Friday, November 20, 2026

ಪ್ರಾಯೋಗಿಕ ಆವೃತ್ತಿ

ಪ್ರಕೃತಿ ಚಿಕಿತ್ಸೆಯು ಸರಳ- ಸ್ವಾವಲಂಬಿ, ನೈತಿಕ ಜೀವನಶೈಲಿಯ ಭಾಗ : ಚಲುವರಾಯಸ್ವಾಮಿ

​ನಾಗಮಂಗಲ, ನ.18 : ​ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 1945ರ ನವೆಂಬರ್ 18ರಂದು ‘ಆಲ್ ಇಂಡಿಯಾ ನೇಚರ್ ಕ್ಯೂರ್ ಫೌಂಡೇಶನ್ ಟ್ರಸ್ಟ್’ನ ಅಧ್ಯಕ್ಷರಾಗಿ ಜೀವಮಾನದ ಸದಸ್ಯತ್ವವನ್ನು ಸ್ವೀಕರಿಸಿದ ಐತಿಹಾಸಿಕ ದಿನವಿದು. ಗಾಂಧೀಜಿಯವರು ಪ್ರಕೃತಿ ಚಿಕಿತ್ಸೆಯನ್ನು ಕೇವಲ ಒಂದು ವೈದ್ಯಕೀಯ ಪದ್ಧತಿಯಾಗಿ ನೋಡದೆ, ಅದನ್ನು ಸರಳ, ಸ್ವಾವಲಂಬಿ ಮತ್ತು ನೈತಿಕ ಜೀವನಶೈಲಿಯ ಭಾಗವಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

​ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ (ಆಯುಷ್) ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥೆಯ ಆವರಣದಲ್ಲಿ ಇಂದು ನಡೆದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಸಚಿವರು ಮಾತನಾಡಿದರು.

​“ಪ್ರಾಕೃತಿಕ ಚಿಕಿತ್ಸೆ, ಸ್ವಸ್ಥ ಭಾರತ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ವಿಶೇಷವಾಗಿ, ಈ ಬಾರಿಯ ರಾಷ್ಟ್ರಮಟ್ಟದ ಪ್ರಧಾನ ಕಾರ್ಯಕ್ರಮಕ್ಕೆ ನಮ್ಮ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ (CRIYN) ಆತಿಥ್ಯ ವಹಿಸುತ್ತಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದರು.

​ನಿಸರ್ಗವೇ ಶ್ರೇಷ್ಠ ವೈದ್ಯ
ಇಂದು ನಾವು ಆಧುನಿಕ ತಂತ್ರಜ್ಞಾನ ಮತ್ತು ವೇಗದ ಬದುಕಿನ ನಡುವೆ ಸಿಲುಕಿ, ನಮ್ಮ ಮೂಲಭೂತ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ. ಬದಲಾದ ಆಹಾರ ಪದ್ಧತಿ, ದೈಹಿಕ ಶ್ರಮದ ಕೊರತೆ, ಮಾನಸಿಕ ಒತ್ತಡ ಮತ್ತು ಪರಿಸರ ಮಾಲಿನ್ಯದಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಹೃದ್ರೋಗಗಳಂತಹ ಜೀವನಶೈಲಿ ಆಧಾರಿತ ಕಾಯಿಲೆಗಳು ವ್ಯಾಪಕವಾಗಿ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ, ಔಷಧರಹಿತ ಚಿಕಿತ್ಸಾ ಪದ್ಧತಿಯಾದ ಪ್ರಕೃತಿ ಚಿಕಿತ್ಸೆಯ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಪ್ರಕೃತಿ ಚಿಕಿತ್ಸೆಯ ಮೂಲ ತತ್ವವೇ “ನಿಸರ್ಗವೇ ಶ್ರೇಷ್ಠ ವೈದ್ಯ” ಎಂಬುದಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
​ಪಂಚಮಹಾಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಸಮತೋಲನದ ಮೂಲಕ ನಮ್ಮ ದೇಹದ ಸ್ವಯಂ-ಗುಣಪಡಿಸುವ ಶಕ್ತಿಯನ್ನು ಜಾಗೃತಗೊಳಿಸುವುದೇ ಈ ಪದ್ಧತಿಯ ವಿಶೇಷತೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ, ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ರೋಗದ ಮೂಲ ಕಾರಣವನ್ನೇ ನಿರ್ಮೂಲನೆ ಮಾಡುವ ಶಕ್ತಿ ಪ್ರಕೃತಿ ಚಿಕಿತ್ಸೆಗಿದೆ ಎಂದರು.

​ಇಂದಿನ ವೈಜ್ಞಾನಿಕ ಯುಗದಲ್ಲಿ ಯಾವುದೇ ವೈದ್ಯಕೀಯ ಪದ್ಧತಿಯು ಜನಸಾಮಾನ್ಯರ ವಿಶ್ವಾಸವನ್ನು ಗಳಿಸಬೇಕಾದರೆ ಅದಕ್ಕೆ ವೈಜ್ಞಾನಿಕ ಪುರಾವೆ ಮತ್ತು ಸಂಶೋಧನೆಯ ಬಲ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಆಯುಷ್ ಇಲಾಖೆ ಮತ್ತು ಸಂಶೋಧನಾ ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಇಲಾಖೆಯ ಕಾರ್ಯಗಳಿಗೆ ಬೆನ್ನುತಟ್ಟಿದರು.

​ಆಯುಷ್ ವೈದ್ಯಕೀಯ ಪದ್ಧತಿಗೆ ಸಹಕಾರ
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಆಯುಷ್ ಸಂಶೋಧನಾ ಮಂಡಳಿಗಳು ನೂರಾರು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಟಿಸಿರುವುದು ನಮ್ಮ ಸಾಂಪ್ರದಾಯಿಕ ಜ್ಞಾನಕ್ಕೆ ಸಿಕ್ಕಿರುವ ವೈಜ್ಞಾನಿಕ ಮನ್ನಣೆಯಾಗಿದೆ. ನಮ್ಮ ರಾಜ್ಯ ಸರ್ಕಾರವೂ ಕೂಡ ಆಯುಷ್ ವೈದ್ಯಕೀಯ ಪದ್ಧತಿಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.

​ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಯುಷ್ ಚಿಕಿತ್ಸಾ ಘಟಕಗಳನ್ನು ಬಲಪಡಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ (BNYS) ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಸಂಶೋಧನಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲೋಪತಿ ವೈದ್ಯಕೀಯ ಪದ್ಧತಿಯೊಂದಿಗೆ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಸಮನ್ವಯಗೊಳಿಸಿ, ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದರು.
​ಪ್ರತಿದಿನ ಕನಿಷ್ಠ ಅರ್ಧ ಗಂಟೆ ಯೋಗ ಮತ್ತು ವ್ಯಾಯಾಮ ಮಾಡುವುದು, ಸಾವಯವ ಹಾಗೂ ಪೌಷ್ಟಿಕ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಒತ್ತಡಮುಕ್ತ ಜೀವನ ನಡೆಸುವುದು ನಮ್ಮೆಲ್ಲರ ಸಂಕಲ್ಪವಾಗಬೇಕು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ತಡೆಯುವುದು ಅತ್ಯಂತ ಮುಖ್ಯವಾಗಿದೆ. ಈ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯು ನಮ್ಮೆಲ್ಲರ ಬದುಕಿನಲ್ಲಿ ನಿಸರ್ಗದೊಂದಿಗೆ ಸಾಮರಸ್ಯದಿಂದ ಬದುಕುವ ಹೊಸ ಚೈತನ್ಯವನ್ನು ತುಂಬಲಿ. ಪ್ರಕೃತಿಯನ್ನು ರಕ್ಷಿಸೋಣ, ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳೋಣ ಮತ್ತು ಆರೋಗ್ಯವಂತ ಕರ್ನಾಟಕ ಹಾಗೂ ಸ್ವಸ್ಥ ಭಾರತದ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಕರೆ ನೀಡಿದರು.

​ದೇಶದಲ್ಲಿ ಮೂರು ಸಂಸ್ಥೆಗಳಷ್ಟೇ
ನಮ್ಮ ದೇಶದಲ್ಲಿ ಕೇವಲ ಮೂರು (ಯೋಗ ಮತ್ತು ಪ್ರಕೃತಿ ಚಿಕಿತ್ಸಾ) ಸಂಸ್ಥೆಗಳಷ್ಟೇ ಇವೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿಯೇ ಈ ಸಂಸ್ಥೆ ಇರುವುದು ವಿಶೇಷ. 2006ರಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ತಂದಿದ್ದೆ. ಜತೆಗೆ ಈ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಜಿಲ್ಲೆಗೆ ತರಲು ಸಾಕಷ್ಟು ಶ್ರಮ ಹಾಕಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರಾದ ಹೋ. ಶ್ರೀನಿವಾಸಮೂರ್ತಿ ಹಾಗೂ ಡಾ. ಚಿದಾನಂದ ಮೂರ್ತಿ ಅವರ ಸಲಹೆ ಮೇರೆಗೆ ಈ ಸಂಸ್ಥೆಯನ್ನು ನಮ್ಮ ರಾಜ್ಯಕ್ಕೆ ತರಲು ಹೋರಾಟ ನಡೆಸಿದ್ದೆ ಎಂದು ಸಚಿವರು ಸ್ಮರಿಸಿಕೊಂಡರು.

​ಅಗತ್ಯ ಸಹಕಾರ ನೀಡಲಾಗುವುದು
ನಮ್ಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಗೆ ಇನ್ನಷ್ಟು ಬಲ ತುಂಬಬೇಕು ಎಂದು ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಲರು ಮೇಲ್ ಅವರ ಬಳಿ ಮನವಿ ಮಾಡಿದ ಸಚಿವರು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಈ ಸಂಸ್ಥೆಯು ಮಂಡ್ಯ ಜನರಿಗೆ ಮಾತ್ರವಲ್ಲ, ಇಡೀ ದೇಶದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ ಎಂದರು.

​ಆರೋಗ್ಯಯುತ ಖಾದ್ಯ
ಇದೇ ವೇಳೆ ಸಂಸ್ಥೆಯ ಸೇವೆಗಳ ಕುರಿತಾದ ಹಾಗೂ ಆಯುಷ್ ಮಂತ್ರಾಲಯವು ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರಗಳನ್ನು (ಡಾಕ್ಯುಮೆಂಟರಿ) ಸಚಿವರು ಬಿಡುಗಡೆಗೊಳಿಸಿದರು. ಇದರೊಂದಿಗೆ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗಳ ಕುರಿತ ಇ-ಜರ್ನಲ್‌ಗೆ ಚಾಲನೆ ನೀಡಿದರು.
​

ವೇದಿಕೆ ಕಾರ್ಯಕ್ರಮದ ಬಳಿಕ ವಿವಿಧ ರಾಜ್ಯಗಳ ಆರೋಗ್ಯಯುತ ಆಹಾರ ಮೇಳಕ್ಕೆ ಸಚಿವರು ಚಾಲನೆ ನೀಡಿದರು. ಸಿರಿಧಾನ್ಯ ಸೇರಿದಂತೆ ರಾಸಾಯನಿಕ ರಹಿತ ಖಾದ್ಯಗಳನ್ನು ಸವಿದ ಸಚಿವರು, ಸಸ್ಯವನದಲ್ಲಿ ಗಿಡ ನೆಟ್ಟು, ಪರಿಸರ ಉಳಿಸಿ ಎಂದು ಮನವಿ ಮಾಡಿದರು.

​ಈ ವೇಳೆ ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಲರು ಮೇಲ್, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಶೋಧನಾ ಮಂಡಳಿಯ ನಿರ್ದೇಶಕಿಯರಾದ ಜ್ಯೋತಿ, ಗೀತಾ ಶೆಟ್ಟಿ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅನುಸಂಧಾನ ಸಂಸ್ಥೆಯ ಮುಖ್ಯಸ್ಥ ಡಾ. ವಾದಿರಾಜ್ ಸೇರಿದಂತೆ ವೈದ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ