ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಲಕ್ಷ ಕೋಟಿ ಸಾಲ ಮಾಡಿದ್ದು,ಬಡವರು,ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆ ಹೇರಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಕೂಡ ತೆರಿಗೆ ಕಟ್ಟುವ ಸ್ಥಿತಿಗೆ ತಂದಿದ್ದೀರಿ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಮೇಲೆ ತೆರಿಗೆ ಹಾಕಿರಲಿಲ್ಲ. ಅದಕ್ಕೆ ಸಾಕ್ಷ್ಯ ನೀಡುತ್ತೇನೆ. ಸಿದ್ದರಾಮಯ್ಯ ಅವರು ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ಸಾಲ ನಿಮ್ಮ ತಲೆಯ ಮೇಲೆ ಬರುತ್ತದೆ. ಮತ್ತಷ್ಟು ತೆರಿಗೆ ನಿಮ್ಮ ಮೇಲೆ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮದ್ಯಪ್ರಿಯರ ಮೇಲೆ ನೀವು ಹೊರೆ ಹೇರಿದ್ದೀರ, ಕ್ವಾರ್ಟರ್ ಮದ್ಯದ ಮೇಲೆ ₹50 ಹೆಚ್ಚಳ ಮಾಡಿ ಅವರ ಜೇಬಿಗೂ ಕತ್ತರಿ ಹಾಕಿದ್ದೀರಾ. ಬಿಜೆಪಿ ಮೇಲೆ ಶೇ.40 ಕಮಿಷನ್ ಆರೋಪ ಮಾಡಿ ಲೋಕಾಯುಕ್ತ ತನಿಖೆಗೆ ಸಾಕ್ಷಿಯನ್ನೇ ಕೊಡಲಿಲ್ಲ, ಆಗ ಕೇಸ್ ಬಿಜೆಪಿ ಪರವಾಯಿತು. ಹಾಲು, ಪೆಟ್ರೋಲ್, ಡಿಸೇಲ್, ವಿದ್ಯುತ್ ದರ ಹೆಚ್ಚಳ ಮಾಡಿ ಮಧ್ಯಮ ವರ್ಗದವರಿಗೂ ವಿನಾಕಾರಣ ತೊಂದರೆ ಕೊಟ್ಟಿದ್ದೀರ ಎಂದು ಆರೋಪಿಸಿದರು.
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ
ಅಣೆಕಟ್ಟೆ ಕಟ್ಟಿಸಿದರು. ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ನೀರು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಣೆಕಟ್ಟೆ ಕಟ್ಟಿಸಿದರೆ ಅದು ನಾಳೆಗೇ ಬಿದ್ದೋಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಅಲ್ಲಾಡಿಕೊಂಡು ಮೇಕೆದಾಟು ಪಾದಯಾತ್ರೆ ಮಾಡಿದರು, ಈಗ ಏನಾಯ್ತು ಅದು, ಒಟ್ಟಿನಲ್ಲಿ ಮೇಕೆ ತಲೆನೇ ಕೊಯ್ದು ತಿಂದು ಹಾಕಿದ್ದೀರಿ ಎಂದು ವ್ಯಂಗ್ಯವಾಡಿದರು.
ವಕ್ಫ್ ನವರು ಟಿಪ್ಪು ಸುಲ್ತಾನ್ ಕಾಲದ ಪತ್ರ ಇಟ್ಟುಕೊಂಡು ದೇವಾಲಯ ಮತ್ತು ರೈತರ ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾರೆ. ಮೈಷುಗರ್ ಆಸ್ತಿಯನ್ನು ವಕ್ಪ್ ಬೋರ್ಡ್ ಎಂದು ನಮೂದಿಸಲಾಗಿದೆ.ಇನ್ನು ಮಂಡ್ಯದ ಕಥೆ ಮುಗಿತು. ಶ್ರೀರಂಗಪಟ್ಟಣದಲ್ಲಿಗೋಡೆಯ ಮೇಲೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕೆತ್ತನೆ ಇದೆ, ಆದರೂ ಅದನ್ನ ಮಸೀದಿ ಮಾಡಿದ್ದಾರೆ ಎಂದು ಆರೋಪಿಸಿದರು.
ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸದನದಲ್ಲಿ ಮಂಡಿಸಿ ಜಾರಿಗೆ ತರಲಿದೆ.ಈ ಬಗ್ಗೆ ರೈತರು ಭಯ ಪಡುವುದು ಬೇಡ, ನಮ್ಮ ಕರ್ನಾಟಕದಲ್ಲಿ ವಕ್ಫ್ ಉಪಟಳ ಹೆಚ್ಚಿದೆ, ಸರ್.ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಯನ್ನೇ ವಕ್ಫ್ ಆಸ್ತಿ ಎಂದು ಹೇಳುತ್ತಿದೆ, ಇದು ಅಪಾಯಕಾರಿ ಸಂಗತಿ ಎಂದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ತರಲು ಹೊರಟ ಸರ್ಕಾರದ ನಡೆಯನ್ನು ವಿರೋಧಿಸಿದ್ದೇವೆ. ರಾಜ ಮಹಾರಾಜರ ಕಾಲದಲ್ಲಿ ಸಾಕಷ್ಟು ಜಮೀನನ್ನು ದಾನ ಮಾಡಲಾಗಿದೆ. ಅಂತಹ ಜಮೀನನ್ನು ವಕ್ಫ್ ತನ್ನದೆಂದು ಹೇಳುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ಶಾಸಕ ಬೈರತಿ ಬಸವರಾಜ ಮಾತನಾಡಿ,ನಾನು ಮಂಡ್ಯ ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಬಂದು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದರು. ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೋಲಾರ ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪೀಹಳ್ಳಿ ರಮೇಶ್, ಟಿ.ಶ್ರೀಧರ್, ಶಿವಲಿಂಗೇಗೌಡ, ಅಶೋಕ್ ಕುಮಾರ್, ಮಂಗಳಾ,ಶ್ರೀಧರ್ ಮೊದಲಾದ ನಾಯಕರು ಭಾಗವಹಿಸಿದ್ದರು.




