ಯಾವುದೇ ಭಯವಿಲ್ಲದೆ ಪರೀಕ್ಷೆಗಳನ್ನು ಸಂಭ್ರಮದ ಹಬ್ಬದಂತೆ ಆಚರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ದಕ್ಷಿಣ ವಲಯದ ವ್ಯಾಪ್ತಿಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿರ್ವಹಣೆ ಹಾಗೂ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭಯವಿಲ್ಲದೆ ಧೃತಿಗೆಡದೆ ಒಬ್ಬ ಧೀರ ಯೋಧನಂತೆ ಪರೀಕ್ಷೆ ಬರೆಯಬೇಕು. ಪರೀಕ್ಷೆಯ ಬಗ್ಗೆ ಭಯ ಇಟ್ಟು ಕೊಂಡು ಹೋದರೆ ಗೆಲ್ಲಲು ಕಷ್ಟವಾಗುತ್ತದೆ, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಇನ್ನೂ 3 ತಿಂಗಳ ಕಾಲಾವಕಾಶ ಇದೆ. ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಿಕೊಳ್ಳಿ ಎಂದರು.
ಶಿಕ್ಷಕರು ಕಳೆದ 10 ತಿಂಗಳಿಂದ ನಿಮಗೆ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಪಠ್ಯವನ್ನು ಪುನರಾವರ್ತನೆ ಮಾಡಿ ಪರೀಕ್ಷೆ ಎದುರಿಸಿ, ಓದುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟರೆ ನಿಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಈ ಬಾರಿ ಇಲ್ಲದಿದ್ದರೆ ಮುಂದಿನ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂಬ ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ, ರಾಜ್ಯಕ್ಕೆ, ಜಿಲ್ಲೆಗೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಳ್ಳುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಯನ್ನು ಬರೆಯಿರಿ ಎಂದರು.
ದಿನದ 24 ಗಂಟೆಗಳಲ್ಲಿ 8 ಗಂಟೆ ಓದುವುದಕ್ಕೆ ಮೀಸಲಿಡಿ. ತಂದೆ,ತಾಯಿ, ಶಿಕ್ಷಕರು ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಶ್ರದ್ಧೆಯಿಂದ ಓದಿ ತಂದೆ, ತಾಯಿ ಹಾಗೂ ಸಮಾಜಕ್ಕೆ ಉತ್ತಮ ನಾಗರೀಕರಾಗುವುದರೊಂದಿಗೆ ಉದ್ಯೋಗ ಅಲಂಕರಿಸಿ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಶಿವರಾಮೇಗೌಡ ರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎಸ್ ಎಸ್ ಎಲ್ ಸಿ ಒಂದು ತಿರುವಿನ ಘಟ್ಟ. ತಂದೆ, ತಾಯಿ ನಿಮ್ಮ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಶ್ರದ್ಧೆಯಿಂದ ಓದಬೇಕು, ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ ಡಯಟ್ ಉಪನಿರ್ದೇಶಕ ಪುರುಷೋತ್ತಮ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಸಿ.ಬಸವರಾಜು, ಗಣೇಶ್ ಬಾಲಕೃಷ್ಣನ್ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




