ಕಳೆದ ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸೇವೆ ಮಾಡುತ್ತಿದ್ದು, ಶ್ರೀರಂಗಪಟ್ಟಣದಿಂದ ಬಿಜೆಪಿ ಶಾಸಕನಾಗಿ ಆಯ್ಕೆಯಾಗಬೇಕೆಂಬುದು ಜನರ ತೀರ್ಮಾನ ವಾಗಿದೆ ಎಂದು ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಬಿಜೆಪಿಗೆ ಕಾರ್ಯಕರ್ತರ ಸೇರ್ಪಡೆ ಹಾಗೂ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲು ಇನ್ನೂ ಮೂರುವರೆ ವರ್ಷಗಳಿವೆ. ಆದರೂ ಇಂದು ಸುಮಾರು 400 ಮಂದಿ ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಪಕ್ಷ ಸೇರ್ಪಡೆಯಾಗಿ ಆಗಿದ್ದಾರೆ. ಬಿಜೆಪಿ ಪಕ್ಷ ಬಡ ರೈತನ ಮಗನಾದ ನನಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಕ್ಷೇತ್ರದ ಜನ ನನಗೆ 42,500 ಮತಗಳನ್ನು ನೀಡಿದರು. ಚುನಾವಣೆಯಲ್ಲಿ ಸೋತರೂ ಸಹ ಸವಲಾಗಿ ಸ್ವೀಕರಿಸಿ ಜನರ ಜೊತೆ ಇದ್ದೇನೆ. ನಾನು ಬದುಕಿದ್ದರೂ, ಗೆದ್ದರೂ,ಸೋತರೂ ಶ್ರೀರಂಗಪಟ್ಟಣದಲ್ಲೇ.ಇದೇ ನನ್ನ ಜನ್ಮ ಭೂಮಿ, ನನ್ನ ಕರ್ಮ ಭೂಮಿ, ನಾನು ಸತ್ತರೆ ಇಲ್ಲೇ ಹೂಳ ಬೇಕು. ನಾನು ಎಂದಿಗೂ ಪಲಾಯನ ಮಾಡುವ ನಾಯಕನಲ್ಲ ಎಂದರು.

ಬಿಜೆಪಿ ಸದೃಢ
ಕ್ಷೇತ್ರದಲ್ಲಿ ದಿನೇ ದಿನೇ ಬಿಜೆಪಿ ಸದೃಢವಾಗುತ್ತಿದೆ. ಇದಕ್ಕೆ ಈ ಭಾಗದ ಎಲ್ಲಾ ನಾಯಕರ ಆಶೀರ್ವಾದವಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಸೊಸೈಟಿ,ಹಾಲಿನ ಡೈರಿ ಚುನಾವಣೆಗಳಲ್ಲಿ ಪಕ್ಷವನ್ನು ಸದೃಢಗೊಳಿಸುವುದು ನನ್ನ ಗುರಿ. ಬಿಜೆಪಿ ಶಾಸಕನಾಗಿ ಶ್ರೀರಂಗಪಟ್ಟಣದಲ್ಲಿ ಆಯ್ಕೆಯಾಗಬೇಕೆಂಬುದು ಜನರ ತೀರ್ಮಾನವಾಗಿದ್ದು, ಶಾಸಕರಿಗಿಂತ ಹೆಚ್ಚಾಗಿ ಕ್ಷೇತ್ರದ ಜನರು ಅವರ ಮನೆ ಸಮಾರಂಭಗಳಿಗೆ ನನ್ನನ್ನು ಮನೆ ಮಗನಂತೆ ಕರೆಯುತ್ತಿರುವುದು ಸಂತೋಷ ತಂದಿದೆ ಎಂದರು.
ವಕ್ಫ್ ಸಮಸ್ಯೆ ಬಗೆಹರಿಸುವೆ, ಮಹದೇವ ಪುರದ ಚಿಕ್ಕಮ್ಮ ದೇವಸ್ಥಾನ 200-300 ವರ್ಷಗಳಿಂದ ಇತ್ತು.ಆದರೆ ಚಿಕ್ಕಮ್ಮ ದೇವಸ್ಥಾನದ ಜಾಗ ಆರ್ ಟಿ ಸಿಯಲ್ಲಿ ಮುಸ್ಲಿಮರ ಸ್ಮಶಾನ ಖಬರಸ್ತಾನ ಎಂದು ವಕ್ಫ್ ಹೇಳಿತ್ತು. ನಾನು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಸಂಸದ ಯದುವೀರ್ ಅವರನ್ನು ಇಲ್ಲಿಗೆ ಕರೆತರುವ ವಿಷಯ ತಿಳಿದ ಅಧಿಕಾರಿಗಳು ಖಬರಸ್ತಾನ ಹೆಸರು ತೆಗೆದರು. ಹಾಗೆಯೇ ಚಂದಗಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1964 ರಿಂದಲೂ ಸರ್ಕಾರಿ ಶಾಲೆ ಎಂದು ದಾಖಲಾಗಿತ್ತು.ಈಗ ಅದನ್ನು ವಕ್ಫ್ ಮಾಡಿದ್ದಾರೆ. ಈ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರನ್ನು ಕರೆತರಲು ಪ್ರಯತ್ನಿಸಿದಾಗ ಕೆಲವರು ಶಾಮಿಯಾನ ಹಾಕದಂತೆ ತಡೆಯುವ ಕೆಲಸ ಮಾಡಿದ್ದರು. ಆದರೆ ಅಂಬೇಡ್ಕರ್ ಅವರ ಸಂವಿಧಾನದಡಿ ವಿರೋಧ ಪಕ್ಷದ ನಾಯಕ ಎಂದರೆ ಶ್ಯಾಡೋ ಚೀಫ್ ಮಿನಿಸ್ಟರ್.ಅವರನ್ನು ಎಲ್ಲಿಗೆ ಬೇಕಾದರೂ ಕರೆದು ಕೊಂಡು ಬರಬಹುದು. ಅವರನ್ನು ಯಾರೂ ತಡೆಯುವಂತಿಲ್ಲ. ಅದರಂತೆ ಅವರನ್ನು ಕರೆತಂದು ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ.ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರು.
ಕೊತ್ತತ್ತಿ ಗ್ರಾಮದಲ್ಲಿ ಬ್ಯಾಲಕಮ್ಮ ದೇವಸ್ಥಾನ ಹಾಗೂ ರೈತ ಸೋಮಶೇಖರ್ ಜಮೀನು ವಕ್ಫ್ ಆಸ್ತಿ ಮಾಡಿದ್ದರು. ನಾನು ಬಿಜೆಪಿ ಕಾರ್ಯಕರ್ತರೊಂದಿಗೆ ತೆರಳಿ ಜಿಲ್ಲಾಧಿಕಾರಿ,ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಎರಡು ದಿನಕ್ಕೆ ಆರ್ ಟಿ ಸಿ ಯಲ್ಲಿ ವಕ್ಫ್ ಹೆಸರಿನಿಂದ ಮುಕ್ತವಾಯಿತು.ಹಾಗೆಯೇ ತಗ್ಗಹಳ್ಳಿ, ಹಳುವಾಡಿ, ಪುರ ಮೊದಲದ ಕಡೆ ವಕ್ಫ್ ಸಮಸ್ಯೆ ಇದ್ದು ಇದನ್ನು ಬಗೆಹರಿಸಲು ನಿಮ್ಮ ಜೊತೆ ನಾನಿರುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಬೈರತಿ ಬಸವರಾಜ್,ಮಾಜಿ ಸಂಸದ ಮುನಿಸ್ವಾಮಿ,ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್,ತಾಲ್ಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಮತ್ತಿತರರಿದ್ದರು.




