Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡಲಿ ; ಚಲುವರಾಯಸ್ವಾಮಿ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನರೇಂದ್ರಸ್ವಾಮಿ ಅವರನ್ನ ಸಚಿವರಾಗಿ ಮಾಡಲಿ ಎಂದು ಮಂಡ್ಯ ಜಿಲ್ಲೆಯ ಆರು ಶಾಸಕರ ಬಯಕೆ, ಆಶಯವು ಆಗಿದೆ. ಆದರೆ ಸಚಿವ ಸ್ಥಾನ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲೆಯ ಕೆಆರ್’ಎಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮುಂದೆ ತೀರ್ಮಾನ ಮಾಡುವವರೆಗೂ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿದ್ದು, ಮುಂದೆ ಎಐಸಿಸಿ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕಿದೆ ಎಂದರು.

ಒಕ್ಕಲಿಗರ ಸಂಘಟನೆ ಬಗ್ಗೆ ಕೇಳಿದಾಗ, ನಾವು ಸಂಘಟನೆ ಮಾಡುವ ಅವಶ್ಯಕತೆ ಬಂದಾಗ ಮಾಡುತ್ತೇವೆ. ಎಲ್ಲ ಸಮುದಾಯದವರು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು.

ಬ್ರದರ್ ಗೆ ಸಂಕಟ: ಕುಮಾರಸ್ವಾಮಿಗೆ ಪರೋಕ್ಷ ಟಾಂಗ್
ನಮ್ಮ ಬ್ರದರ್ ಗೆ ನಮ್ಮ ಸರ್ಕಾರ ನೋಡಲು ಆಗುತ್ತಿಲ್ಲ ಸರ್ಕಾರ ರಚನೆಯಾದ ನಂತರ ನಮ್ಮ ಬ್ರದರ್ ಸಂಕಟ ಪಡುತ್ತಿದ್ದಾರೆ. ಅವರಿಗೆ ಯಾರಾದರೂ ಸಮಾಧಾನ ಹೇಳುವವರು ಇದ್ದರೇ ಹೇಳಿ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಸರ್ಕಾರ ಬೀಳುತ್ತೆ, ತೆಗೆಯುತ್ತೇವೆ ಎನ್ನುವುದು ಒಳ್ಳೆಯದಲ್ಲ. ಇನ್ನು ಮೂರುವರೆ ವರ್ಷ ಸರ್ಕಾರ ಇದೇ ರೀತಿ ಇರುತ್ತದೆ. ನಮ್ಮನ್ನು ನೋಡಿ ಅವರಿಗೆ ಸಂಕಟ ಬರುತ್ತದೆ. ಇದಕ್ಕೆ ನಮ್ಮ ಬಳಿ ಮೆಡಿಸಿನ್ ಇಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಬ್ರದರ್ ವಿರುದ್ಧ ನಾವು ಯಾವತ್ತು ಮಾತನಾಡಿಲ್ಲ. ಅವರು ಸಿಎಂ ಆದಾಗಲೂ ಅವರ ವಿರುದ್ದ ಮಾತನಾಡಿಲ್ಲ. ಆದರೆ ನಮ್ಮನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಇನ್ನೋಬ್ಬರನ್ನ ನೋಡಿ ಅಸೂಯೆ ಪಡಬಾರದು. ನಾನು ಎಂದಿಗೂ ಅವರನ್ನ ನನ್ನ ಸ್ನೇಹಿತ, ಬ್ರದರ್ ಅಂತಾನೇ ಹೇಳುತ್ತೇನೆ ಎಂದು ಮರ್ಮಿಕವಾಗಿ ನುಡಿದರು.
ರಾಜ್ಯದಲ್ಲಿ ಸಿಎಂ ಆದವರೂ ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲ. ಚನ್ನಪಟ್ಟಣ ಉಪಚುನಾವಣೆ ಮಗನ ಪರ ಓಟ್ ಕೇಳಲಿಲ್ಲ ಬರೀ ಸರ್ಕಾರದ ವಿರುದ್ಧ ಮಾತನಾಡಿದರು. ಈಗಲೂ ಚನ್ನಪಟ್ಟಣದಲ್ಲಿ ಇದನ್ನ ಅವರ ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.

ಈ ವೇಳೆ ಶಾಸಕರಾದ ರಮೇಶ್ ಬಾಬು ಬಂದಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಸೇರಿದಂತೆ ಕೆಆರ್ ಎಸ್ ಅಧಿಕಾರಿಗಳು ಇದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ