ಮಂಡ್ಯ ಜಿಲ್ಲೆಯ ಗ್ರಾಮೀಣ ಯುವಕರು ಸೇರಿ ಕ್ರಿಕೆಟ್ ಆಯೋಜಿಸಿರುವುದು ಕ್ರೀಡಾ ಪ್ರೇಮವನ್ನು ತೋರಿಸುತ್ತದೆ. ಯುವಕರು ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಾಧನೆ ಮಾಡಬಹುದು. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ಯಂಗ್ ಚಾಲೆಂಜರ್ ಯುವಕರ ಬಳಗ, ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘ, ಮಹಿಳಾ ಸ್ವಸಹಾಯ ಸಂಘ ಸೇರಿದಂತೆ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ್ದ ‘ಹುಲಿವಾನ ಪ್ರೀಮಿಯರ್ ಲೀಗ್’ ಮತ್ತು ಕೆರಗೋಡು ಹೋಬಳಿ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ನಗರದ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರಿಡಾಪಟುಗಳಿಗೆ ಕ್ರೀಡೆ ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡಲಾಗುವುದು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿರುತ್ತದೆ. ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾ ಪಟುಗಳು ಭಾಗವಹಿಸಿ ಎಂದು ಕರೆ ನೀಡಿದರು.
ಶಾಸಕ ಕದಲೂರು ಉದಯ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕೀಡಾಪಟುಗಳನ್ನು ಗುರುತಿಸುವ ಕೆಲಸವನ್ನು ಈ ಪಂದ್ಯಾವಳಿ ಮಾಡುವಂತಾಗಬೇಕು, ಇಂತಹ ಪಂದ್ಯಾವಳಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಯಬೇಕು. ಇದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಸ್ಟಾರ್ ಚಂದ್ರು ಮಾತನಾಡಿ, ವಿಶ್ವದ ಅತ್ಯಂತ ಪ್ರಚಲಿತ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ, ಇಂತಹ ಕ್ರಿಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆ, ಕ್ರಿಡಾ ಕೂಟದಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಕೆಬ್ಬಹಳ್ಳಿ ರಾಜು, ವಿಜಯ್ಕುಮಾರ್, ತಾ.ಪಂ.ಮಾಜಿ ಸದಸ್ಯ ಪ್ರಶಾಂತ್ಬಾಬು, ಮುಖಂಡರಾದ ಆನಂದ್, ವಿಜಯ್ ಕುಮಾರ್, ಸಿದ್ದರಾಮು, ಲಿಂಗರಾಜು, ಕಾಂತರಾಜು, ರಾಜೇಗೌಡ ಭಾಗವಹಿಸಿದ್ದರು.




