ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನ ಶೈಲಿಯಿಂದ ಅಪಸ್ಮಾರವನ್ನು ಹತೋಟಿಯಲ್ಲಿ ಇಡಬಹುದು ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಮೊಹಮ್ಮದ್ ಸುಹೇಲ್ ಹೇಳಿದರು.
ಶ್ರೀರಂಗಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ,ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಮಂಡ್ಯ, ತಾಲೂಕು ಆರೋಗ್ಯ ಅಧಿಕಾರಿಗಳು ಶ್ರೀರಂಗಪಟ್ಟಣ ಹಾಗೂ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಅಪಸ್ಮಾರ ದಿನ 2024″ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬೆಳೆಯುತ್ತಿರುವ ದೇಶಗಳಲ್ಲಿ ಅಜ್ಞಾನ, ಅನಕ್ಷರತೆ ಮತ್ತು ಬಡತನ ಕಾರಣದಿಂದ ಈ ರೋಗಕ್ಕೆ ಬಹಳಷ್ಟು ಅಪವಾದ ಅಂಟಿಕೊಂಡಿದ್ದು.ಈ ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಲಾಗದಿದ್ದರು ಅಪಸ್ಮಾರ ಬರದಂತೆ ಅಥವಾ ತೀವ್ರತೆಯನ್ನು ಖಂಡಿತವಾಗಿ ಕಡಿಮೆ ಮಾಡಬಹುದಾಗಿದೆ.ನಿಯಮಿತ ವೈದ್ಯರ ಸಲಹೆಯಂತೆ ಔಷಧಿ ಸೇವಿಸಿದಲ್ಲಿ ಅಪಸ್ಮಾರ ಇತರರಂತೆ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು. ಅಪಸ್ಮಾರಕ್ಕೆ ಕಾರಣಗಳು, ಲಕ್ಷಣಗಳ ಕುರಿತು ವಿದ್ಯಾರ್ಥಿಗಳಿಗೆ ಮಾನವರಿಕೆ ಮಾಡಿಕೊಟ್ಟರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, 25 ಜನರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಅಪಸ್ಮಾರಕ್ಕೆ ತುತ್ತಾಗುತ್ತಾರೆ. ಈ ದೋಷ ಸಮಸ್ಯೆಗೆ ಕಡಿವಾಣ ಹಾಕೋಣ ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಂಬಲ ನೀಡೋಣವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಾಕ್ ಮತ್ತು ಶ್ರವಣ ತಜ್ಞ ಐಶ್ವರ್ಯ ಮಾತನಾಡಿದರು.
ಈ ವೇಳೆ ಪ್ರಾಂಶುಪಾಲ ಡಾ.ಪ್ರಸಾದ್ ಎಸ್ ಪಿ, ರೆಡ್ ಕ್ರಾಸ್ ಸಂಚಾಲಕ ಮೂರ್ತಿ ಐ ಆರ್, ಐಕ್ಯೂಎಸಿ ಸಂಚಾಲಕ ವಿನಯ ಪ್ರಭು ಎಸ್ ಎಂ, ಬ್ರೇನ್ ಹೆಲ್ತ್ ಕ್ಲಿನಿಕ್ ಜಿಲ್ಲಾ ಸಂಯೋಜಕ ಉಪೇಂದ್ರ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.




