ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಮೂರು ಚಿರತೆಗಳು ಏಕಕಾಲದಲ್ಲಿ ದಾಳಿ ನಡೆಸಿ ನಾಲ್ಕು ಕುರಿ ಬಲಿ ತೆಗೆದುಕೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಕೋಂ ಬಸವರಾಜು ಎಂಬುವರ ಕುರಿಗಳೇ ಬಲಿಯಾಗಿದ್ದು, ಇಂದು ಮುಂಜಾನೆ 3 ಗಂಟೆ ವೇಳೆಯಲ್ಲಿ ಚಿರತೆಗಳು ಗ್ರಾಮಕ್ಕೆ ನುಗ್ಗಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಬಲಿ ತೆಗೆದುಕೊಂಡಿದ್ದು, ಈ ಘಟನೆಯಿಂದ ಗ್ರಾಮಸ್ಥರು ಭಯಬೀತರಾಗಿದ್ದು, ಲಕ್ಷಾಂತರ ರೂ ಬೆಲೆಬಾಳುವ ನಾಲ್ಕು ಕುರಿಗಳ ಬಲಿಯಾಗಿದ್ದು, ಒಂದು ಮೇಕೆಗೆ ತೀವ್ರಗಾಯಗೊಂಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಶಿವರಾಜ್ ಹಾಗೂ ಸಿಬ್ಬಂದಿಗಳು, ಪೊಲೀಸರು, ಪಶು ಇಲಾಖೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮದ ಮುಖಂಡ ನಾಗಮಾದೇವು ಮಾತನಾಡಿ, ರತ್ನಮ್ಮ ಕುಟುಂಬ ಬೋವಿ ಜನಾಂಗದ ಕಡುಬಡವರಾಗಿದ್ದು,ಕುರಿ ಸಾಕಿ ಜೀವನ ನಡೆಸುತ್ತಿದ್ದರು. ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಜೊತೆಗೆ ಗ್ರಾಮದ ಜನರಿಗೆ ಭಯದ ವಾತಾವರಣ ನಿರ್ಮಿಸಿರುವ ಚಿರತೆಗಳನ್ನು ಬೋನು ಇಟ್ಟು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.




