Friday, November 20, 2026

ಪ್ರಾಯೋಗಿಕ ಆವೃತ್ತಿ

ಮಹೇಶ್ ಜೋಷಿಯವರೇ, ಕೆಡವೋದು ಎಷ್ಟೊತ್ತಿನ ಕೆಲಸ…ಕಟ್ಟುವ ಕೆಲಸ ಮಾಡಿ…!

ಎನ್.ನಾಗೇಶ್, ನುಡಿಕರ್ನಾಟಕ

ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ಮುಗಿದಿದೆ. ಒಂದೆಡೆ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕಾರಣವಾದ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿಯವರ ಸರ್ವಾಧಿಕಾರಿ ವರ್ತನೆ, ಅಹಂ ಬಗ್ಗೆ ಕೂಡಾ ಚರ್ಚೆಯಾಗುತ್ತಿದೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ ದಿನನಿತ್ಯ ಮಹೇಶ್ ಜೋಶಿ ಅವರ ಏಕ ಪಕ್ಷಿಯ ನಿರ್ಧಾರದ ವಿರುದ್ಧ ಕಲಾವಿದರು, ಸಾಹಿತಿಗಳು, ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

ಇದಕ್ಕೆ ಪ್ರಮುಖ ಕಾರಣ,ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕಾರಣರಾದ 28 ಸಮಿತಿಗಳ 1,500ಕ್ಕೂ ಹೆಚ್ಚು ಪದಾಧಿಕಾರಿಗಳು,ಜಿಲ್ಲಾ ಸಂಚಾಲಕಿ ಅವರನ್ನು ಸಮ್ಮೇಳನ ನಡೆದ ಮಾರನೇ ದಿನವೇ ತರಾತುರಿಯಲ್ಲಿ ತೆರವುಗೊಳಿಸಿದ್ದು.ಸಮ್ಮೇಳನದ ನಿರೀಕ್ಷೆ ಮೀರಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಿ, ಅವರಿಗೊಂದು ಅಭಿನಂದನೆ ಹೇಳುವ ಕೆಲಸವನ್ನು ಮಹೇಶ್ ಜೋಶಿಯವರು ಮಾಡಬೇಕಿತ್ತು, ಆದರೆ ಅದ್ಯಾವುದನ್ನು ಮಾಡದೆ ಸಮ್ಮೇಳನ ಮುಗಿದ ಕೂಡಲೇ ಎಲ್ಲಾ ಪದಾಧಿಕಾರಿಗಳ ಹುದ್ದೆಯನ್ನು ರದ್ದು ಮಾಡುವ ಮೂಲಕ ತಮ್ಮ ಸರ್ವಾಧಿಕಾರದ ಧೋರಣೆ ತೋರಿಸಿದ್ದಾರೆ.

ಎಲ್ಲರನ್ನೂ ಒಗ್ಗೂಡಿಸಿಕೊಂಡು, ಪ್ರೀತಿ-ವಿಶ್ವಾಸದಿಂದ ಕನ್ನಡದ ನಾಡು ನುಡಿಯ ಕೆಲಸ ಮಾಡಬೇಕಾದ ಮಹೇಶ್ ಜೋಶಿಯವರು ಈ ರೀತಿ ತಾನು ಹೇಳಿದ್ದೆ ನಡೆಯಬೇಕು ಎನ್ನುವುದು ಸರಿಯಲ್ಲ. ಈ ರೀತಿಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಸಮಾಧಾನ ಸ್ಫೋಟಗೊಳ್ಳಲಿದೆ ಎಂದು ಕಸಾಪ ಪದಾಧಿಕಾರಿಗಳೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿಯಾಗಿದ್ದ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಶಾಕ್ ನೀಡುವ ಭಾಗವಾಗಿಯೇ ಸಮ್ಮೇಳನ ಮುಗಿದ ಮಾರನೇ ದಿನವೇ ಕಸಾಪ ನೂತನ ಅಧ್ಯಕ್ಷರನ್ನಾಗಿ ಡಾ. ಎಚ್.ಎಸ್. ಮುದ್ದೇಗೌಡ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಲ್ಲದೆ, ಸಾಹಿತ್ಯ ಸಮ್ಮೇಳನಕ್ಕೆ ನಾಮ ನಿರ್ದೇಶನ ಮಾಡಿದ್ದ ಜಿಲ್ಲೆ,ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳ ಹುದ್ದೆಯನ್ನು ರದ್ದು ಗೊಳಿಸಿದ್ದಾರೆ. ಸಾಹಿತ್ಯ ಸಮ್ಮೇಳನದ ಸಂಚಾಲಕಿಯನ್ನಾಗಿ ಮೀರಾ ಶಿವಲಿಂಗಯ್ಯ ಅವರನ್ನು ನೇಮಕ ಮಾಡಿದ ಮಹೇಶ್ ಜೋಶಿ ಅವರು, ತಾನು ಹೇಳಿದ ಹಾಗೆ ಕೇಳಿಕೊಂಡು ಮೀರಾ ಶಿವಲಿಂಗಯ್ಯ ಇರುತ್ತಾರೆಂದು ಭಾವಿಸಿದ್ದರು. ಆದರೆ ಮೀರಾ ಶಿವಲಿಂಗಯ್ಯನವರು ನೀವು ಹೇಳಿದ್ದಲ್ಲ ಕೇಳಿಕೊಂಡಿರಲು ಸಾಧ್ಯವಿಲ್ಲ. ಒಳ್ಳೆಯದಿದ್ದರೆ ಮಾತ್ರ ಕೇಳುತ್ತೇನೆ ಎಂದಂತೆ ನಡೆದುಕೊಂಡಿದ್ದನ್ನು ಜೋಷಿ ಸಹಿಸಲೇ ಇಲ್ಲ.

ಆರಂಭದಿಂದಲೇ ಮೀರಾ ಶಿವಲಿಂಗಯ್ಯ ಅವರ ವಿರುದ್ಧ ಅಸಹನೆ ಬೆಳೆಸಿಕೊಂಡ ಮಹೇಶ್ ಜೋಶಿ ನಂತರದ ದಿನಗಳಲ್ಲಿ ಅದನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋದರು. ಮಹೇಶ್ ಜೋಶಿ ವಿರುದ್ಧ ಪತ್ರಿಕಾ ಗೋಷ್ಟಿಯೊಂದರಲ್ಲಿ ಹೇಳಿಕೆ ನೀಡಿದ ಕಾರಣಕ್ಕಾಗಿ ಜಿಲ್ಲೆಯ ಹಿರಿಯ ಸಾಹಿತಿ ಕರ್ನಾಟಕ ಸಂಘವನ್ನು ಕಟ್ಟಿ ಬೆಳೆಸುತ್ತಿರುವ ಪ್ರೊ. ಜಯಪ್ರಕಾಶ್ ಗೌಡ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವಂತೆ ಮಹೇಶ್ ಜೋಶಿ ಮೀರಾ ಅವರಿಗೆ ಹೇಳಿದ್ದರು‌. ಆದರೆ ಪ್ರೊ.ಜಯಪ್ರಕಾಶ್ ಗೌಡರ ಕನ್ನಡ ನಾಡು-ನುಡಿ ಕಟ್ಟುವ ಕೆಲಸದ ಬಗ್ಗೆ ಹೆಮ್ಮೆ ಹೊಂದಿರುವ ಮೀರಾ ಶಿವಲಿಂಗಯ್ಯ ಆ ಕೆಲಸ ಮಾಡಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಜೋಶಿರವರ ಬಳಗದ ಡಾ. ಎಚ್.ಎಸ್. ಮುದ್ದೇಗೌಡ ಹಾಗೂ ಮೀರಾ ಶಿವಲಿಂಗಯ್ಯ ಅವರ ನಡುವೆ ನಡೆದ ಜಟಾಪಟಿಯೇ ಜೋಷಿ-ಮೀರಾ ಶಿವಲಿಂಗಯ್ಯ ಅವರ ನಡುವಿದ್ದ ಭಿನ್ನಮತಕ್ಕೆ ಸಾಕ್ಷ್ಯ ಒದಗಿಸಿತ್ತು.

ಸಮ್ಮೇಳನ ಮುಗಿಯುವವರೆಗೂ ಇಂತಹ ಹಲವು ಸಂದರ್ಭಗಳು ಎದುರಾದರೂ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕೆನ್ನುವ ಉದ್ದೇಶದಿಂದ ಮೀರಾ ಶಿವಲಿಂಗಯ್ಯ ಯಾವುದೇ ಭಿನ್ನಮತಕ್ಕೂ ಅವಕಾಶ ಕೊಡದೆ ಸಹಿಸಿಕೊಂಡರು.ನನಗೆ ಜೋಷಿಯವರು ಹಲವು ಬಾರಿ ಸಭೆಗಳಲ್ಲಿ ಅವಮಾನ ಮಾಡಿದ್ದಾರೆ.ಅವರು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ದೂರವಿಟ್ಟರು. ನನ್ನನ್ನು ಸಂಚಾಲಕಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಬೇಸರವಿಲ್ಲ. ಇಂತಹ ರಾಜ್ಯಾಧ್ಯಕ್ಷರ ಕೈ ಕೆಳಗೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ವೀರಾ ಶಿವಲಿಂಗಯ್ಯ ತಿರುಗೇಟು ನೀಡಿದರು.

ಬ್ರಾಹ್ಮಣ್ಯದ ಯಜಮಾನಿಕೆ
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸ,ಮದ್ಯ ಮತ್ತು ತಂಬಾಕು ನಿಷೇಧ ಎಂದು ಹೇಳುವ ಮೂಲಕ ಮಾಂಸಹಾರ ಕನಿಷ್ಠ,ಸಸ್ಯಹಾರ ಶ್ರೇಷ್ಠ ಎನ್ನುವ ಬ್ರಾಹ್ಮಣ್ಯದ ಯಜಮಾನಿಕೆಯನ್ನು ಹೇರಲು ಹೋಗಿ ಮಂಡ್ಯದ ಜನರಿಂದ ತೀವ್ರ ಪ್ರತಿರೋಧ ಎದುರಿಸಿದರು. ಕೊನೆಗೆ ಹಲವಾರು ಪ್ರಗತಿಪರ ಸಂಘಟನೆಗಳು ಒಂದಾಗಿ ಆಹಾರ ಅಸಮಾನತೆಯ ವಿರುದ್ಧ ಚಳುವಳಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್ ಅವರಿಗೆ ಬ್ರಾಹ್ಮಣ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟ ಮೇಲೆ ಅವರೇ ಸಮ್ಮೇಳನದ ಕೊನೆಯ ದಿನ ಮೊಟ್ಟೆ ವಿತರಿಸುವ ಮೂಲಕ ಜೋಷಿಯವರ ಬ್ರಾಹ್ಮಣ್ಯದ ಯಜಮಾನಿಕೆ ಶೇ.80 ರಷ್ಟು ಮಾಂಸಹಾರ ಸೇವನೆಯ ಮಂಡ್ಯದಲ್ಲಿ ನಡೆಯೋಲ್ಲ ಎಂಬುದನ್ನು ಎತ್ತಿ ತೋರಿಸಿದರು. ಮಾಂಸಹಾರ ನಿಷೇಧ ಎಂದಿದ್ದ ಜೋಷಿಗೆ ತಿರುಗೇಟು ನೀಡಿದ ಮಂಡ್ಯದ ಪ್ರಗತಿಪರರು ಸಾಹಿತ್ಯ ಪ್ರೇಮಿಗಳಿಗೆ ಬಾಡೂಟ ಬಡಿಸುವ ಮೂಲಕ ಎಲ್ಲಾ ಆಹಾರವೂ ಸಮಾನ ಎಂದು ಸಾರುವ ಮೂಲಕ 87 ನೇ ಸಾಹಿತ್ಯ ಸಮ್ಮೇಳನದಲ್ಲಿ ಬ್ರಾಹ್ಮಣ್ಯದ ಯಜಮಾನಿಕೆಗೆ ಸೆಡ್ಡು ಹೊಡೆದು ಜೋಷಿಗೆ ಪಾಠ ಹೇಳಿಕೊಟ್ಟರು.

ಇನ್ನು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಯುವಜನ ಸಬಲೀಕರಣ ಗೋಷ್ಠಿಯಲ್ಲಿ ಸುಧಾಕರ ಹೊಸಳ್ಳಿ ಎಂಬ ಲೇಖಕನಿಗೆ ಮಣೆ ಹಾಕಿದ್ದಾರೆ. ಈತ ಗೋಷ್ಠಿಯಲ್ಲಿ ಸನಾತನಿ ಕುವೆಂಪು ಎಂದು ಭಾಷಣವನ್ನು ಮಾಡಿದ್ದಲ್ಲದೆ, ಕನ್ನಡದ ಹೆಸರಿನಲ್ಲಿ ಭಾರತವನ್ನು ಒಡೆಯುವ ಕೆಲಸವಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾನೆ. ಕೇಂದ್ರ ಸರ್ಕಾರ ಹಣ ನೀಡಿದರಷ್ಟೇ ಎಲ್ಲಾ ಕೆಲಸಗಳು ಆಗುವುದಿಲ್ಲ ಎಂದು ಒಂದು ಪಕ್ಷದ ಬಗ್ಗೆ ತನಗಿರುವ ಅಭಿಮಾನವನ್ನು ಕಾರಿ ಕೊಂಡಿದ್ದಾನೆ. ಯುವಜನತೆ ಮಾನಸಿಕ ಸದೃಢತೆಗಾಗಿ ಸಾವರ್ಕರ್ ಅವರನ್ನು ಅನುಸರಿಸುವಂತೆ ಹೇಳಿಕೆ ನೀಡಿರುವ ಈತನಲ್ಲಿರುವ ಅದ್ಯಾವ ವಿದ್ವತ್ತು ಜೋಶಿಯವರಿಗೆ ಕಂಡಿತೋ ಸ್ಪಷ್ಟಪಡಿಸಬೇಕು.

ಇನ್ನು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವ, ಸದನದಲ್ಲೇ ನಿತ್ಯ ಸುಮಂಗಲಿಯರು ಎನ್ನುವ ಮೂಲಕ ಮಹಿಳೆಯರಿಗೆ ಅಪಮಾನ ಮಾಡಿದ ಸಿ.ಟಿ. ರವಿ ಅವರಿಗೂ ಮಹೇಶ್ ಜೋಶಿ ಮಣೆ ಹಾಕಿದ್ದು ಕೂಡ ಮಂಡ್ಯದ ಪ್ರಗತಿಪರರಿಗೆ ಸರಿ ಕಾಣಲಿಲ್ಲ. ಸಾಹಿತ್ಯದಲ್ಲಿ ರಾಜಕೀಯ: ರಾಜಕೀಯದಲ್ಲಿ ಸಾಹಿತ್ಯ ಎಂಬ ಗೋಷ್ಟಿಯಲ್ಲಿ ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ ರಾಜಕೀಯ ನಿಲುವುಗಳ ಬಗ್ಗೆ ಸಿ.ಟಿ. ರವಿ ಮಾತನಾಡಬೇಕಿತ್ತು.

ರಾಜ್ಯ ಕಂಡ ಇಬ್ಬರು ರಾಜಕೀಯ ಚಿಂತಕರಾದ ಎಚ್.ಕೆ. ಪಾಟೀಲ್ ಮತ್ತು ಬಿ. ಎಲ್. ಶಂಕರ್ ಅವರಿದ್ದ ಗೋಷ್ಟಿಗೆ ಕನಿಷ್ಠ ಇತಿಹಾಸ ತಿಳಿಯದ ಸಿ.ಟಿ. ರವಿಯನ್ನು ಆಯ್ಕೆ ಮಾಡಿರುವುದು ದುರಂತದ ಸಂಗತಿ ಎಂದು ಮಂಡ್ಯದ ಪ್ರಗತಿಪರರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಮಯಕ್ಕೆ ಸರಿಯಾಗಿ ವಿಧಾನಪರಿಷತ್ ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯವಾಗಿ ನಿಂದಿಸಿದ ಕಾರಣಕ್ಕೆ ಇಲ್ಲಿನ ಪ್ರಗತಿಪರರು ಸಿ.ಟಿ. ರವಿ ಗೋ ಬ್ಯಾಕ್ ಎಂದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಆತ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಲೇ ಇಲ್ಲ. ಕನ್ನಡ ನಾಡಿಗೆ ಬಹಳಷ್ಟು ಪ್ರಥಮಗಳನ್ನು ನೀಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಕೊಂದದ್ದು ಉರಿಗೌಡ, ನಂಜೇಗೌಡ ಎಂಬ ಕೋಮುವಾದಿಗಳ ಸುಳ್ಳು ಇತಿಹಾಸವನ್ನು ನಿಜವೆಂದು ಹಲವು ಬಾರಿ ಹೇಳಿರುವ ಸಿ.ಟಿ. ರವಿಯಲ್ಲಿ ಅದ್ಯಾವ ಪಾಂಡಿತ್ಯವನ್ನು ಕಂಡೆ ಎಂಬುದನ್ನು ಜೋಶಿಯವರೇ ಸ್ಪಷ್ಟ ಪಡಿಸಬೇಕು.
ಇಂತಹ ಕೆಲವರನ್ನು ಗೋಷ್ಠಿಗೆ ತುರುಕಿದ್ದು ಜೋಷಿಯವರ ಇವರ ಸರ್ವಾಧಿಕಾರಿತನವನ್ನು ಎತ್ತಿ ತೋರಿಸುತ್ತದೆ.

ಇನ್ನಾದರೂ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಕನ್ನಡ ನಾಡು-ನುಡಿಯನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು ಕೆಡುವುವ ಕೆಲಸ ಮಾಡಬಾರದು ಎಂದು ಮಂಡ್ಯದ ಜನರು ಆಗ್ರಹಿಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ