Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಹಾರಾಷ್ಟ್ರ ಫಲಿತಾಂಶ : ಅನುಮಾನಗಳಿಗೆ ಉತ್ತರಿಸಬೇಕಿದೆ ಚುನಾವಣಾ ಆಯೋಗ

ಎನ್ ನಾಗೇಶ್, ನುಡಿಕರ್ನಾಟಕ

ಮಹಾರಾಷ್ಟ್ರ ಚುನಾವಣಾ ಫಲಿತಾಂಶವನ್ನು ನೋಡಿದಾಗ ಹಲವು ಅನುಮಾನಗಳು ಮೂಡುತ್ತವೆ. ಪಾರದರ್ಶಕ, ನ್ಯಾಯ ಸಮ್ಮತ ಚುನಾವಣೆ ನಡೆಸಿದ್ದೇ ಆದರೆ ಈ ಅನುಮಾನಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕಿದೆ‌. ಇಲ್ಲದಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ಉಂಟಾಗಿ ಚುನಾವಣಾ ವ್ಯವಸ್ಥೆ ಮೇಲೆ ಜನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ ಕೇವಲ 17 ಸ್ಥಾನಗಳಲ್ಲಿ ಗೆದ್ದು ನೀರಸ ಪ್ರದರ್ಶನ ನೀಡಿದ್ದ ಮಹಾಯುತಿ ಒಕ್ಕೂಟ, ಅದಾಗಿ ಕೇವಲ ಐದು ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 288 ಸ್ಥಾನಗಳ ಪೈಕಿ 234 ಸ್ಥಾನಗಳನ್ನು ಗಳಿಸಿದ್ದನ್ನು ನೋಡಿದರೆ, ಇದೆಲ್ಲ ಹೇಗೆ ಸಾಧ್ಯ ಎಂಬ ಅನುಮಾನ ಜನರಲ್ಲಿ, ರಾಜಕೀಯ ನಾಯಕರಿಗೆ ಮೂಡಿದೆ.

ಲೋಕಸಭಾ ಚುನಾವಣೆಯಲ್ಲಿ 30 ಸ್ಥಾನಗಳಿಸಿದ್ದ ಮಹಾ ವಿಕಾಸ್ ಅಘಾಡಿ ವಿಧಾನಸಭೆಯಲ್ಲಿ ಕೇವಲ 48 ಸ್ಥಾನಗಳನ್ನು ಪಡೆದಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ಕಳೆದ ಐದು ವರ್ಷಗಳಲ್ಲಿ 37 ಲಕ್ಷ ಮತದಾರರು ಮಹಾರಾಷ್ಟ್ರದಲ್ಲಿ ಸೇರ್ಪಡೆಯಾಗಿದ್ದರೆ, ಲೋಕಸಭಾ ಚುನಾವಣೆ ಮುಗಿದ 5 ತಿಂಗಳಲ್ಲಿ ಹೊಸದಾಗಿ 47 ಲಕ್ಷ ಮತದಾರರು ಸೇರ್ಪಡೆಯಾಗಿರುವುದು ದಿಗ್ಭ್ರಮೆ ಮೂಡಿಸುತ್ತದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರ ಪತಿ, ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು ಖಾಸಗಿ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ನವೆಂಬರ್ 20ರಂದು ಚುನಾವಣೆ ನಡೆದ ಸಂಜೆ 5 ಗಂಟೆ ವೇಳೆಗೆ ಶೇ.58.22 ಮತ ಚಲಾವಣೆಯಾಗಿತ್ತು ಎಂದು ಚುನಾವಣಾ ಆಯೋಗ ಅಂಕಿ ಅಂಶ ನೀಡಿತ್ತು. ಅದಾಗಿ ರಾತ್ರಿ 11:30 ವೇಳೆಗೆ ಶೇ. 65.02ರಷ್ಟು ಮತ ಚಲಾವಣೆಯಾಗಿದೆ ಎಂದು ಮಾಹಿತಿ ತಿಳಿಸಿತ್ತು.

ಆಯೋಗದ ಪ್ರಕಾರ ಸಂಜೆ 5ರ ವೇಳೆಗೆ 5,64,88,024 ಮತ ಚಲಾವಣೆ ಯಾಗಿದ್ದರೆ, ರಾತ್ರಿ 11:30 ರ ವೇಳೆಗೆ ಶೇಕಡ 65.02 ಅಂದರೆ 6,30,85,732 ಮತಗಳು. ಅಂದರೆ ಸುಮಾರು 66 ಲಕ್ಷ ಮತಗಳ ವ್ಯತ್ಯಾಸ ಕಂಡು ಬರುತ್ತದೆ. ಇದಲ್ಲದೆ ಮತದಾನ ಎಣಿಕೆ ಪ್ರಕ್ರಿಯೆಯ ದಿನ 10 ಲಕ್ಷ ಮತಗಳ ಏರಿಕೆ ಕಂಡು ಬಂದಿದೆ. ಒಟ್ಟಾರೆ 76 ಲಕ್ಷ ಮತಗಳು ಕೇವಲ 6.30 ಗಂಟೆಯ ಅವಧಿಯಲ್ಲಿ ಚಲಾವಣೆಯಾಗಲು ಹೇಗೆ ಸಾಧ್ಯ ?  ಅವರ ಪ್ರಕಾರ ಒಬ್ಬ ಮತದಾರ ಮತ ಚಲಾಯಿಸಲು ಕನಿಷ್ಠ ಎರಡು ನಿಮಿಷಗಳು ಬೇಕು. ಅದರಂತೆ 1000 ಮತದಾರರು ಮತ ಚಲಾವಣೆ ಮಾಡಲು 16.30 ಗಂಟೆಗಳೇ ಬೇಕು. ಆದರೆ ಸಂಜೆ 5ರಿಂದ 11.30 ವರೆಗೆ ಅಂದರೆ ಕೇವಲ 6:30 ಗಂಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಲು ಸಾಧ್ಯವೇ ಇಲ್ಲ.

ಸಂಜೆ 5ರಿಂದ ರಾತ್ರಿ 11.30 ರ ವೇಳೆಗೆ ಅಬ್ಬಬ್ಬಾ ಎಂದರೆ ಕೇವಲ ಶೇ.1ರಿಂದ 1.50ರಷ್ಟು ಮತ ಚಲಾವಣೆ ಸಾಧ್ಯವೇ ಹೊರತು ಶೇ.7ರಷ್ಟು ಅಲ್ಲ. ಇದೇ ಅವಧಿಯಲ್ಲಿ ಜಾರ್ಖಂಡ್ ನಲ್ಲಿ ಶೇ.1ರಷ್ಟು ಮತ ಮಾತ್ರ ಚಲಾವಣೆಯಾಗಿದೆ. ಮಹಾರಾಷ್ಟ್ರದಲ್ಲಿ ಶೇ.7 ರಷ್ಟು ಮತ ಚಲಾವಣೆ ಆಗಿರುವುದು ಹೇಗೆ? ಅಲ್ಲಿದ್ದ ಅಧಿಕಾರಿಗಳು ಇಷ್ಟು ವೇಗವಾಗಿ ಹೇಗೆ ಮತದಾನ ಮಾಡಿಸಿದರು ಎಂಬ ಪ್ರಶ್ನೆಗೆ ಉತ್ತರ ಚುನಾವಣಾ ಆಯೋಗ ನೀಡಬೇಕು. ಹಾಗೆಯೇ ಮತದಾನ ದೃಶ್ಯದ ವಿಡಿಯೋ ಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತೋರ್ವ ಚುನಾವಣಾ ತಜ್ಞ ಯೋಗೇಂದ್ರ ಯಾದವ್ ಅವರು ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಗಳನ್ನು ನೋಡಿದಾಗ ಮಹಾ ವಿಕಾಸ್ ಅಘಾಡಿ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದಾಗಿ ಕೇವಲ ಐದು ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 48 ಸ್ಥಾನ ಗಳಿಸಿರುವುದು ನಂಬುವುದಕ್ಕೆ ಆಗುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧಿ ಕೂಟಕ್ಕಿಂತ ಶೇಕಡ ಒಂದರಷ್ಟು ಮತ ಗಳಿಕೆಯಲ್ಲಿ ಹಿಂದಿದ್ದ ಮಹಾಯುತಿ, ಅದಾಗಿ ಐದು ತಿಂಗಳಲ್ಲಿಯೇ ಶೇ. 14ರಷ್ಟು ಮತ ಗಳಿಕೆ ಹೆಚ್ಚಳವಾಗಿರುವುದು ಹೇಗೆ ಎಂಬುದು ತಾಳೆಯಾಗುತ್ತಿಲ್ಲ.ಹೇಗೆ ನೋಡಿದರೂ ಶೇ.3 ರಿಂದ 4 ರಷ್ಟು ಮತ ಹೆಚ್ಚಳ ಸಾಧ್ಯವೇ ಹೊರತು ಶೇ.14ರಷ್ಟು ಹೆಚ್ಚಳವಾಗಿರುವುದನ್ನು ಸಮರ್ಥಿಸುವುದಿಲ್ಲ ಎಂದಿದ್ದಾರೆ.

ಅಲ್ಲದೆ ಮಹಾರಾಷ್ಟ್ರದ ಮಾರ್ಕಡವಾಡಿ ಗ್ರಾಮದ ಮತದಾರರು ನಾವು ಪ್ರಸ್ತುತ ಚುನಾವಣೆಯಲ್ಲಿ ಶರದ್ ಪವಾರ್ ಅವರ ಎನ್ ಸಿ ಪಿಯ ಉತ್ತಮರಾವ್ ಜಾನ್ಕರ್ ಅವರಿಗೆ ಹೆಚ್ಚಿನ ಮತ ನೀಡಿದ್ದೇವೆ.ಆದರೆ ಅವರ ವಿರೋಧಿ ರಾಮ್ ಸತ್ಬುತೆ ಅವರಿಗೆ 1003 ಮತಗಳು ಹಾಗೂ ಜಾನ್ಕರ್ ಅವರಿಗೆ 843 ಮತಗಳು ಬಿದ್ದಿವೆ. ಧನಗಾರ್ ಸಮುದಾಯದ ಜಾನ್ಕರ್ ಅವರಿಗೆ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾವು ಮತ ಹಾಕಿದ್ದರೂ ರಾಮ್ ಸತ್ಪುತೆ ಅವರಿಗೆ ಹೆಚ್ಚು ಮತ ಬಿದ್ದಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿ ಡಿಸೆಂಬರ್ 3ರಂದು ಅವೇ ಮರು ಮತದಾನ(ಅಣುಕು ಮತದಾನ) ಮಾಡಿಕೊಳ್ಳುತ್ತೇವೆ. ಇದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬೇಕೆಂದು ಹೇಳಿದ್ದರು. ಆದರೆ ಚುನಾವಣಾ ಆಯೋಗ ಇದಕ್ಕೆ ಅನುಮತಿ ನಿರಾಕರಣೆ ಮಾಡಿದ್ದಲ್ಲದೆ, ಮರು ಮತದಾನ ನಡೆಯದಂತೆ ಪೋಲಿಸ್ ಬಲ ಬಳಸಿತ್ತು.

ನಮ್ಮ ಗ್ರಾಮದ ಬಹುತೇಕ ಮತದಾರರು ಜಾನ್ಕರ್ ಅವರಿಗೆ ಮತಗಳನ್ನು ನೀಡಿದ್ದರೂ ಅವೆಲ್ಲ ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಹೇಗೆ ಎಂಬುದು ಈ ಗ್ರಾಮಸ್ಥರ ವಾದ. ಪಾರದರ್ಶಕ,ನ್ಯಾಯ ಸಮ್ಮತ ಚುನಾವಣೆ ನಡೆದಿದ್ದರೆ ಚುನಾವಣಾ ಆಯೋಗ ಇದಕ್ಕೆ ಇಷ್ಟು ಹೆದರಿಕೊಂಡು ಅವಕಾಶ ನೀಡದೆ ನಿರಾಕರಣೆ ಮಾಡಿದ್ದು ಏಕೆ?ಇದು ಇವಿಎಂ ಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಸಾರ್ವಜನಿಕರು ಹಾಗೂ ಚುನಾವಣಾ ವಿಶ್ಲೇಷಕರು ಎತ್ತಿರುವ ಹಲವು ಅನುಮಾನಗಳಿಗೆ ಚುನಾವಣಾ ಆಯೋಗ ಸಮರ್ಥ ಉತ್ತರ ನೀಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಚುನಾವಣಾ ಆಯೋಗ ಉತ್ತರ ನೀಡದಿದ್ದರೆ ಚುನಾವಣಾ ಪ್ರಕ್ರಿಯೆ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ.

ಹರಿಯಾಣ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿಯೂ ಈ ರೀತಿ ಅನುಮಾನಗಳು ವ್ಯಕ್ತವಾಗಿದ್ದವು. ಈಗ ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಇದೇ ಅನುಮಾನಗಳು ದಟ್ಟವಾಗಿದ್ದು, ಚುನಾವಣಾ ಆಯೋಗ ಪಾರದರ್ಶಕವಾಗಿ ಈ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಕಂಠಕವಾಗಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ