Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅನೈತಿಕ ಚಟುವಟಿಕೆಗಳ ತಾಣ ಅಂಬರೀಶ್ ಪಾರ್ಕ್

ಮಂಡ್ಯ ನಗರಸಭೆಯ 17 ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೌಸಿಂಗ್ ಬೋರ್ಡ್ ಎರಡನೇ ಹಂತದಲ್ಲಿರುವ ಅಂಬರೀಶ್ ಪಾರ್ಕ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.

ಪುಂಡು ಪೋಕರಿಗಳು ರಾಜಾರೋಷವಾಗಿ ಬಂದು ಮದ್ಯ,ಸಿಗರೇಟು ಸೇದಿ ಅಲ್ಲೇ ಬಿಸಾಡುವ ಮಟ್ಟಕ್ಕೆ ಇಳಿದಿದ್ದಾರೆ.ಹಗಲು ಹೊತ್ತಿನಲ್ಲಿಯೇ ಪುಂಡ ಯುವಕರು ಗಾಂಜಾ ಸೇವನೆ ಮಾಡಲು,ಗುಟ್ಕಾ ಜಗಿಯಲು ಈ ಪಾರ್ಕ್ ಅನ್ನು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ.ಈ ಪಾರ್ಕ್ ನಲ್ಲಿ ಸ್ಥಳೀಯ ನಿವಾಸಿಗಳ ಮಕ್ಕಳು ಆಟವಾಡಲು ಹಲವು ಆಟಿಕೆಗಳನ್ನು ನಗರಸಭೆ ಅಳವಡಿಸಿ ಅನುಕೂಲ ಮಾಡಿಕೊಟ್ಟಿದೆ‌.ಆದರೆ ಪೋಷಕರು ತಮ್ಮ ಮಕ್ಕಳನ್ನು ಆಟವಾಡಲು ಕರೆದುಕೊಂಡು ಹೋಗದ ಮಟ್ಟಿಗೆ ಪಾರ್ಕ್ ಹದಗೆಟ್ಟಿದೆ‌.ಮಕ್ಕಳು ಆಟವಾಡುವ ಜಾಗದಲ್ಲಿಯೇ ಮದ್ಯದ ಬಾಟಲಿಗಳು,ಬೀಡಿ,ಸಿಗರೇಟು,ಗುಟ್ಕಾ ಪ್ಯಾಕೇಟ್ ಗಳನ್ನು ಬಿಸಾಕಿದ್ದಾರೆ.ಇನ್ನು ಕೆಲವರು ಮದ್ಯದ ಬಾಟಲಿಗಳನ್ನು ಒಡೆದು ಗಾಜುಗಳನ್ನು ಪುಡಿ ಮಾಡಿ ವಿಕೃತ ಆನಂದ ಪಡೆಯುವ ಪುಂಡರ ಹಾವಳಿಯಿಂದ ಇಲ್ಲಿಯ ಜನರು ಬೇಸತ್ತಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ಪುಂಡು ಪೋಕರಿಗಳಿಗೆ ಬೀಡಿ,ಸಿಗರೇಟು, ಗಾಂಜಾ ಸೇದಲು ಉತ್ತಮ ತಾಣವಾಗಿರುವ ಈ ಪಾರ್ಕ್‌ ಕತ್ತಲಾಗುತ್ತಿದ್ದಂತೆ ಮದ್ಯ ವ್ಯಸನಿಗಳ ಕುಡಿತದ ಅಡ್ಡೆಯಾಗುತ್ತದೆ.ಎಲ್ಲೆಲ್ಲಿಂದಲೋ ಬರುವ ಮದ್ಯ ವ್ಯಸನಿಗಳು ಮದ್ಯ ಕುಡಿದು ಕೂಗಾಡುತ್ತಾರೆ.ಬಾಟಲಿಗಳನ್ನು ಎಲ್ಲೆಡೆ ಬಿಸಾಡುತ್ತಾರೆ.ಗುಟ್ಕಾ ತಿಂದು ಎಲ್ಲೆಂದರಲ್ಲಿ‌ ಉಗಿದಿದ್ದಾರೆ.ಈ ಬಗ್ಗೆ ಪ್ರಶ್ನೆ ಮಾಡುವ ಸ್ಥಳೀಯ ನಾಗರಿಕರಿಗೆ ಅವಾಚ್ಯ ಶಬ್ಧಗಳಿಂದ ಬೈಯುತ್ತಾರೆ.ಕುಡುಕರ,ಪುಂಡು ಪೋಕರಿಗಳ ಹಾವಳಿಯಿಂದ ತತ್ತರಿಸುತ್ತಿರುವ ಇಲ್ಲಿನ ಜನರ ಗೋಳು ಹೇಳತೀರದಂತಾಗಿದೆ.

ಇನ್ನು ಪಾರ್ಕ್ ಸುತ್ತ ಕಸದ ತಾಜ್ಯ ಸಂಗ್ರಹದ ತೊಟ್ಟಿ ಇಲ್ಲದಿರುವುದು ಹಾಗೂ ಸಕಾಲಕ್ಕೆ ತ್ಯಾಜ್ಯ ವಿಲೇವಾರಿ ವಾಹನ ಕಸ ಸಂಗ್ರಹಣೆ ಮಾಡದಿರುವುದರಿಂದ ಜನರು ಪಾರ್ಕ್‌ನ ಮುಂಭಾಗವೇ ಕಸವನ್ನು ಸುರಿಯುತ್ತಿದ್ದಾರೆ. ನಾಯಿಗಳು,ಬೀಡಾಡಿ‌ ದನಗಳು ಈ ತಿಪ್ಪೆಯಲ್ಲಿರುವ ಕಸವನ್ನು ರಸ್ತೆಹೆ ಚೆಲ್ಲಾಡುತ್ತಿವೆ.ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

ಪಾರ್ಕ್‌ನ ನಿರ್ವಹಣೆಯಲ್ಲಿ ನಗರಸಭೆಯು ದಿವ್ಯ ನಿರ್ಲಕ್ಷ್ಯ ತೋರಿದೆ.ಈ ಮಕ್ಕಳ ಉದ್ಯಾನವನದಲ್ಲಿ ಅಂಗನವಾಡಿ ಕೇಂದ್ರವೂ ಸಹ ಇದ್ದು,ಎಲ್ಲೆಂದರಲ್ಲಿನ ಕಸ ಹಾಗೂ ಮದ್ಯದ ಬಾಟಲಿಗಳು ಚೆಲ್ಲಾಡಿರುವುದರಿಂದ ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಈ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಂಡ್ಯ ಪೋಲಿಸರು ಮುಂದಾಗಬೇಕು.ಎಲ್ಲಿಂದಲೋ‌ ಬರುವ ಅಪರಿಚಿತ ಯುವಕರಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲು ಸೂಕ್ತವಾಗಿರುವ ಅಂಬರೀಶ್ ಪಾರ್ಕ್ ಸುತ್ತಮುತ್ತ ಪೋಲೀಸರು ಗಸ್ತು ತಿರುಗುವ ಮೂಲಕ ಇಂತಹ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು.ಅಲ್ಲದೆ ಅನೈತಿಕ ಚಟುವಟಿಕೆಯಲ್ಲಿ ತೊಡಗುವ ಪುಂಡರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ