ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಸಮೀಪ ಕಳೆದ ಜ.18ರಂದು ನಡೆದ ರೌಡಿಶೀಟರ್ ಸುಪ್ರೀತ್ (ಸುಪ್ಪಿ) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೇರೊಂದು ಕೊಲೆ ಪ್ರಕರಣದಲ್ಲಿ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿರುವ ಇಬ್ಬರು ಕೈದಿಗಳು (ಪ್ರಮೋದ ಮತ್ತು ಅಭಿಷೇಕ) ಮೊಬೈಲ್ ಬಳಸಿ, ಸ್ನೇಹಿತರ ಮೂಲಕ ಸುಪ್ರೀತ್ ಕೊಲೆಗೆ ಸಂಚು ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮತ್ತೊಬ್ಬ ಆರೋಪಿ ಪೊಲೀಸರಿಂದ ಕಾಲಿಗೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಣಮುಖನಾದ ನಂತರ ಆತನನ್ನು ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಆರೋಪಿಗಳ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮನು (26) , ಚಂದನ್ (21), ಜೀವನ್ (19), ಮೋಹನ (20), ಸಂತೋಷ (28), ಅಂಗಡಿ ಭರತ (21), ನಿದ್ದೆ ಭರತ (28), ರಾಜೇಶ (20), ಪುನೀತ್ (33) ಈ ಒಂಬತ್ತು ಆರೋಪಿಗಳು ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯ ಒಂದೇ ಗ್ರಾಮದವರು. ಮತ್ತೊಬ್ಬ ಆರೋಪಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುತ್ತುಗನೆ ಗ್ರಾಮದ ತರಕಾರಿ ವ್ಯಾಪಾರಿ ಮಹೇಶ (27).
2024ರ ಫ್ರೆಬ್ರವರಿಯಲ್ಲಿ ನಡೆದ ಪ್ರಜ್ವಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳಲು ಪ್ರಮೋದ ಮತ್ತು ಆತನ ಸ್ನೇಹಿತರು ಸಂಚು ರೂಪಿಸಿ ಸುಪ್ರೀತ್ನನ್ನು ತೋಟದ ಮನೆ ಬಳಿ ರಾತ್ರಿ 10 ಗಂಟೆಯಲ್ಲಿ ಅಟ್ಟಾಡಿಸಿ, ಆಯುಧಗಳಿಂದ ತೀವ್ರತರ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಬಾಲದಂಡಿ ತಿಳಿಸಿದರು.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್. ಪ್ರಕಾಶ್ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿತ್ತು. ಎಂಟು ಆರೋಪಿಗಳು ಚಿಕ್ಕಮಗಳೂರು ಜಿಲ್ಲೆ ಸಕ್ಕರೆಪಟ್ಟಣದ ತೋಟದ ಮನೆಯೊಂದರಲ್ಲಿ ಅಡಗಿ ಕುಳಿತಿರುವವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ಹೋಗಿ ಬಂಧಿಸಿದ್ದಾರೆ. ಇನ್ನಿಬ್ಬರನ್ನು ಮೈಸೂರು ಬಳಿ ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.




