ರಾಜ್ಯ ರಾಜಕಾರಣದಲ್ಲಿ ಹೆಸರಾಂತ ರಾಜಕಾರಣಿಗಳನ್ನ ನಾಡಿನ ರಾಜಕೀಯ ಪಡೆಸಾಲೆಗೆ ಕಳುಹಿಸಿದ ಕೀರ್ತಿ ರೇಷ್ಮೆ ನಾಡು ರಾಮನಗರಕ್ಕೆ ಸಲ್ಲುತ್ತದೆ.
ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಕೆ ವೀರಣ್ಣಗೌಡ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಟಿ.ರಾಮು, ಎಂ.ವರದೇಗೌಡ, ಪಿ.ಜಿ.ಆರ್.ಸಿಂಧ್ಯಾ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ರಾಜಕೀಯ ದಿಗ್ಗಜರಿಗೆ ನೆಲೆಯಾದ ರಾಮನಗರ ಜಿಲ್ಲೆಯ ಮತದಾರರು ಸೂಕ್ತ ಕಾಲದಲ್ಲಿ ಜಾಣ್ಮೆ ಪ್ರದರ್ಶಿಸುವ ಗುಣ ಹೊಂದಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದ ಸಾಮಾನ್ಯ ಕುಟುಂಬದ ಶಿಕ್ಷಕ ಪುಟ್ಟಸ್ವಾಮಿ ಗೌಡರ ಸುಪುತ್ರ ಸಿ.ಪಿ.ಯೋಗೇಶ್ವರ್ ಇಂದು ಜಯಭೇರಿ ಭಾರಿಸುವ ಮೂಲಕ ರಾಜ್ಯ ವಿಧಾನಸಭೆಗೆ ಆರನೇ ಬಾರಿ ಪ್ರವೇಶಿಸಿದ್ದಾರೆ.
ಶಿಂಷಾ ನದಿಪಾತ್ರವಿದ್ದರೂ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಬೇಕಾದ ಚನ್ನಪಟ್ಟಣದ ರೈತರಿಗೆ ನೆರವಾದವರು ಇಂದು ಚುನಾಯಿತರಾಗಿರುವ ಸಿ.ಪಿ.ಯೋಗೇಶ್ವರ್. ಚನ್ನಪಟ್ಟಣದ ಗಡಿಭಾಗದಲ್ಲಿರುವ ಇಗ್ಗಲೂರು ಬ್ಯಾರೆಜ್ ನಿಂದ ‘ಗರಕಹಳ್ಳಿ’ ಏತ ನೀರಾವರಿ ಯೋಜನೆ ಮೂಲಕ ಬರಿದಾಗಿದ್ದ 11 ಕೆರೆಗಳಿಗೆ ಜೀವಸೆಲೆ ತುಂಬುವಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ಆಧುನಿಕ ಭಗೀರಥ ಎಂದೇ ಕರೆಸಿಕೊಂಡಿದ್ದಾರೆ.
ವರುಣನ ಅವಕೃಪೆಗೆ ನಲುಗಿನ ವೇಳೆಯಲ್ಲಿ ಚನ್ನಪಟ್ಟಣದ ಅನ್ನದಾತ ಬಾನಿನತ್ತ ಮುಖವಿಟ್ಟು ದೃಷ್ಠಿ ಹಾಯಿಸಿ ಮಳೆರಾಯನನ್ನು ಪ್ರಾರ್ಥಿಸುವ ಸಂಕಷ್ಟ ಅರಿತ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್ ದೂರದೃಷ್ಠಿಯಿಂದ ಬೆಟ್ಟದೊಡಲು ಸೀಳಿ ಹರಿದು ಬಂದಳಾ ಗಂಗೆ ನೂರಾರು ಗ್ರಾಮದ ಕೆರೆಯಂಗಳಕ್ಕೆ ಎಂಬ ನಾಣ್ನುಡಿ ಕಾರ್ಯ ರೂಪಕ್ಕೆ ಬಂತು.
ಬಹುತೇಕ ತೆಂಗಿನ ಫಸಲನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದ ಅನ್ನದಾತ ತಾನು ದುಡಿದಿದ್ದನ್ನೆಲ್ಲ ಒಟ್ಟುಗೂಡಿಸಿ ಗಂಗೆ ಹರಸಲು ಪಾತಾಳಕ್ಕೆ ಕೊಳವೆ ಬಾವಿ ತೋಡಲು ಮುಂದಾದರೆ ಸಾವಿರ ಅಡಿ ಕೊರದರೂ ನೀರಿನ ಲಭ್ಯತೆ ಅಷ್ಟಕಷ್ಟೇ. ಇದನ್ನು ಮನಗಂಡ ಸಿಪಿವೈ ಕಣ್ವ ಏತನೀರಾವರಿ ಯೋಜನೆ ಮೂಲಕ 120 ಹಾಗೂ ಮಾಕಳ್ಳಿ ಏತನೀರಾವರಿ ಯೋಜನೆ ಮೂಲಕ 10 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬರಿದಾಗಿದ್ದ ಗೊಂಬೆನಾಡು ಅಚ್ಚ ಹಸಿರಿನಿಂದ ಕಂಗೊಳಿಸುವ ಕತೃತ್ವ ಶಕ್ತಿ ಮೆರೆದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳನ್ನು ಸ್ಥಾಪನೆಗೊಂಡಿರುವ ಚನ್ನಪಟ್ಟಣಕ್ಕೆ ಅಗತ್ಯವಾಗಿದ್ದ ನ್ಯಾಯಾಲಯ ಸಂಕೀರ್ಣ, ಅಂಬೇಡ್ಕರ್ ಭವನ ಸೇರಿದಂತೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಆಡಳಿತ ಪಕ್ಷಗಳ ಬೆನ್ನು ಬಿದ್ದ ಸಿಪಿವೈ ಪಕ್ಷಾಂತರಿ ಎಂಬ ಕೊಂಕು ನುಡಿಗೂ ಪಾತ್ರರಾದರು.
ಗೆಲುವಿನಿಂದ ಬೀಗದೇ, ಸೋಲಿನಿಂದ ಧೃತಿಗೆಡದೇ ಕ್ಷೇತ್ರದ ಮತದಾರನ ಬಾಂಧವ್ಯಕ್ಕೆ ಚ್ಯುತಿ ಬಾರದಂತೆ ನಿರಂತರ ಸಂಪರ್ಕದಲ್ಲಿದ್ದ ಸಿಪಿವೈ ಛಲಗಾರಿಕೆಗೆ ಚನ್ನಪಟ್ಟಣ ಕ್ಷೇತ್ರದ ಎಲ್ಲ ಸಮಾಜದ ಹಲವು ಜಾತಿಯ ಮತದಾರರು ಪಕ್ಷಾತೀತವಾಗಿ ಬೆಂಬಲಿಸಿದ ಫಲವಾಗಿ ಸತತ ಎರಡು ಸೋಲುಗಳ ನಂತರ ವಿಧಾನಸಭೆಗೆ ಪುನರಾಯ್ಕೆಯಾಗಿದ್ದಾರೆ.
ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರ ದಾಹಕ್ಕೆ ಮಣೆ ಹಾಕದ ಬೊಂಬೆ ನಾಡಿನ ಮತದಾರ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಅರ್ಜುನನ್ನಾಗಿಸದೇ ಅಭಿಮನ್ಯುವಾಗಿಯೇ ಮುಂದುವರಿಸಿದ್ದು, ರಾಜಕೀಯ ಭೀಷ್ಮ ಹೆಚ್.ಡಿ.ದೇವೇಗೌಡರ ರಾಜಕೀಯ ಮುಸ್ಸಂಜೆಗೆ ಮತ್ತಷ್ಟು ಮಂಜು ಆವರಿಸಿದೆ.
ಅಂತಿಮವಾಗಿ ಸಂಕಷ್ಟದಲ್ಲಿ ನೆರವಾದ ಹಸ್ತದ ಆಸರೆ, ಡಿ.ಕೆ ಸಹೋದರರ ಸಹಕಾರ, ಸೋಲಿನ ಅನುಕಂಪ ಸಿ.ಪಿ.ಯೋಗೇಶ್ವರ್ ಗೆ ಗೊಂಬೆನಾಡಿನ ಸೂತ್ರದಾರನ ಸಾರಥ್ಯ ನಿರ್ವಹಿಸಲು ಅನುವು ಮಾಡಿದೆ. ಇದೇ ಪ್ರಜಾಪ್ರಭುತ್ವದ ದೊಡ್ಡ ಗೆಲುವು…




