ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರಗಳ ಬಗ್ಗೆ ಮಾಡಿರುವ ಆರೋಪಗಳು ಆಧಾರ ರಹಿತ ಎಂದು ಗ್ರಾ.ಪಂ ಸದಸ್ಯರು ಹೇಳಿದ್ದು, ಬಹಿರಂಗ ಚರ್ಚೆಗೆ ಮುಂದಾಗಲಿ ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಬಿ.ಕೆ.ಸತೀಶ್ ಸವಾಲು ಹಾಕಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ ಸದಸ್ಯ ಕೆಂಪೇಗೌಡ ಎಂಬುವವರು ಅನ್ಯಕ್ರಾಂತವಾಗದ ಗೋಮಾಳದಲ್ಲಿ ಸಾಗುವಳಿ ಮಾಡಲು ಮಾತ್ರ ಅವಕಾಶ ನೀಡಿದ್ದು, ಇಂತಹ ಸ್ಥಳದಲ್ಲಿ ಚಹಾ ಅಂಗಡಿ ಅನುಮತಿ ಪಡೆದು ಹುಕ್ಕಾಬಾರ್ ಪ್ರಾರಂಭಿಸಿರುತ್ತಾರೆ. ಹುಕ್ಕಾ ಬಾರ್ ರದ್ಧತಿಗೆ ಆದೇಶವಾದ ನಂತರವೂ ಹಿಂಬಾಗಿಲಿಂದ ನಡೆಸುತ್ತಿದ್ದರು. ತದನಂತರ ಅವರ ಆಪ್ತರ ಮನೆಯಲ್ಲಿ ಮುಂದುವರೆಸಿದ್ದರು ಎಂದು ದೂರಿದರು.
ಇಷ್ಟಲ್ಲದೇ ಅಕ್ಟೋಬರ್‌ನಲ್ಲಿ ಅಪ್ರಾಪ್ತರು ಕಳ್ಳತನ ಮಾಡಿ, ಹುಕ್ಕಾ ಸೇವನೆ ಮಾಡಿರುವ ಸಂಬಂಧ ಸದರಿ ಗ್ರಾ.ಪಂನ ಸದಸ್ಯರು ಅಪ್ರಾಪ್ತರ ಪೋಷಕರಿಗೆ ಬೆದರಿಕಯೊಡ್ಡಿ, ತಲಾ 50 ಸಾವಿರ ನೀಡುವಂತೆ ಒತ್ತಡ ಹೇರಿದ್ದು, ಜಗಳಕ್ಕೂ ಕಾರಣವಾದ ಘಟನೆಗಳು ನಡೆದಿವೆ ಎಂದು ದೂರಿದರು.
ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಜಿ.ಪಂ ಸಿಇಓ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ. ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ಕಂದಾಯ ಇಲಾಖೆಯ ಅನುಮತಿಯಿಲ್ಲದೇ ಗ್ರಾ.ಪಂನಲ್ಲಿ ಅಕ್ರಮ ಖಾತೆ ಮಾಡಿಕೊಂಡು ಮನೆ ಮಾಡಿಕೊಂಡಿದ್ದು, ಈ ಮನೆ ಬಿಡಿಸಲು ಹೋರಾಟದ ಮೂಲಕ ಕ್ರಮ ವಹಿಸಲಾಗಿದೆ ಎಂದರು.
ಇದುವರೆಗೂ ನಾವು ಮಾಡಿರುವ ಆರೋಪಗಳು ಆಧಾರ ರಹಿತ ಎಂದು ಹೇಳುವ ಬೂದನೂರು ಗ್ರಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರು ಜಿ.ಪಂ ಸಿಇಓ ರಚಿಸಿರುವ ತನಿಖಾ ವರದಿಗೆ ಕಾಯದೇ ನಮ್ಮ ವಿರುದ್ಧ ಆರೋಪ ಮಾಡುವುದು ಅವರ ಸ್ಥಾನಕ್ಕೆ ಘನತೆ ತಕ್ಕುದ್ದಲ್ಲ ಎಂದರು.
ಬೂದನೂರು ಗ್ರಾ.ಪಂನಲ್ಲಿ ಇದುವರೆಗೂ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಯಾವ ಕೆಲಸಗಳು ಪಾರದರ್ಶಕತೆಯಿಂದ ಕೂಡಿಲ್ಲ, ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎನ್ನುವುದೇ ಆದರೆ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಗ್ರಾ.ಪಂಗೆ ಬಂದಿರುವ ಅನುಪಯುಕ್ತ ವಸ್ತುಗಳು ಸೇರಿದಂತೆ ಗ್ರಾ.ಪಂಚಾಯಿತಿ ಆಡಳಿತ ವ್ಯವಸ್ಥೆಯ ವ್ಯವಹಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಎಸೆದರು.
ಗೋಷ್ಠಿಯಲ್ಲಿ ಗ್ರಾ.ಪಂಚಾಯಿತಿ ಮಾಜಿ ಸದಸ್ಯ ಕುಳ್ಳ, ಸಮಿತಿಯ ಸವಿತಾ, ನಾಗರತ್ನ ಇದ್ದರು.




