ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದುರುದ್ದೇಶ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಭಾನುವಾರ ಶಾಸಕ ಪಿ ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಮಳವಳ್ಳಿ ಪಟ್ಟಣದ ತಾ. ಪಂ ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಸಾವಿರಾರು ಮಂದಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ದಾರಿಯುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಪರ ಜಯಘೋಷಗಳ ಜೊತೆಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರದ ಎನ್ ಡಿ ಎ ಸರ್ಕಾರ, ಪ್ರಧಾನಿ ಮೋದಿ. ಸಚಿವರಾದ ಅಮಿತ್ ಷಾ, ಕುಮಾರಸ್ವಾಮಿ ವಿರುದ್ಧ ಘೋಷಣೆ ಗಳನ್ನು ಕೂಗಿದರು.

ಇಲ್ಲಿನ ಅನಂತ ರಾಮ್ ವೃತ್ತವನ್ನು ಮೆರವಣಿಗೆ ತಲುಪಿ, ವೃತ್ತದ ಸುತ್ತ ಕುಳಿತು ಕೆಲಕಾಲ ರಸ್ತೆ ಸಂಚಾರವನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವೃತ್ತದಲ್ಲಿ ಕೆಲ ಕಾರ್ಯಕರ್ತರು ಉರುಳು ಸೇವೆ ಮಾಡಿ ಸಿದ್ದರಾಮಯ್ಯ ಪರ ತಮ್ಮ ಅಭಿಮಾನ ಮೆರೆದರು.
ಎನ್ ಡಿ ಎ ಸರ್ಕಾರದ ಕೈಗೊಂಬೆ ರಾಜ್ಯಪಾಲ
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು, ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಸಂವಿಧಾನದ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಕೇಂದ್ರದ ಎನ್ ಡಿ ಎ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ ರಾಜ್ಯಪಾಲರು ವ್ಯಕ್ತಿಯೊಬ್ಬರ ಖಾಸಗಿ ದೂರು ಆಧರಿಸಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡುವ ಮೂಲಕ ಸಂವಿಧಾನ ದತ್ತವಾಗಿ ಆಯ್ಕೆಯಾದ ಸರ್ಕಾರವನ್ನು ಅಭದ್ರಗೊಳಿಸುವ ಸಂವಿಧಾನ ವಿರೋಧಿ ಕಾರ್ಯ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿ ಎಂ ಯಡಿಯೂರಪ್ಪ, ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವಾರು ನಾಯಕರ ವಿರುದ್ದ ತನಿಖಾ ಸಂಸ್ಥೆಗಳೇ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ತಿಂಗಳುಗಳೇ ಉರುಳುತ್ತಿದ್ದರೂ ಈವರೆಗೂ ಅನುಮತಿ ನೀಡದ ರಾಜ್ಯಪಾಲರು, ಸರ್ಕಾರದ ಯಾವ ತನಿಖಾ ಸಂಸ್ಥೆ ಅನುಮತಿ ಕೇಳದಿದ್ದರೂ ಕೇವಲ ಖಾಸಗಿ ವ್ಯಕ್ತಿ ಗಳ ದೂರು ಆಧರಿಸಿ ತನಿಖೆಗೆ ಅನುಮತಿ ನೀಡಿರುವುದು ಎನ್ ಡಿ ಎ ನಾಯಕರ ರಾಜಕೀಯ ಕುತಂತ್ರವಾಗಿದ್ದು ಇಂತಹ ಬೆದರಿಕೆಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದು ಎಚ್ಚರಿಸಿದರು.
ಮಾಜಿ ಎಂಎಲ್ಸಿ ಮರಿತಿಬ್ಬೇ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ ಎಸ್ ಶಿವಣ್ಣ, ಅವರು ಸಹ ಮಾತನಾಡಿ ರಾಜ್ಯಪಾಲರ ನಡೆಯನ್ನು ಖಂಡಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ಸಂಬಂಧ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಮಹಿಳಾ ಘಟಕದ ಅಧ್ಯಕ್ಷರಾದ ಸುಷ್ಮಾರಾಜು, ಸುಜಾತ ಕೆ ಪುಟ್ಟು, ಕೆಡಿಪಿ ಸದಸ್ಯ ಶಶಿಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಪುರಸಭೆ ಸದಸ್ಯರಾದ ರಾಜಶೇಖರ್ ಶಿವಸ್ವಾಮಿ, ಪ್ರಮೀಳಾ ಮುಖಂಡರಾದ ಜಿ. ಪಂ ಮಾಜಿ ಸದಸ್ಯ ಆರ್ ಎನ್ ವಿಶ್ವಾಸ್, ಕೆ ಜೆ ದೇವರಾಜು, ಲಿಂಗರಾಜು, ಬಸವೇಶ್, ಮಾಧು, ಕೃಷ್ಣ, ಚಂದ್ರ ಕುಮಾರ್, ಶಿವಲಿಂಗ, ಶಾಂತರಾಜು, ಕಿರಣ್ ಹಾಗೂ ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.




