‘ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರಚಿಸಿರುವ ಸಾಹುಕಾರ್ ಚನ್ನಯ್ಯ ಮತ್ತು ವಿವೇಕಾನಂದ ಬಡಾವಣೆಗಳು ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ರಚಿಸಿರುವ ಹಾಲಹಳ್ಳಿ ಸ್ಲಂ ಬಡಾವಣೆ ಇನ್ನೂ ಮಂಡ್ಯ ನಗರಸಭೆಗೆ ಹಸ್ತಾಂತರವಾಗಿರುವುದಿಲ್ಲ’ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
₹5.41 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ
ಶಾಸಕ ಮಧು ಜಿ.ಮಾದೇಗೌಡರು ಮಂಡ್ಯ ನಗರಸಭೆ ವ್ಯಾಪ್ತಿಗೆ ಸೇರಿದ ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವ ಬಗ್ಗೆ ಗಮನ ಸೆಳೆದಿರುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಮಂಡ್ಯ ನಗರದಲ್ಲಿನ ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆಯ ಕೊಳವೆಗಳನ್ನು ಅಳವಡಿಸಲು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4ರ ಯೋಜನೆಯಡಿಯಲ್ಲಿ ರೂ. 5.41 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಟೆಂಡರ್ ಕರೆಯಬೇಕಿರುತ್ತದೆ ಎಂದು ಉತ್ತರಿಸಿದ್ದಾರೆ.
ಮಂಡ್ಯ ನಗರದ ಉದಯಗಿರಿ ಅಡ್ಡ ರಸ್ತೆಗಳು, ಸೋಮೇಶ್ವರ ಸಮುದಾಯ ಭವನ ಹತ್ತಿರ ಬಿ.ಎಂ.ರಸ್ತೆ, ಹೊನ್ನಯ್ಯ ಬಡಾವಣೆ, ಹಾಲಹಳ್ಳಿ ಸ್ಲಂ ನಿಂದ ಚೀರನಹಳ್ಳಿ ರಸ್ತೆ, ಯತ್ತಗದಹಳ್ಳಿ ರಸ್ತೆ ಮತ್ತು ಇಂದಿರಾ ಕಾಲೋನಿ ವೀರಗಲ್ಲಪ್ಪಸ್ವಾಮಿ ದೇವಸ್ಥಾನದ ಹತ್ತಿರ, ನಾಗಮಂಗಲ ರಸ್ತೆ, ಸಕ್ಕರೆ ಕಾರ್ಖಾನೆ ರಸ್ತೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಮಂಡ್ಯ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ಬಹಳ ವರ್ಷಗಳ ಹಿಂದೆಯೇ ಅನುಷ್ಠಾನಗೊಳಿಸಿರುವುದರಿಂದ ಒಳಚರಂಡಿಯ ಬಹಳಷ್ಟು ದುರಸ್ಥಿ ಕಾರ್ಯಗಳು ಬರುತ್ತಿವೆ. ಇವುಗಳನ್ನು ದುರಸ್ಥಿಗೊಳಿಸಲಾಗುತ್ತಿದ್ದು ಯಾವುದೇ ದೂರುಗಳು ಬಾರದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಮುಡಾ ಮತ್ತು ಇನ್ನಿತರೆ ಇಲಾಖೆ/ ಮಂಡಳಿ/ ಸಂಸ್ಥೆಗಳಿಂದ ರಚಿಸಲ್ಪಟ್ಟಿರುವ ಬಡಾವಣೆಗಳನ್ನು ನಗರಸಭೆಗೆ ಹಸ್ತಾಂತರಿಸುವ ಪೂರ್ವದಲ್ಲಿ ಸದರಿ ಬಡಾವಣೆಗಳಲ್ಲಿ ಸಂಪೂರ್ಣ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ, ಉದ್ಯಾನ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ (ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗದಂತಹ) ನಿಯಮಾನುಸಾರ ಹಸ್ತಾಂತರಿಸಲು ಕ್ರಮವಹಿಸಿದ್ದಲ್ಲಿ ಹಸ್ತಾಂತರಿಸಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.




