Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಕ್ರಮ ತನಿಖೆಗೆ ಮೀನಾಮೇಷ ; ಕಿವಿಗೆ ಹೂವು ಮುಡಿದು ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಪಿಡಿಒ ಅವರು ಕಳೆದ 4 ವರ್ಷಗಳಿಂದ ನಡೆಸಿರುವ ಅಕ್ರಮ, ಭ್ರಷ್ಟಾಚಾರದ ತನಿಖೆಗೆ ಸಮಿತಿ ರಚಿಸಿದರೂ ತನಿಖೆಗೆ ಮುಂದಾಗದೆ ಜಿಪಂ ಸಿಇಒ ಅಮಿಷ, ಪ್ರಭಾವಕ್ಕೆ ಒಳಗಾಗಿ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸದಸ್ಯರು ಕಿವಿಗೆ ಹೂ ಮುಡಿದುಕೊಂಡು ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಿಗ್ಗೆ ಮಂಡ್ಯದ ಜಿ.ಪಂ. ಕಚೇರಿ ಮುಂದೆ ಬೂದನೂರು ಗ್ರಾಮ ಪಂಚಾಯತಿ ಅಕ್ರಮದ ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ 10 ದಿನದ ಧರಣಿಯಲ್ಲಿ ಜಮಾಯಿಸಿದ ಕಾರ್ಯಕರ್ತರು ಸುಳ್ಳು ಮಾಹಿತಿ ನೀಡಿ ವಂಚಿಸಿ ಜಿಪಂ ಸಿಇಒ ಕಿವಿಗೆ ಹೂ ಮುಡಿಸುತ್ತಿದ್ದಾರೆ. ಅದಕ್ಕೆ ನಾವೇ ಹೂ ಮುಡಿದುಕೊಂಡು ಪ್ರತಿಭಟಿಸುತ್ತಿರುವುದಾಗಿ ಹೇಳಿದರು.

ಗ್ರಾ.ಪಂ. ಆಡಳಿತದ ವಿರುದ್ದ ಮಾಡಿರುವ ಆರೋಪಗಳ ದಾಖಲೆ ತಿರುಚುವ ಮೂಲಕ ಅಧ್ಯಕ್ಷೆ, ಪಿಡಿಒ ರಕ್ಷಿಸಲು ಜಿ.ಪಂ ಸಿಇಒ ಹಾಗೂ ಜಿ.ಪಂ ತಾಪಂ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಗ್ರಾ.ಪಂ ಸದಸ್ಯರ ವಿರುದ್ದ ಕ್ರಮ ವಹಿಸಲು ಬೇಕಿದೆ. ಆದರೆ ಮಿತಿ ಮೀರಿದ ಭ್ರಷ್ಟಾಚಾರ ಎಸಗಿರುವ ಅಧ್ಯಕ್ಷೆ, ಪಿಡಿಓ ವಿರುದ್ದ ತನಿಖೆ ನಡೆಸಿದರೂ ಸಿಇಒ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ಗ್ರಾ.ಪಂ. ಅಧ್ಯಕ್ಷೆ, ಪಿಡಿಒ ಸೇರಿ ವರ್ಗ 2ರ ತೆರಿಗೆ ಸಂಗ್ರಹ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ‌. ಅಧ್ಯಕ್ಷೆ ತಾನು ನಿವೇಶನ ಫಲಾನುಭವಿ ಆಗಿದ್ದರೂ ನಿವೇಶನ ಆಯ್ಕೆ ಗ್ರಾಮಸಭೆ, ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ನಿಯಮ ಉಲ್ಲಂಘನೆ ನಡೆಸಿದ್ದಾರೆ. ಬೂದು ಬಣ್ಣದ ನೀರಿನ ನಿರ್ವಹಣೆಗೆ ಮಂಜೂರಾದ ₹ 15 ಲಕ್ಷ ಹಣದಲ್ಲಿ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡಿದ್ದಾರೆ. ಸರ್ಕಾರಿ ಭೂಮಿ ಸೇರಿದಂತೆ ಖಾಸಗಿ ಭೂಮಿಗೆ ನಕಲಿ ಇ ಸ್ವತ್ತು ವಿತರಿಸಲಾಗಿದೆ. ಅನುಪಯುಕ್ತ ವಸ್ತುಗಳ ಲೆಕ್ಕ ನೀಡದೆ ಮಾರಾಟ ಮಾಡಲಾಗಿದೆ ಎಂದು ದೂರಿದರು.

ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ಗೆ ಅನುಮತಿ ನೀಡಿ ಅಪ್ರಾಪ್ತರು ಧೂಮಪಾನಿಗಳಾಗಲು ಕಾರಣರಾಗಿದ್ದಾರೆ‌‌‌. ಕಾಮಗಾರಿ, ಸಾಮಾಗ್ರಿ ಖರೀದಿಯಲ್ಲಿ ಪಾರದರ್ಶಕ ನಿಯಮ ಉಲ್ಲಂಘಿಸಿರುವ ಮಾಹಿತಿ ನೀಡಿದರೂ ಮೊದಲ ಹಂತವಾಗಿ ಅಧ್ಯಕ್ಷೆ, ಪಿಡಿಒ‌ ವಿರುದ್ದ ಅಕ್ರಮದ ವರದಿ ಪಡೆಯಲು ಹಿಂದೇಟು ಹಾಕುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ ಎಂದು ದೂರಿದರು.

ಹಣ ಪಾವತಿಯ ಅಧಿಕಾರ ಹೊಂದಿರುವ ಅಧ್ಯಕ್ಷೆ, ಪಿಡಿಒ ಅವರು ನಡೆಸಿರುವ ಅಕ್ರಮ, ಭ್ರಷ್ಟಾಚಾರದ ತನಿಖೆ ನಡೆಸಿ ಕ್ರಮ ವಹಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು‌.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಮ್, ಗ್ರಾಪಂ ಮಾಜಿ ಸದಸ್ಯರಾದ ಬಿ.ಕೆ.ಸತೀಶ್, ಕುಳ್ಳ, ಸುಧಾ, ಮಾದೇವಿ, ಶಿಲ್ಪ, ನಾಗರತ್ನ ಮೊದಲಾದವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ