Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಡ್ಯದ ಲಿಂಗೇಗೌಡ ಗುಜರಾತಿನಲ್ಲಿ ದುರ್ಮರಣ

ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಠಿಣ ಕಾನೂನು, ಶೀಘ್ರ ವಿಚಾರಣೆ, ಗರಿಷ್ಠ ಶಿಕ್ಷೆಗೆ ಒತ್ತಾಯಿಸಿ ಗುಜರಾತ್ ರಾಜ್ಯದ ಸೂರತ್ ನಲ್ಲಿ ಪಾದಾಯಾತ್ರೆ ನಡೆಸುತ್ತಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಹೆಚ್ ಅವರು ರಸ್ತೆ ಅಪಘಾತದಲ್ಲಿ ಇಂದು ದುರ್ಮರಣಕ್ಕೀಡಾಗಿದ್ಧಾರೆ.

ಸೂರತ್ ಬಳಿಯ ಭರೂಚ್ ನಗರದ ಬಳಿಯ ಹೆದ್ದಾರಿಯಲ್ಲಿ ಲಾರಿಯೊಂದು ರಸ್ತೆಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಹರಿದಿದ್ದರಿಂದ ಲಿಂಗೇಗೌಡ ಸ್ಥಳದಲ್ಲೇ ಸಾವನ್ನಪ್ಪಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಂಪುರ ಗ್ರಾಮದ ಲಿಂಗೇಗೌಡ ಅವರು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದು ಆನಂತರ ಅಬಕಾರಿ ಇನ್ಸ್ ಪೆಕ್ಟರ್ ಆಗಿ ಸರ್ಕಾರಿ ಉದ್ಯೋಗಕ್ಕೆ ಸೇರಿದ್ದರು.
ಮಂಡ್ಯದಲ್ಲಿ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಲಿಂಗೇಗೌಡ ಅವರಿಗೆ ಶ್ರದಾಂಜಲಿ ಸಲ್ಲಿಸಿದರು.
ಸಮಾಜದ ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತಿದ್ದ ಅವರು ರಾಜಕೀಯ ಕಾಂತ್ರಿ ಮಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, 2018ರಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಮದ್ದೂರು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರು. ಆನಂತ 2019ರ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಕೆ.ಆರ್.ಎಸ್ ಪಕ್ಷದ ತೀವ್ರ ಸಂತಾಪ
ಲಿಂಗೇಗೌಡರ ಅಕಾಲಿಕ ಮರಣಕ್ಕೆ ಕೆ.ಆರ್.ಎಸ್ ಪಕ್ಷವು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ಅವರು ನಿಧನರಾಗಿರುವುದು KRS ಪಕ್ಷಕ್ಕೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಪಕ್ಷದ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

KRS ಪಕ್ಷ ಆರಂಭವಾದಾಗಿನಿಂದಲೂ ಪಕ್ಷದ ಅವಿಭಾಜ್ಯ ಅಂಗ ಮತ್ತು ಅತಿದೊಡ್ಡ ಬಲವಾಗಿದ್ದ ಮತ್ತು ಕಳೆದ ಆರು ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ದುಡಿದು ಇತ್ತೀಚೆಗೆ ತಾನೆ ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದ ಲಿಂಗೇಗೌಡರ ನಿಧನಕ್ಕೆ ಪಕ್ಷ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಮತ್ತು ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸಲ್ಲಿಸುತ್ತದೆ. ಈ ಸಂದರ್ಭದಲ್ಲಿ ಇಡೀ ಪಕ್ಷ ಮೃತರ ಕುಟುಂಬದೊಂದಿಗೆ ನಿಲ್ಲಲಿದೆ ಎಂದು ಅವರು ತಿಳಿಸಿದ್ಧಾರೆ.

ಕಾನೂನು ಪ್ರಕ್ರಿಯೆಗಳನ್ನು ಶೀಘ್ರ ಮುಗಿಸಿ ಮೃತದೇಹಗಳನ್ನು ರಾಜ್ಯಕ್ಕೆ ವಾಪಸು ತರುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಗುಜರಾತ್ ಸರ್ಕಾರದ ಅಧಿಕಾರಿಗಳು ಮತ್ತು KRS ಪಕ್ಷದ ಮುಖಂಡರು ಸಂಪರ್ಕದಲ್ಲಿದ್ದು, ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

2019ರಲ್ಲಿಯೇ ಕೆ.ಆರ್.ಎಸ್ ಪಾರ್ಟಿ ಸೇರಿದ್ದರು. ಆನಂತರ ಪೂರ್ಣಪ್ರಮಾಣದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ಎಸ್ ಪಾರ್ಟಿಯಿಂದ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅಲ್ಲದೇ ಇತ್ತೀಚೆಗೆ ನಡೆದ ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರವಿಕೃಷ್ಣ ರೆಡ್ಡಿಯವರ ಪರವಾಗಿ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ಧಾರೆ.

nudikarnataka.com

ಮಂಗಳೂರಿನಿಂದ ದೆಹಲಿಗೆ ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಠಿಣ ಕಾನೂನು, ಶೀಘ್ರ ವಿಚಾರಣೆ, ಗರಿಷ್ಠ ಶಿಕ್ಷೆಯ ಖಾತರಿಗಾಗಿ ಕೋರಿ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನಮಂತ್ರಿಗಳಿಗೇ ನೇರವಾಗಿ ಮನವಿ ಮಾಡುವ ಉದ್ದೇಶದಿಂದ ಐವರು ಮಂಗಳೂರಿನ ಸಾಹಸಿಗಳ ಅವರು ಪಾದಯಾತ್ರೆ  ಕೈಗೊಂಡಿದ್ದರು.

ಮಂಗಳೂರಿನ ಕೆ.ಆರ್.ಎಸ್ ಪಕ್ಷದ ಪ್ರವೀಣ್, ಮೂಸಾ ಷರೀಫ್, ನೌಫುಲ್ ಅಬ್ಬಾಸ್, ಬಾಲಕೃಷ್ಣ, ಶುಕ್ರು ಅಹಮದ್, ಹಮ್ಝಾ, ಅವರ ತಂಡದ ಜೊತೆ 54 ನೇ ದಿನದ ಪಾದಯಾತ್ರೆಯಲ್ಲಿದ್ದಾಗ ಗುಜರಾತಿನ ಸೂರತ್ ಮತ್ತು ಅಹಮದಾಬಾದ್ ಮಧ್ಯೆ ನಡೆದ ಅಪಘಾತದಲ್ಲಿ ಅವರು ಸಾವಿಗೀಡಾಗಿದ್ಧಾರೆ.

ಮಂಗಳೂರಿನ ವ್ಯಕ್ತಿಯು ಸಾವು

KRS ಪಕ್ಷದ ಕಾರ್ಯಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ಕುಂಜಿ ಮೂಸಾ ಎಂಬುವವರು ಇದೇ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅಲ್ಲದೇ  ಮಹಿಳೆಯೊಬ್ಬರೂ ಸೇರಿದಂತೆ ನಾಲ್ಕು ಜನರಿಗೆ ತೀವ್ರ ಗಾಯಗಳಾಗಿವೆ. ಅವರು ಭರೂಚ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ