ಶಾಂತವೇರಿ ಗೋಪಾಲಗೌಡರ ಜೊತೆ ಪ್ರಜಾ ಸಮಾಜವಾದಿ ಪಕ್ಷದಿಂದ (ಪಿ.ಎಸ್.ಪಿ) ರಾಜಕಾರಣ ಆರಂಭಿಸಿದ ಎಸ್.ಎಂ.ಕೃಷ್ಣ ಅವರು ದೇಶದಲ್ಲಿ ಸಜ್ಜನ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದರು. ಸಮಾಜವಾದಿ ಚಿಂತನೆ, ಜಾತ್ಯತೀತ ನಿಲುವು, ಮುತ್ಸದ್ಧಿತನದ ನಡವಳಿಕೆಗಳಿಂದ ರಾಜ್ಯಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದಾರೆ. ಎಸ್.ಎಂ.ಕೃಷ್ಣ ಅವರ ಸಾವಿನಿಂದಾಗಿ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ರಾಮಮನೋಹರ ಲೋಹಿಯಾ ವೇದಿಕೆಯ ಅಧ್ಯಕ್ಷ ಬಿ.ಎಸ್.ಶಿವಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.
1994ರಲ್ಲಿ ವಿತ್ತ ಸಚಿವರಾಗಿದ್ದ ಸಿದ್ದರಾಮಯ್ಯ ಅವರು ನವೋದ್ಯಮವನ್ನು ಪೋಷಣೆ ಮಾಡಿದರು. ಸ್ಪಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯಿತಿ ಮತ್ತು ಉಚಿತವಾಗಿ ಭೂಮಿ ನೀಡಿ ಪ್ರೋತ್ಸಾಹ ನೀಡಿದ್ದರು. ಇದೇ ಪರಂಪರೆಯನ್ನು ಮುಂದುವರಿಸಿದ ಎಸ್.ಎಂ.ಕೃಷ್ಣ ಅವರು ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಕೂಡ ಬೆಂಗಳೂರನ್ನು ಕೊಂಡಾಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಐಟಿ ಹಬ್ ಆಗಿ ಗುರುತಿಸಿಕೊಳ್ಳಲು ಎಸ್.ಎಂ.ಕೃಷ್ಣ ಅವರ ಶ್ರಮ ಬಹಳಷ್ಟಿದೆ. ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿಯನ್ನೇ ಮಾಡಿದರು ಎಂದು ಸ್ಮರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಅವರು ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ, ಏಪ್ರೊ ಕಂಪನಿಯ ಆಜೀಂ ಪ್ರೇಮ್ಜಿ ಮುಂತಾದವರ ಮನೆಗಳಿಗೆ ಭೇಟಿ ನೀಡಿ ಬಂಡವಾಳ ಹೂಡಿಕೆಗೆ ರತ್ನಗಂಬಳಿ ಹಾಸಿದ್ದರು. ಕಂಪನಿಗಳ ಸ್ಥಾಪನೆಗೆ ಎಲ್ಲಾ ರೀತಿಯ ನೆರವು ಘೋಷಣೆ ಮಾಡಿದ್ದರು. 1999ರಿಂದ 2004ರವರೆಗೂ ಮುಖ್ಯಮಂತ್ರಿಯಾಗಿ ಯಶಸ್ವಿನಿ, ಶಾಲಾ ಮಕ್ಕಳಿಗೆ ಬಿಸಿ ಊಟ, ಸ್ತ್ರೀ ಶಕ್ತಿ ಸಂಘಗಳ ರಚನೆ, ಕರ್ನಾಟಕ ರಾಜ್ಯ ಪಾನೀಯ ಅಭಿವೃದ್ಧಿ ನಿಗಮ ರಚನೆ ಮುಂತಾದ ಯೋಜನೆಗಳಿಂದ ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಿದರು.
ಕೃಷ್ಣ ಅವರು ಪಾಳೆಗಾರಿಕೆ, ಕುಟುಂಬ ರಾಜಕಾರಣ, ದ್ವೇಷ ಮತ್ತು ಜಾತಿ ರಾಜಕಾರಣವನ್ನು ಎಂದೂ ಮಾಡಲಿಲ್ಲ. ಮನಸ್ಸು ಮಾಡಿದ್ದರೆ ಮಂಡ್ಯದಿಂದ ಅವರ ಮಗಳನ್ನು ಎಂಪಿ ಮಾಡಬಹುದಿತ್ತು. ಆದರೆ ಅವರು ಕುಟುಂಬ ರಾಜಕಾರಣದಿಂದ ದೂರವೇ ಉಳಿದಿದ್ದರು.
ಸಮಚಿತ್ತತೆಯಿಂದ ಬದುಕಿ ಬಾಳಿದ ಅವರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಯುಪಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರು ಹಲವು ದೇಶಗಳೊಂದಿಗೆ ಉತ್ತಮ ಬಾಂಧವ್ಯ ಮೂಡಿಸಲು ಶ್ರಮಿಸಿದ್ದರು.
ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಿರುವ ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ತುಂಬಲಾಗದ ನಷ್ಟ ಉಂಟಾಗಿದೆ. ಅವರ ಕುಟುಂಬ ಸದಸ್ಯರಿಗೆ ಅವರ ಸಾವಿನ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.




