ಭಾರತದಲ್ಲಿ ನ್ಯೂಜಿಲೆಂಡ್ ತಂಡದ ಎದರು ಮೂರು ಟೆಸ್ಟ್ಗಳಲ್ಲಿ ಸೋತು ಮಂಕಾಗಿದ್ದ ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಅವರ ನೆಲದಲ್ಲಿಯೇ ಮೊದಲ ಟೆಸ್ಟ್ ಜಯಿಸಿ ಕೋಟ್ಯಾಂತರ ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಸಂತಸ ತಂದಿದೆ.
ಜಸ್ಪ್ರೀತ್ ಬೂಮ್ರಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು 295 ರನ್ನುಗಳ ಭಾರೀ ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದೆ.
ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ ನೀಡಿದ 534 ರನ್ಗಳ ಸವಾಲನ್ನು ಬೆನ್ನಟ್ಟಿದ ಆಸೀಸ್ ಪಡೆ ಭಾರತದ ಬೌಲರ್ಗಳ ಕರಾರುವಾಕ್ ದಾಳಿಗೆ ಸಿಲುಕಿ 58.4 ಓವರ್ಗಳಲ್ಲಿ ತನ್ನ ಎರಡನೇ ಇನಿಂಗ್ಸ್ನಲ್ಲಿ 238 ರನ್ಗಳಿಗೆ ಆಲೌಟ್ ಆಯಿತು.
ಟೀಂ ಇಂಡಿಯಾ ಪರ ನಾಯಕ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ 2, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ತಲಾ ಒಂದೊಂದು ಒಂದು ವಿಕೆಟ್ ಕಿತ್ತು ಗೆಲುವಿನ ರೂವಾರಿಗಳಾದರು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 89, ಮಿಷಲ್ ಮಾರ್ಷ್ 47, ಅಲೆಕ್ಸ್ ಕ್ಯಾರಿ 36 ರನ್ ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಆಟಗಾರರಾರೂ 20ರ ಗಡಿ ದಾಟಲಿಲ್ಲ. ಈ ಮೂಲಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವು ವಿಶ್ವ ಚಾಂಪಿಯನ್ಷಿಪ್ ಫೈನಲ್ ತಲುಪಲು ಮತ್ತಷ್ಟು ಅವಕಾಶಗಳಿಗೆ ನಾಂದಿಯಾಗಿದೆ.
ಟಾಸ್ ಗೆದ್ದ ಭಾರತ ಮೊದಲ ಇನಿಂಗ್ಸ್ನಲ್ಲಿ 150 ರನ್ಗಳಿಗೆ ಆಲೌಟ್ ಆಗಿದ್ದರೆ, ಆಸೀಸ್ ಮೊದಲ ಇನಿಂಗ್ಸ್ನಲ್ಲಿ 104 ರನ್ಗಳಿಗೆ ಪತನವಾಗಿತ್ತು. ನಂತರ 2ನೇ ಇನಿಂಗ್ಸ್ ಆಡಿದ ಭಾರತ ಯಶಸ್ವಿ ಜೈಸ್ವಾಲ್ 161 ರನ್ ಹಾಗೂ ವಿರಾಟ್ ಕೊಹ್ಲಿ 100 ರನ್ ಅವರ ಅಮೋಘ ಶತಕದ ನೆರವಿನಿಂದ 134.3 ಓವರ್ಗಳಲ್ಲಿ 6 ವಿಕೆಟ್ಗೆ 487 ರನ್ ಪೇರಿಸಿ ಆಸ್ಟ್ರೇಲಿಯಾಗೆ 534 ರನ್ಗಳ ಗುರಿಯನ್ನು ನೀಡಿತ್ತು.
ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಒಂದೂವರೆ ವರ್ಷಗಳ ಬಳಿಕ ಮೂಡಿಬಂದ ಟೆಸ್ಟ್ ಶತಕ ಎಂಬುದು ವಿಶೇಷ. ಅಂದರೆ 2023ರ ಜುಲೈ 21ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಇದಾದ ಬಳಿಕ ಅವರು ಮೂರಂಕಿ ಮೊತ್ತ ದಾಖಲಿಸಿರಲಿಲ್ಲ.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಸೀಸ್ ಪಿಚ್ನಲ್ಲೇ ಅಬ್ಬರಿಸುವ ಮೂಲಕ ಮೂರನೇ ಟೆಸ್ಟ್ ವೃತ್ತಿಯ 30ನೇ ಶತಕ ಪೂರೈಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಮೂವತ್ತು ಶತಕ ಸಿಡಿಸಿದ ವಿಶ್ವದ 16ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈಶತಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲೂ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದರು. ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಹ್ಮನ್ ಅವರನ್ನು ಹಿಂದಿಕ್ಕಿದ್ದರು.
ಆರಂಭಿಕರಾಗಿ ಆಟವಾಡಿದ್ದ ಕೆ.ಎಲ್. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 201 ರನ್ಗಳ ಜೊತೆಯಾಟವಾಡಿ ಹೊಸ ಇತಿಹಾಸ ನಿರ್ಮಿಸಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆರಂಭಿಕ ಜೋಡಿ ಗವಾಸ್ಕರ್ ಹಾಗೂ ಶ್ರೀಕಾಂತ್ ಹೆಸರಿನಲ್ಲಿತ್ತು. 1986 ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈ ಜೋಡಿಯು ಮೊದಲ ವಿಕೆಟ್ಗೆ 191 ರನ್ ಕಲೆ ಹಾಕಿ ಇತಿಹಾಸ ನಿರ್ಮಿಸಿದ್ದರು.
38 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿಯುವಲ್ಲಿ ಕೆ.ಎಲ್. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ.




