Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಿಡಿಓ-ನೌಕರರಿಂದ ಕರ್ತವ್ಯಲೋಪ: ಮಾಜಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

ಗ್ರಾ.ಪಂ. ಪಿಡಿಓ ಮತ್ತು ನೌಕರರು ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಗ್ರಾ.ಪಂ ಅಧ್ಯಕ್ಷ ಹಾಗೂ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಮೇಶ್ ಬಾಬು ಹಾಗೂ ತಡಗವಾಡಿ ಗ್ರಾ.ಪಂ.ಅಧ್ಯಕ್ಷ ಜಿ.ಎನ್.ಮಧು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಪಾಲ್ಗೊಂಡು ಪಿಡಿಓ ಹಾಗೂ ನೌಕರರ ವಿರುದ್ಧ ಧಿಕ್ಕಾರ ಕೂಗಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಡಗವಾಡಿ ಗ್ರಾ.ಪಂ.ಪಿಡಿಓ, ಕಾರ್ಯದರ್ಶಿ ಮತ್ತು ಕೆಲವು ನೌಕರರು ಸರ್ಕಾರದ ಆದೇಶದಂತೆ, ಪಂಚಾಯಿತಿ ನಿಯಮದಂತೆ ಕೆಲಸಗಳನ್ನು ನಿರ್ವಹಿಸದೆ ಅಸಹಕಾರ ತೋರುತ್ತಿದ್ದು, ಸಾರ್ವಜನಿಕವಾಗಿ ಕುಂದುಕೊರತೆಗಳು ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಪಿಡಿಒ ಜತೆ ಚರ್ಚಿಸಿ ಗ್ರಾಮಸಭೆಗೆ ದಿನಾಂಕ ನಿಗದಿಪಡಿಸಿದ್ದರೂ ಸಭೆ ನಡೆಸಿಲ್ಲ, ಬಜೆಟ್ ಮಂಡನೆ ಮಾಡಿರುವುದಿಲ್ಲ, 14ನೇ ಹಣಕಾಸು ಖಾತೆಯಲ್ಲಿ ಬಾಕಿ ಇರುವ ಹಣವನ್ನು ಕೆಇಬಿಗೆ ಬಾಕಿ ಇರುವ ಬಿಲ್ ಪಾವತಿಸುವಂತೆ ಸರ್ಕಾರದ ಆದೇಶವಿದ್ದರೂ ಹಣ ಪಾವತಿಸಿಲ್ಲ. ನರೇಗಾ ಯೋಜನೆಯ ಸಾಮಗ್ರಿ ವೆಚ್ಚದ ಹಣ ಬಿಡುಗಡೆಯಾಗಿದ್ದರೂ ಯಾವುದೇ ಮಾಹಿತಿ ನೀಡಿಲ್ಲ, ಫಲಾನುಭವಿಗಳಿಗೆ ಹಣವನ್ನು ಪಾವತಿ ಮಾಡಿಲ್ಲ ಎಂದು ದೂರಿದರು.

ಜಾಬ್ ಕಾರ್ಡುದಾರರು ನಮೂನೆ-6 ಕೂಲಿಗಾಗಿ ಅರ್ಜಿ ನೀಡಿ ತಿಂಗಳುಗಳೇ ಕಳೆದರೂ ಇದುವರೆಗೂ ಕೆಲಸ ನೀಡಿಲ್ಲ. ವಸತಿ ಯೋಜನೆಯಲ್ಲಿ ಮನೆ ಕಾಮಗಾರಿ ಪೂರ್ಣವಾಗಿದ್ದರೂ ಪಿಡಿಒ ದೃಢೀಕರಣಗಳನ್ನು ನೀಡಿಲ್ಲ ಹಾಗೂ ಫಲಾನುಭವಿಗಳಿಗೆ ಹಣ ಪಾವತಿಸಿಲ್ಲ, ಕಚೇರಿಗೆ ಸಂಬಂಧಪಟ್ಟ ಹಳೆಯ ವಸ್ತುಗಳನ್ನು ಹರಾಜು ಮಾಡಿ ಮಾರಾಟ ಮಾಡಿದ್ದು, ಅದರಿಂದ ಬಂದ ಹಣದ ಮಾಹಿತಿ ನೀಡಿಲ್ಲ, ಕಚೇರಿಯಲ್ಲಿ ದೂರವಾಣಿ ಕೆಟ್ಟು ವರ್ಷಗಳೇ ಕಳೆದಿದ್ದು, ರಿಪೇರಿ ಮಾಡಿಸಿಲ್ಲ.

ಪಿಡಿಓ ಮೂರ‍್ನಾಲ್ಕು ದಿನಗಳಾದರೂ ಕಚೇರಿಗೆ ಹಾಜರಾಗುವುದಿಲ್ಲ. ಒಂದು ದಿನ ಬಿಟ್ಟು ಮತ್ತೊಂದು ದಿನ ಸಹಿ ಮಾಡಿರುತ್ತಾರೆ. ಈ ಎಲ್ಲ ಮೇಲ್ಕಂಡ ವಿಷಯಗಳ ಬಗ್ಗೆ ದಾಖಲೆಗಳನ್ನು ತಾವು ಪಂಚಾಯಿತಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಕಾನೂನು ರೀತ್ಯಾ ಕ್ರಮ ವಹಿಸಬೇಕೆಂದು ಜಿ.ಪಂ.ಸಿಇಓ ಶಾಂತಾ ಹುಲ್ಮನಿ ಅವರನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ವೆಂಕಟಮ್ಮ, ಸದಸ್ಯರಾದ ಎಚ್.ಆರ್. ಸುಮಿತ್ರ, ಶಾರದಮ್ಮ, ಡಿ.ಸುಕನ್ಯಾ, ಶಶಿಕಲಾ, ಲೋಕೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ