ಪ್ರಸ್ತುತ ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಶ್ರೀಮಂತರು ಅಥವಾ ದೊಡ್ಡ ಹುದ್ದೆಯಲ್ಲಿರುವವರಿಗೆ ಇಂದಿನ ಸಮಾಜ ಸನ್ಮಾನಿಸಿ ಗೌರವಿಸುತ್ತಿದೆ. ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದರೆ ಏ ಬಿಡ್ರಿ ಅವನು ಹುಚ್ಚ,ತಾನೂ ತಿನ್ನೋಲ್ಲ, ತಿನ್ನೋಕು ಬಿಡಲ್ಲ ಎನ್ನುತ್ತಾರೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಸುಂಡಹಳ್ಳಿ- ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಇರುವ ಕಾವೇರಿ ತಾಂತ್ರಿಕ ಮಹಾ ವಿದ್ಯಾಲಯದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಚಿಕ್ಕವನಿದ್ದಾಗ ತಪ್ಪು ಮಾಡಿದ ವ್ಯಕ್ತಿ ಸಾಮಾಜಿಕ ಶಿಕ್ಷೆಗೆ ಗುರಿಯಾಗುತ್ತಿದ್ದರು. ನಮ್ಮ ತಂದೆ-ತಾಯಿ ನಮ್ಮ ಗ್ರಾಮದಲ್ಲಿ ಯಾರಾದರೂ ಜೈಲಿಗೆ ಹೋಗಿ ಬಂದಿದ್ದರೆ, ಅವರ ಮನೆಯ ಹತ್ತಿರ ಹೋಗಬೇಡ ಎಂದು ಹೇಳುತ್ತಿದ್ದರು.ಆ ರೀತಿ ಸಾಮಾಜಿಕ ಶಿಕ್ಷೆ ಇರುತ್ತಿತ್ತು. ಆದರೆ ಇವತ್ತಿನ ಸಮಾಜದಲ್ಲಿ ಆ ರೀತಿಯ ಭಾವನೆ ಇಲ್ಲ. ದೊಡ್ಡ ಶ್ರೀಮಂತರು ಅಥವಾ ದೊಡ್ಡ ಹುದ್ದೆಯಲ್ಲಿರುವವರಿಗೆ ಸನ್ಮಾನ,ಗೌರವಗಳು ಹೆಚ್ಚುತ್ತಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ದುರಾಸೆ. ಈ ದುರಾಸೆ ವ್ಯಕ್ತಿಗೆ ಎಷ್ಟಿದ್ದರೂ ತೃಪ್ತಿ ಇಲ್ಲ. ಇನ್ನೂ ಬೇಕು, ಮತ್ತಷ್ಟು ಬೇಕು ಎನ್ನುತ್ತಾನೆ.ಇದರಿಂದ ದೇಶ ನಾಶವಾಗುತ್ತಿದೆ ಎಂದರು.

ನಮ್ಮ ದೇಶದಲ್ಲಿ ಕಾಲ ಕಾಲಕ್ಕೆ ಆಡಳಿತ ಮಾಡಿದ ಪಕ್ಷಗಳು ಹಲವು ಹಗರಣಗಳನ್ನು ಮಾಡಿವೆ. ಸಾರ್ವಜನಿಕರ ಇಷ್ಟೊಂದು ದೊಡ್ಡ ಮೊತ್ತದ ಹಣ ಭ್ರಷ್ಟರ ಪಾಲಾಗಿದೆ.ಇಷ್ಟೊಂದು ದೊಡ್ಡ ಹಗರಣ ನಡೆದಿದೆ ಎಂದರೆ ಈ ದೇಶದ ಆರ್ಥಿಕ ಪರಿಸ್ಥಿತಿ ಯಾವ ದುಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ. ದುರಾಸೆಗೆ ಒಳಗಾದ ವ್ಯಕ್ತಿಗೆ ಕಾನೂನಿನ ಹೆದರಿಕೆ ಇಲ್ಲ. ಆತ ಭ್ರಷ್ಟಾಚಾರ ಮಾಡಿ ಬಚಾವಾಗುತ್ತಿದ್ದಾನೆ.ಚೀನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ಇದೆ. ಆದರೆ ನಮ್ಮಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಿಕ್ಷೆ ವಿಧಿಸುವುದಿಲ್ಲ ಇಷ್ಟೊಂದು ಹಣ ಸೋರಿಕೆ ಆದರೆ ಈ ದೇಶ ಹೇಗೆ ಉದ್ದಾರವಾಗುತ್ತದೆ ಎಂದರು.
ಒಂದು ರಾಜಕೀಯ ಪಕ್ಷದ ವ್ಯಕ್ತಿ ಮತ್ತೊಂದು ಪಕ್ಷಕ್ಕೆ ನೀವು ದೊಡ್ಡ ಭ್ರಷ್ಟರು ಎಂದು ಹೇಳುತ್ತಾನೆ. ಆಗ ಆತ ನಿಮ್ಮಷ್ಟು ಭ್ರಷ್ಟಾಚಾರ ಮಾಡಿಲ್ಲ ಬಿಡಿ ಎಂದು ಹೇಳುತ್ತಾನೆ.ಈ ಹಿಂದೆ 40% ಕಮಿಷನ್ ಇತ್ತು ಈಗ 60% ಆಗಿದೆ ಎಂದು ಹೇಳುವ ಮಟ್ಟಕ್ಕೆ ಮುಟ್ಟಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಒಂದು ಗ್ಯಾಲನ್ ಪೆಟ್ರೋಲ್(4.5 ಲೀಟರ್) ಬೆಲೆ 12 ಅಣೆ ಇತ್ತು. ಆದರೆ ಇಂದು ಒಂದು ಲೀ.ಪೆಟ್ರೋಲ್ 105 ರೂ. ಮುಟ್ಟಿದೆ. ಹಣದುಬ್ಬರ ಯಾವ ಮಟ್ಟಕ್ಕೆ ಹೋಗಿದೆ ಎಂದು ರಾಜಕಾರಣಿಯನ್ನು ಪ್ರಶ್ನಿಸಿದರೆ, ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ 320 ರೂ.ಇದೆ ಅಂತಾರೆ. ಯಾರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಾನವನ ದುರಾಸೆಗೆ ತೃಪ್ತಿ ಎಂಬುದು ಉತ್ತಮವಾದ ಮದ್ದು. ದೊಡ್ಡ ಹುದ್ದೆಗೆ ಹೋಗಿ ಶ್ರೀಮಂತರಾದರೆ ತಪ್ಪಿಲ್ಲ. ಆದರೆ ಇನ್ನೊಬ್ಬನ ಜೇಬಿಗೆ ಕೈ ಹಾಕಿ ಹಣ ಮಾಡುವುದು ಸರಿಯಲ್ಲ. ಈ ರೀತಿ ಹಣ ಮಾಡಿದವನಿಗೆ ತೃಪ್ತಿಯೂ ಇರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ತೃಪ್ತಿ ಅಳವಡಿಸಿಕೊಂಡರೆ ಮಾನಸಿಕ ನೆಮ್ಮದಿ, ಸಂತೋಷವೂ ಇರುತ್ತದೆ ಇನ್ನೂ ಬೇಕು, ಮತ್ತಷ್ಟು ಬೇಕು ಎನ್ನುವ ದುರಾಸೆ ಸರಿಯಲ್ಲ ಎಂದರು.
ಈ ಹಿಂದೆ ಶಾಲೆಗಳಲ್ಲಿ ನೀತಿ ಪಾಠ ಎಂಬ ವಿಷಯ ಇರುತ್ತಿತ್ತು. ಆದರೆ ಇಂದು ಶಾಲೆಗಳಲ್ಲಿ ನೀತಿ ಪಾಠ ಹೇಳಿಕೊಡುತ್ತಿಲ್ಲ. ಎಷ್ಟೋ ಮಂದಿ ಪೋಷಕರು ಪ್ರತಿನಿತ್ಯ ಒಂದು ಗಂಟೆ ಮಕ್ಕಳ ಮುಂದೆ ಕೂತು ಅವರ ಸಮಸ್ಯೆಗಳು,ವಿದ್ಯಾಭ್ಯಾಸದ ಬಗ್ಗೆ ಆಲಿಸುವುದನ್ನು ಮಾಡುತ್ತಿಲ್ಲ. ಮಕ್ಕಳು ಮೊಬೈಲ್ ಫೋನುಗಳಲ್ಲಿ ಕಳೆದುಹೋಗುತ್ತಿದ್ದಾರೆ. ನನ್ನಂತೆ ನನ್ನ ಮಗನೂ ಶ್ರೀಮಂತನಾಗಬೇಕು ಎಂಬ ಮನಸ್ಥಿತಿ ಇವತ್ತಿನವರದ್ದಾಗಿದೆ ಎಂದರು.
ನಾನು ಲೋಕಾಯುಕ್ತನಾದ ಸಂದರ್ಭದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಮೂವರು ಮುಖ್ಯಮಂತ್ರಿಗಳು ಬಗ್ಗೆ ಗಣಿ ವರದಿಯಲ್ಲಿ ಉಲ್ಲೇಖಿಸಿದ್ದೇನೆ ನನ್ನಲ್ಲಿ ಏನಾದರೂ ನ್ಯೂನ್ಯತೆ ಇದ್ದಿದ್ದರೆ ನನ್ನ ಬಟ್ಟೆ ಬಿಚ್ಚಿ ಓಡಿಸುತ್ತಿದ್ದರು. ಆದರೆ ನಾನು ಕಾನೂನು ಬಿಟ್ಟು ಏನನ್ನು ಮಾಡಲಿಲ್ಲ. ಒಂದು ಪೈಸೆಯನ್ನು ತೆಗೆದುಕೊಳ್ಳಲಿಲ್ಲ ಎಂದರು.
ಇಂದು ಮನುಷ್ಯನಲ್ಲಿ ಮಾನವೀಯತೆ ಕಡಿಮೆಯಾಗಿದೆ, ಮಾನವೀಯತೆ ಇದ್ದರೆ ಸಮಾಜದಲ್ಲಿ ಶಾಂತಿ- ನೆಮ್ಮದಿ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಜನರ ಸೇವಕರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇವಾ ಮನೋ ಭಾವದಿಂದ ನಡೆಯಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದ ಸ್ವಾಮೀಜಿ ವಹಿಸಿದ್ದರು. ಸಿ ಇ ಆರ್ ಟಿ ಸಂಸ್ಥೆಯ ಅಧ್ಯಕ್ಷ ಡಾ. ಎಚ್ ಪಿ ರಾಜು, ಕಾರ್ಯದರ್ಶಿ ಪ್ರೊ. ನಾಗೇಂದ್ರ ಮತ್ತಿತರರಿದ್ದರು.




