ಎಂ.ಆರ್.ಎಂ ಪ್ರಕಾಶನ ಉದ್ಘಾಟನೆ, ಕೃತಿಗಳ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಜನವರಿ 12ರ ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯಲಿದೆ ಎಂದು ಪ್ರಕಾಶನದ ಚಂದ್ರಶೇಖರ ದ.ಕೋಹಳ್ಳಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದ ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಉದ್ಘಾಟಿಸಲಿದ್ದು, ಖ್ಯಾತ ವಾಗ್ಮಿ, ಸಂಸ್ಕೃತಿ ಚಿಂತಕ ಪ್ರೊ.ಕೃಷ್ಣೇಗೌಡ ಅವರು ಕೃತಿಗಳ ಬಿಡುಗಡೆ ಮಾಡುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ.ಚನ್ನಬಸವಣ್ಣ, ಸಾವಯವ ಕೃಷಿಕ ಮಾದರಹಳ್ಳಿ ಈರೇಗೌಡ ಅವರನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸನ್ಮಾನಿಸಿ ಅಭಿನಂದಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮತ್ತೋರ್ವ ಪ್ರಕಾಶಕರಾದ ಮಂಜು ಮುತ್ತೇಗೆರೆ ಇದ್ದರು.




