Friday, November 20, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನ | ದೀಪಾಲಂಕಾರದಲ್ಲಿ ಕಂಗೊಳಿಸಿದ ಮಂಡ್ಯನಗರ

ಮಂಡ್ಯ ಸಕ್ಕರೆ ನಾಡು, ಅಥಿತಿಗಳಿಗೆ ಅಕ್ಕರೆಯ ಬೀಡಾಗಿರುವ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಕಂಪು ಸೂಸಲು ಸಜ್ಜಾಗಿದ್ದು, ತಳಿರು ತೋರಣ, ದೀಪಾಲಂಕಾರದಿಂದ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ವಿಶಾಲವಾಗಿ ಚಾಚಿಕೊಂಡಿರುವ ಹೆದ್ದಾರಿ ಇಕ್ಕೆಲದಲ್ಲಿ ಸಾಹಿತಿ- ಕವಿಗಳ ಘೋಷ ವಾಕ್ಯಗಳು, ಕನ್ನಡ- ಬಾವುಟ, ಕಬ್ಬಿನ ಜಲ್ಲೆ-ಬಾಳೆ ಕಂದು- ಮಾವಿನ ಸೊಪ್ಪಿನಿಂದ ನಿರ್ಮಿಸಿದ ಹಸಿರು ತೋರಣ, ಒಪ್ಪ ಓರಣ ವಾಗಿರುವ ರಸ್ತೆಗಳು ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾಹಿತ್ಯಾಸಕರನ್ನು ಸ್ವಾಗತಿಸುತ್ತಿವೆ. ಮನೆ ಮನೆಗೆ ಕನ್ನಡ ಬಾವುಟ: ನುಡಿಜಾತ್ರೆ ಅಂಗವಾಗಿ ಮಂಡ್ಯ ನಗರಿ ಸಕಲ ರೀಚಿಯಲ್ಲೂ ಸಜ್ಜಾಗಿದ್ದು, ನಗರದ 25 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಇದಷ್ಟೇ ಅಲ್ಲದೇ ಮಂಡ್ಯ ನಗರದ ಎಲ್ಲಾ ರಸ್ತೆ, ಪ್ರಮುಖ ವೃತ್ತಗಳಲ್ಲಿ ಕೆಂಪು-ಹಳದಿ ಬಣ್ಣದ ಬಂಟಿಂಗ್ಸ್ ಕಂಗೊಳಿಸುತ್ತಿದೆ.

ವರ್ಣಚಿತ್ರಾಲಂಕಾರ

ಮಂಡ್ಯ ನಗರದ ಹೃದಯ ಭಾಗ, ಮುಖ್ಯ ರಸ್ತೆಯ ಇಕ್ಕೆಲದಲ್ಲಿನ ಕಟ್ಟಡಗಳು, ಕಾಂಪೌಂಡ್ ಗಳಲ್ಲಿ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳು ನಾಡಿನ ಜ್ಞಾನಪೀಠ ಪುರಸ್ಕೃತರು, ಕವಿಗಳು, ಸಾಹಿತಿಗಳ ಚಿತ್ರಗಳು ಕಂಗೊಳಿಸುತ್ತಿದೆ.

ದೀಪಾಲಂಕಾರಕ್ಕೆ ಸಚಿವರ ಚಾಲನೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ನಗರದ ಸಂಜಯ ವೃತ್ತದಲ್ಲಿ ಚಾಲನೆ ನೀಡಿದರು.

ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಮೂಢಾ ಅಧ್ಯಕ್ಷ ನಹೀಮ್, ಜಿಲ್ಲಾಧ್ಯಕ್ಷ ಚಿದಂಬರಂ, ಮೈಶುಗರ್ ಕಂಪನಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದಸರಾದ ವಿಶೇಷ ದೀಪಾಲಂಕಾರದ ಮಾದರಿಯಲ್ಲಿ ಚೆಸ್ಕಾಂ ವತಿಯಿಂದ ನಗರದ ರಸ್ತೆಗಳಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಸಮ್ಮೇಳನ ನಡೆಯುವ ಮೂರು ದಿನವೂ ದೀಪಾಲಂಕಾರ ಇರಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಕಲಾಕೃತಿ, ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು ದೀಪಾಲಂಕಾರದ ಪ್ರಮುಖ ಆಕರ್ಷಣೆಯಾಗಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ