ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕೆಪಿಸಿಸಿ ಮತ್ತು ಶೋಷಿತ ವರ್ಗಗಳ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದ ಯಶಸ್ಸಿಗೆ ಕಾರಣಕರ್ತ ಮುಖಂಡರು, ಕಾರ್ಯಕರ್ತರು, ಜನತೆಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿ ಸಮಾವೇಶದಲ್ಲಿ ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ 3 ಲಕ್ಷ ಮಂದಿ ಭಾಗವಹಿಸಿದ್ದು, ಇದು ಹಾಸನ ಇತಿಹಾಸದಲ್ಲಿ ಅಭೂತಪೂರ್ವ ಸಮಾವೇಶವಾಗಿದ್ದು,2006ರಲ್ಲಿ ಅಹಿಂದ ಸಭೆಯನ್ನು ನಡೆಸಿದ್ದು, ಹಿಂದಿನ ಸಭೆಗಿಂತಲೂ ಹೆಚ್ಚಿನ ಯಶಸ್ಸನ್ನು ಸದರಿ ಸಭೆ ಕಂಡಿದೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಸುದ್ದಿ ಹರಡಿಸಲು ಮುಂದಾಗಿದ್ದರ ವಿರುದ್ಧ 2 ತಿಂಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿ ಸಮಾವೇಶ ನಡೆಸಲು ತೀರ್ಮಾನ ಮಾಡಿದೆವು ಎಂದು ಹೇಳಿದರು.
ಅಂತೆಯೇ ಡಿಸೆಂಬರ್ 20, 21, 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಹಾಗೂ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಲೆಕ್ಕ ಪರಿಶೋಧಕ ಮಹೇಶ್, ಕಾಂಗ್ರೆಸ್ ಮುಖಂಡ ವಿಜಿಕುಮಾರ್, ಅಲ್ಪ ಸಂಖ್ಯಾತ ಮುಖಂಡ ಅಮ್ಜದ್ ಪಾಷಾ, ಬೆಂಜಮಿಸ್, ಲಿಂಗರಾಜು, ಸುರೇಶ್ ಇದ್ದರು.




