ಮಂಡ್ಯದ ಡಿಸಿ ಆಫೀಸ್ ಪಕ್ಕದ ಕಾವೇರಿ ಉದ್ಯಾನವನದಲ್ಲಿ ಚಿತ್ರಕೂಟ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ‘ಅಪರಿಚಿತ ಓದುಗರು’ ಕಾರ್ಯಕ್ರಮದಲ್ಲಿ ಪುಸ್ತಕಪ್ರೇಮಿಗಳು ಒಟ್ಟಿಗೆ ಕೂತು ತಮ್ಮ ಇಷ್ಟದ ಪುಸ್ತಕಗಳನ್ನು ತಂದು ಓದಿದರು. ಯುವಜನತೆ ರೀಲ್ಸ್ನಲ್ಲಿ ಮುಳುಗಿರುವಾಗ ಓದುವ ಸಂಸ್ಕೃತಿ ಹೆಚ್ಚಿಸುವ ಈ ಪ್ರಯತ್ನ ಸಕ್ಕರೆ ನಾಡಿನ ಸಾಹಿತ್ಯಾಸಕ್ತರ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.

ಬದುಕು ಬರಿದಾದಾಗ ಪುಸ್ತಕ ತೆರೆಯಿರಿ
ಇವತ್ತು ಭಾನುವಾರ ನಮ್ಮ ಮಂಡ್ಯದ ಎಲ್ಲ ಮನೆಗಳಲ್ಲಿ ಬಾಡೂಟ ಕೈಬೀಸಿ ಕರೆಯುವುದು ಸಾಮಾನ್ಯ. ಆದರೆ ಇಲ್ಲಿಗೆ ಬಂದ ಮೇಲೆ ಬೇರೆಯದೇ ಅನುಭವವಾಯಿತು. ಹಸಿರ ಹಾಸಿಗೆಯ ಮೇಲೆ ಕೂತು ಓದುವ ನಂತರ ಇತರರ ಓದಿನ ವಿಸ್ತಾರಗಳನ್ನು ತಿಳಿಸುವ ಅಪರಿಚಿತ ಓದುಗರು ಮಂಡ್ಯದ ಮಟ್ಟಿಗೆ ವಿನೂತನ ಪ್ರಯತ್ನ. ಬದುಕು ಬೇಸರವಾದಾಗ ಪುಸ್ತಕ ತೆರೆಯಿರಿ ಅಂಥ ಅನುಭವಿಗಳು ಹೇಳಿದ್ದಾರೆ. ಮನುಷ್ಯನ ಹೃದಯದ ಭಾವಕೋಶ ಪುಸ್ತಕ ಮತ್ತು ಪರಿಸರದಿಂದ ಮುದಗೊಳ್ಳುತ್ತದೆ. ಇಂಥ ಸೃಜನಶೀಲ ತಂಡದ ಸದಸ್ಯನೆಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದು ಸಾಮಾಜಿಕ ಚಿಂತಕ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಸಂಸ್ಥಾಪಕ ವಿನಯ್ಕುಮಾರ್ ಎಂ. ತಿಳಿಸಿದರು.
ಸಂವಿಧಾನಕ್ಕಿಂತ ದೊಡ್ಡ ಪುಸ್ತಕವಿಲ್ಲ..
ಇದು ಮಂಡ್ಯದಲ್ಲಿ ಅಪರಿಚಿತ ಓದುಗರ 2ನೇ ಭೇಟಿ. ಕಳೆದ ತಿಂಗಳು ತೇಜಸ್ವಿ ನೆಪದಲ್ಲಿ ಸೇರಿದ್ದೆವು. ಈ ಬಾರಿ ಬಾಬಾ ಸಾಹೇಬರು ಸಂವಿಧಾನ ಸಮರ್ಪಿಸಿ 75 ವರ್ಷಗಳಾದ ನೆನಪಿಗೆ ಪರಿವರ್ತನ ಸಂಸ್ಥೆಯ ಟಿ.ಡಿ. ನಾಗರಾಜ್ ಅವರು ಕೊಡುಗೆಯಾಗಿ ಕೊಟ್ಟ ಸಂವಿಧಾನದ ಪ್ರತಿರೂಪದೊಂದಿಗೆ ಈ ಕಾರ್ಯಕ್ರಮ ನಡೆಸಿದೆವು ಎಂದು ಚಿತ್ರಕೂಟ ಬಳಗದ ಅರವಿಂದ ಪ್ರಭು ತಿಳಿಸಿದರು.
ರಸ ಋಷಿ ಕುವೆಂಪು ಸ್ಮರಣೆ
ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿಗೌಡ ಮಾತನಾಡಿ, ‘ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು; ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಎಂದು ರಸ ಋಷಿ ಕುವೆಂಪು ಹೇಳಿದ್ದರು ನಾವು ಅವರ ಆಶಯವನ್ನು ಈಡೇರಿಸುವತ್ತ ಯುವಜನರನ್ನು ಸಜ್ಜುಗೊಳಿಸಬೇಕು ಎಂದರು.

ಪ್ರಕೃತಿಯ ಮಡಿಲಲ್ಲಿ ಓದುವ ಖುಷಿ
ಕಾವೇರಿ ಉದ್ಯಾನವನದ ಹಚ್ಚಹಸಿರಿನ ಪರಿಸರದ ನಡುವೆ ಕೂತು ಓದುವುದೇ ಒಂದು ರೀತಿಯ ಆಹ್ಲಾದಕರ ಕ್ಷಣ. ಎಲ್ಲರೂ ಅವರವರ ಪಾಡಿಗೆ ಇಷ್ಟದ ಪುಸ್ತಕ ತಂದು ಓದುತ್ತಾರೆ. ನಂತರ ಒಂದೆಡೆ ಕೂತು ಪರಸ್ಪರ ಚರ್ಚೆ ಶುರುಮಾಡುತ್ತಾರೆ. ಕೊನೆಗೆ ತಾವು ಓದಿದ ಪುಸ್ತಕದ ಕುರಿತು ಒಂದೆರೆಡು ಮಾತನಾಡುತ್ತಾರೆ. ಕೊನೆಗೆ ಕಬ್ಬಿನಹಾಲು ಕುಡಿದು ಅಲ್ಲಿಂದ ನಿರ್ಗಮಿಸುತ್ತೇವೆ ಎಂದು ಅಪರಿಚಿತ ಓದುಗರು ತಂಡದ ಪೂರ್ಣಚಂದ್ರ ಹೇಳಿದರು.
ಅಸ್ಪೃಶ್ಯತೆ ಜಗತ್ತಿಗೆ ಅಂಟಿದ ಶಾಪ
ಹಿರಿಯ ಪತ್ರಕರ್ತ, ಜನಪದ ಗಾಯಕ ದೇವರಾಜ್ ಕೊಪ್ಪ ಮಾತನಾಡಿ, ಸಂವಿಧಾನ ಬರೆದು 75 ವರ್ಷಗಳಾದರೂ ದಲಿತನೊಬ್ಬ ದೇಗುಲ ಪ್ರವೇಶಿಸಲು ಇನ್ನೂ ಸಂವಿಧಾನವನ್ನೇ ಆಶ್ರಯಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹನಕೆರೆ ಘಟನೆ ಇದನ್ನು ಸಾಕ್ಷೀಕರಿಸುತ್ತದೆ. ಇಲ್ಲಿಗೆ ಬರುವಾಗ ಖಾಲಿ ಕೈಯಲ್ಲಿ ಬಂದಿದ್ದ ಕಾರಣ, ಯಾರೋ ತಂದಿಟ್ಟಿದ್ದ ಮಯೂರ ಓದುತ್ತಿದ್ದೆ. ನೇಪಾಳದ ಕವಯಿತ್ರಿ ಸವಿತಾ ಅವರ ಸಂದರ್ಶನವಿತ್ತು. ನೇಪಾಳದಲ್ಲೂ ಅಸ್ಪೃಶ್ಯತೆ ಜೀವಂತವಾಗಿರುವುದು ಅಲ್ಲಿ ದಾಖಲಾಗಿತ್ತು. ಹೀಗೆ ಜಗತ್ತು ಅಸ್ಪೃಶ್ಯತೆಯಿಂದ ನರಳುತ್ತಿದೆ ಅನಿಸಿತು. ಸಮಾನತೆ ಮೂಡಬೇಕಾದರೆ ನಾವು ಹೆಚ್ಚು ಓದಬೇಕು. ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂದರು.

ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿಗೌಡ, ಸಾಮಾಜಿಕ ಚಿಂತಕ ಎಂ.ವಿನಯಕುಮಾರ್, ಚಿತ್ರಕೂಟ ಮುಖ್ಯಸ್ಥ ಅರವಿಂದ ಪ್ರಭು, ಚಿತ್ರ ನಿರ್ದೇಶಕ ವಿನಯಕುಮಾರ್ ಎಂ.ಜಿ., ಜನಪದ ಗಾಯಕ ದೇವರಾಜ್ ಕೊಪ್ಪ ಮತ್ತಿತರು ಉಪಸ್ಥಿತರಿದ್ದರು.




