ಹಿಂದಿ ರಾಷ್ಟ್ರಭಾಷೆಯಲ್ಲ, ಅದು ಕೇವಲ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ ಎಂದು ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್ ಹೇಳಿದ್ದಾರೆ.
ತಮಿಳುನಾಡಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ಅದು ರಾಷ್ಟ್ರಭಾಷೆಯಾಗಿರದೇ ಅಸ್ತಿತ್ವದಲ್ಲಿರುವ ಇತರ ಅಧಿಕೃತ ಭಾಷೆಗಳ ಪೈಕಿ ಒಂದಷ್ಟೇ..” ಹೇಳಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ನೀವು ಯಾವ ಭಾಷೆಯಲ್ಲಿ ನನ್ನ ಮಾತು ಕೇಳಲು ಬಯಸುತ್ತೀರಿ..?” ಎಂದು ಅಶ್ವಿನ್ ಪ್ರಶ್ನಿಸಿದರು. “ಇಂಗ್ಲಿಷ್ ಬೇಕೆನ್ನುವರು ಧ್ವನಿ ಮಾಡಿ, ತಮಿಳು ಬೇಕೆನ್ನುವರು ಧ್ವನಿ ಮಾಡಿ..” ಎಂಬ ಆರ್. ಅಶ್ವಿನ್ ಅವರ ಪ್ರಶ್ನೆಗೆ ಕೆಲವು ವಿದ್ಯಾರ್ಥಿಗಳಿಂದ ಇಂಗ್ಲಿಷ್ ಮತ್ತು ಇನ್ನೂ ಕೆಲವು ವಿದ್ಯಾರ್ಥಿಗಳು ತಮಿಳು ಭಾಷೆಗೆ ಬೇಡಿಕೆ ಇಟ್ಟರು. ಆಗ “ನಾನು ಹಿಂದಿಯಲ್ಲಿ ಮಾತನಾಡುವುದನ್ನು ಯಾರು ಇಷ್ಟಪಡುತ್ತೀರಿ..” ಎಂದು ಅಶ್ವಿನ್ ಕೇಳಿದಾಗ, ವಿದ್ಯಾರ್ಥಿ ಸಮೂಹದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ತಮಿಳಿನಲ್ಲಿ ಮಾತು ಆರಂಭಿಸಿದ ಅಶ್ವಿನ್, “ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ, ಬದಲಿಗೆ ಒಂದು ಅಧಿಕೃತ ಭಾಷೆಯಷ್ಟೇ ಎಂಬುದನ್ನು ನಾನು ಹೇಳಬೇಕಿತ್ತು..” ಎಂದು ಹೇಳಿದರು.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ಹಲವು ವಿರೋಧ ಪಕ್ಷಗಳು, ಕೇಂದ್ರವು ರಾಜ್ಯಗಳ ಮೇಲೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ‘ಒತ್ತಾಯದ ಹಿಂದಿ ಹೇರಿಕೆ’ ಮಾಡಲಾಗುತ್ತಿದೆ ಎಂದು ಹಿಂದಿನಿಂದಲೂ ಅದರ ವಿರುದ್ದ ಹೋರಾಟ ನಡೆಸುತ್ತಿವೆ, ಪ್ರಸ್ತುತ ಅಶ್ವಿನ್ ಅವರ ‘ಹಿಂದಿ ರಾಷ್ಟ್ರಭಾಷೆಯಲ್ಲ..’ ಹೇಳಿಕೆ ದೇಶದ ಗಮನ ಸೆಳೆದಿದೆ.




