತು ಸುಂದರ್ ಮೋಹನ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಅರ್ಜಿಯಲ್ಲಿ ತಮಿಳುನಾಡು ಪೊಲೀಸರು ಪ್ರತಿವಾದಿಗಳಾಗಿದ್ದು, ಪೊಲೀಸರು ಅಫಿಡವಿಟ್ ಸಲ್ಲಿಸಿದ್ದಾರೆ.

ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ, “2016ರಿಂದ ಇಶಾ ಫೌಂಡೇಶನ್‌ನಿಂದ ನಾಪತ್ತೆಯಾದ ಅನೇಕ ಪ್ರಕರಣಗಳಿವೆ. ತನಿಖೆ ನಡೆಯುತ್ತಿದೆ. ಕೆಲವು ನಾಪತ್ತೆಯಾದ ವ್ಯಕ್ತಿಗಳು ಮರಳಿ ಬಂದಿರಬಹುದು. ಆದರೆ, ಆ ಬಗ್ಗೆ ಸಮಗ್ರ ವಿವರಗಳು ಲಭ್ಯವಿಲ್ಲ” ಎಂದು ಉಲ್ಲೇಖಿಸಿದ್ದಾರೆ.

ಪೀಠವು ಪೊಲೀಸರ ಅಫಿಡವಿಟ್‌ಅನ್ನು ಗಮನಿಸಿದೆ. ಏಪ್ರಿಲ್ 18ರೊಳಗೆ ತನಿಖೆಯ ಪ್ರಗತಿ ಬಗ್ಗೆ ವಿವರವಾದ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.

“2007ರಿಂದ ಇಶಾ ಫೌಂಡೇಶನ್‌ ಜೊತೆ ಚಾರಿಟಿ ಕೆಲಸದಲ್ಲಿ ತನ್ನ ಸಹೋದರ ತೊಡಗಿಸಿಕೊಂಡಿದ್ದರು. ಆದರೆ, ಅವರು 2023ರ ಮಾರ್ಚ್‌ನಲ್ಲಿ ಕೊಯಮತ್ತೂರಿನ ಇಶಾ ಫೌಂಡೇಶನ್‌ನಿಂದ ಕಾಣೆಯಾಗಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿರುಮಲೈ ತಿಳಿಸಿದ್ದಾರೆ.

ಗಣೇಶನ್ ಅವರ ಎರಡು ದಿನಗಳ ಮಾಹಿತಿ ಗೈರುಹಾಜರಿಯ ಬಗ್ಗೆ ಫೌಂಡೇಶನ್ ತನಗೆ ತಿಳಿಸಿತ್ತು ಎಂದು ತಿರುಮಲೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆತನ ಪತ್ತೆಗಾಗಿ ಮತ್ತು ಪ್ರಕರಣದ ತನಿಖೆಯಲ್ಲಿ ನ್ಯಾಯಾಲಯವು ಉಸ್ತುವಾರಿ ವಹಿಸಬೇಕೆಂದು ತಿರುಮಲೈ ಕೋರಿದ್ದಾರೆ.

ಗಣೇಶನ್ ಕಾಣೆಯಾದ ಕೆಲ ದಿನಗಳ ಬಳಿಕ, 2023ರ ಮಾರ್ಚ್‌ 5ರಂದು ಇಶಾ ಫೌಂಡೇಶನ್‌ನ ದಿನೇಶ್ ರಾಜಾ ಎಂಬವರು ಪೊಲೀಸ್ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ನಾಪತ್ತೆ ಪ್ರಕರಣ ದಾಖಲಾಗಿದೆ.

ಕಾಣೆಯಾದ ದೂರಿನ ಪ್ರಕಾರ, ಗಣೇಶನ್ ಅವರು 2023ರ ಫೆಬ್ರವರಿ 28ರ ಸಂಜೆ ಕೇಂದ್ರದಿಂದ ಹೊರಹೋಗಿದ್ದಾರೆ. ಅವರು ವೆಲ್ಲಿಯಂಗಿರಿ ಬೆಟ್ಟದ ಬಳಿಯ ಪೂಂಡಿ ದೇವಸ್ಥಾನಕ್ಕೆ ತೆರಳಲು ಆಟೋ ರಿಕ್ಷಾ ಹತ್ತಿದ್ದಾರೆ. ಅದಾದ ಬಳಿಕ ಅವರು ಕಾಣೆಯಾಗಿದ್ದಾರೆ.

ಆರು ಮಂದಿ ನಾಪತ್ತೆ ಬಗ್ಗೆ ಪ್ರತಿಕ್ರಿಯಿಸಿರುವ ಇಶಾ ಫೌಂಡೇಶನ್, “2016ರಿಂದ ಈಶಾ ಯೋಗ ಕೇಂದ್ರದಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ” ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!