ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಮತ್ತು ಕನ್ನಡಿಗರ ಉದ್ಯೋಗಕ್ಕಾಗಿ ನಿರಂತರವಾಗಿ ಕಳೆದ 25 ವರ್ಷಗಳಿಂದ ಕರ್ನಾಟಕದಲ್ಲಿ ದುಡಿಯುತ್ತಿರುವ “ಕರ್ನಾಟಕ ರಕ್ಷಣಾ ವೇದಿಕೆ – ಶಿವರಾಮೇಗೌಡರ ಬಣ”ವು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಬೆಂಗಳೂರಿನ ಪುರಭವನದಲ್ಲಿ ಫೆ.1ರಂದು “ಕನ್ನಡಮ್ಮನ ಜಾನಪದ ಸಮಾವೇಶ” ಆಯೋಜಿಸಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಕಾವೇರಿ ನೀರಿನ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಡ್ಯ ಕರವೇ ಜಿಲ್ಲಾ ಘಟಕವು ಜ.31ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಜಯಚಾಮ ರಾಜೇಂದ್ರ ವೃತ್ತ (ಸಂಜಯ ಸರ್ಕಲ್)ದಿಂದ ಬೆಂಗಳೂರಿಗೆ “ಕನ್ನಡ ಜ್ಯೋತಿ ಯಾತ್ರೆ”ಯನ್ನು ಕೊಂಡೊಯ್ಯಲಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಡಿ. ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




