ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಿಜೆಪಿ ಮಡಿಲು ಸೇರಿದ ತಕ್ಷಣ ಆತನ ಮೇಲಿದ್ದ ಭ್ರಷ್ಟಾಚಾರ ಪ್ರಕರಣಗಳೆಲ್ಲ ಸುಳ್ಳೆಂದು ಸಾಬೀತಾಗಿ ಹೋಗಿದೆ. ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ 1,000 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ (ಐಟಿ) ಇಲಾಖೆ ಅವರಿಗೆ ಮರಳಿಸಿದೆ.
ಬಿಜೆಪಿಯ ವಾಷಿಂಗ್ ಮೆಷಿನ್ನಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಬಿದ್ದಿದ್ದ ಅಜಿತ್ ಪವಾರ್ ಈಗ ಭ್ರಷ್ಟಾಚಾರದ ಎಲ್ಲಾ ಕೊಳೆಯನ್ನು ತೊಳೆದುಕೊಂಡಿದ್ದಾರೆ. ಕಳೆದ 2021ರಲ್ಲಿ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ್ದ ಆಸ್ತಿಯನ್ನುಆದಾಯ ತೆರಿಗೆ ಇಲಾಖೆ ತನ್ನ ವಶಕ್ಕೆ ಪಡೆದಿತ್ತು. ಅದಾಗಿ ಮೂರು ವರ್ಷಕ್ಕೆ ಐಟಿ ಕ್ಲೀನ್ ಚಿಟ್ ನೀಡಿ 1,000 ಕೋಟಿ ರೂ. ಮಲ್ಯದ ಆಸ್ತಿಯನ್ನು ವಾಪಸ್ ಮಾಡಿರುವುದು ವಿರೋಧ ಪಕ್ಷಗಳ ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದೆ.
2021ರಲ್ಲಿ ಅಜಿತ್ ಪವಾರ್ ತನ್ನ ಚಿಕ್ಕಪ್ಪ ಶರದ್ ಪವಾರ್ ಅವರ ಎನ್.ಸಿ.ಪಿಯಲ್ಲಿದ್ದರು. ಈ ಸಂದರ್ಭದಲ್ಲಿ ಐಟಿ ಇಲಾಖಾ ಅಜಿತ್ ಪವಾರ್, ಅವರ ಪತ್ನಿ ಸುನೇತ್ರಾ ಪವಾರ್, ಪುತ್ರ ಪಾರ್ಥ ಪವಾರ್ ಅವರ ಮಾಲೀಕತ್ವದ ಸತಾರಾದ ಜರಂದರೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಕಲಿ ಸಾಲದ ಪ್ರಕರಣ ಸೇರಿದಂತೆ ಮೂರು ನಕಲಿ ಸಾಲದ ಪ್ರಕರಣಗಳು ಹಾಗೂ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿತ್ತು. ಅಲ್ಲದೆ ನೀರಾವರಿ ಸಚಿವರಾಗಿದ್ದ ಅಜಿತ್ ಪವಾರ್ ನೀರಾವರಿ ಯೋಜನೆಗಳಲ್ಲಿ ಸುಮಾರು 70 ಸಾವಿರ ಕೋಟಿ ರೂ.ಭ್ರಷ್ಟಾಚಾರ ಮಾಡಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಬಾರಿ ಹೇಳಿದ್ದರು.
ಮೋದಿಯವರು ಉತ್ತರ ಭಾರತದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಮಹಾರಾಷ್ಟ್ರದಲ್ಲಿ ನೀರಾವರಿ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಜೈಲಿಗೆ ಕಳುಹಿಸಬೇಕೇ ಬೇಡವೇ ಎಂದು ಕೇಳುತ್ತಾರೆ. ಆಗ ಸಾವಿರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಜೋರಾಗಿ ಜೈಲಿಗೆ ಕಳಿಸಿ ಎಂದು ಕೂಗುತ್ತಾರೆ. ಅದಾಗಿ ಕೇವಲ ನಾಲ್ಕು ದಿನದಲ್ಲೆ ಅಜಿತ್ ಪವಾರ್ ಎನ್ಸಿಪಿ ಪಕ್ಷ ಇಬ್ಭಾಗ ಮಾಡಿ ಬಿಜೆಪಿ ಜೊತೆ ಕೈ ಜೋಡಿಸಿ ಉಪಮುಖ್ಯಮಂತ್ರಿಯಾಗುತ್ತಾರೆ. ‘ನಾ ಖಾವೂಂಗಾ ನಾ ಖಾನೇದೂಂಗಾ’ ಎಂದ ಮೋದಿಯವರು ತಾವೇ 70 ಸಾವಿರ ಕೋಟಿ ನೀರಾವರಿ ಹಗರಣ ಮಾಡಿದ್ದಾರೆಂದು ಹೇಳಿ ಆತನಿಗೆ ಮಣೆ ಹಾಕಿ ಸರ್ಕಾರ ರಚನೆ ಮಾಡುತ್ತಾರೆ. ಈಗ ಐಟಿ ಅವರಿಗೆ ಕ್ಲೀನ್ ಚಿಟ್ ನೀಡಿ ಸಾವಿರ ಕೋಟಿ ರೂ.ಗಳ ಆಸ್ತಿ ವಾಪಸ್ ಮಾಡುತ್ತದೆ. ಅಲ್ಲಿಗೆ ಬಿಜೆಪಿ ವಾಷಿಂಗ್ ಮೆಷಿನ್ನಲ್ಲಿ ಮೋದಿ ವಾಷಿಂಗ್ ಪೌಡರ್ ಹಾಕಿಕೊಂಡ ವಿವಿಧ ಪಕ್ಷಗಳ ಹಲವಾರು ನಾಯಕರು ಕೊಳೆಮುಕ್ತರಾಗಿದ್ದಾರೆ ಎಂಬ ಪ್ರತಿಪಕ್ಷಗಳ ವಾದ ಸರಿಯಾಗಿದೆ.
ಬಿಜೆಪಿ ವಾಷಿಂಗ್ ಮೆಷಿನ್ನಲ್ಲಿ ಕೇವಲ ಅಜಿತ್ ಪವಾರ್ ಮಾತ್ರವಲ್ಲ,ಕಾಂಗ್ರೆಸ್ ಪಕ್ಷದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ಆದರ್ಶ ವಸತಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಖಂಡಿಸುತ್ತಿದ್ದ ಬಿಜೆಪಿ ಅವರಿಗೆ ರತ್ನಗಂಬಳಿ ಹಾಸಿ ಬಿಜೆಪಿ ಸೇರಿಸಿಕೊಂಡು ರಾಜ್ಯಸಭಾ ಸದಸ್ಯನಾಗಿ ಮಾಡಿತು.
ಎನ್.ಪಿ.ಸಿ ಛಗನ್ ಭುಜಬಲ್, ಪ್ರಫುಲ್ ಪಟೇಲ್, ನವಾಬ್ ಮಲಿಕ್ ಮೊದಲಾದ ನಾಯಕರ ಮೇಲೆ ಬಿಜೆಪಿ ಭ್ರಷ್ಟಾಚಾರದ ಆಪಾದನೆಗಳನ್ನು ಮಾಡಿತ್ತು. ಈಗ ಅವರೆಲ್ಲರೂ ಬಿಜೆಪಿ ಜೊತೆ ಕೈ ಜೋಡಿಸಿ ಕಳಂಕ ಮುಕ್ತರಾಗಿ ಅಧಿಕಾರ ಅನುಭವಿಸುತ್ತಾ ಮೆರೆಯುತ್ತಿದ್ದಾರೆ.
ದೇಶದಲ್ಲಿ ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂದು ಪ್ರತಿಪಕ್ಷಗಳನ್ನು ಹಣಿಯುತ್ತಿದೆ. ಐಟಿ, ಇಡಿ, ಸಿಬಿಐ ಬಿಜೆಪಿ ನಾಯಕರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಅವರ ಮೇಲೆ ಯಾವ ಕ್ರಮ ಜರುಗಿಸಲ್ಲ. ಆದರೆ ಬಿಜೆಪಿ ವಿರುದ್ಧವಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯ, ಸತ್ಯೇಂದ್ರ ಜೈನ್, ಜೆಎಂಎಂನ ಹೇಮಂತ್ ಸೊರೆನ್ ಅವರನ್ನು ವರ್ಷ, ತಿಂಗಳುಗಟ್ಟಲೆ ಜೈಲಿಗೆ ಕಳುಹಿಸುತ್ತದೆ. ಈಗ ಕರ್ನಾಟಕದಲ್ಲೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮುಡಾ ಪ್ರಕರಣದಲ್ಲಿ ಐಟಿ, ಇಡಿ ಹಸ್ತಕ್ಷೇಪ ಮಾಡುತ್ತಾ ಸ್ಥಿರ ಸರ್ಕಾರವನ್ನು ಅಸ್ಥಿರ ಗೊಳಿಸಲು ಯತ್ತಿಸುತ್ತಿದೆ. ಒಟ್ಟಾರೆ ಬಿಜೆಪಿ ಪಕ್ಷ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಕೂಗಿನಲ್ಲಿ ಸತ್ಯಾಂಶವಿದೆ.




