ಮಾಚಯ್ಯ ಎಂ ಹಿಪ್ಪರಗಿ
ಹೇಳಿದ್ದು ಯಾರು,
ನಾಥೂರಾಮನ ಗುಂಡಿಗೆ
ಗಾಂಧಿ ಬಲಿಯಾದರೆಂದು?
ದುರುಳ ಪರಿವಾರದ
ಕ್ರೌರ್ಯವನು ಜಾಹೀರುಗೊಳಿಸಲು
ತನ್ನನು ತಾ ತೆತ್ತುಕೊಂಡರಷ್ಟೆ!
ಗೋಡ್ಸೆಯ ಕಡೆಯವರು
ಗೆದ್ದು ಗದ್ದುಗೆಯೇರಬಹುದು;
ಸೋತವರ ಮುಂದೆ
ಗಹಗಹಿಸಿ ಬೀಗಬಹುದು;
ಸಮಸ್ತವೂ ತಮ್ಮದೆಂದು
ಅಹಮ್ಮಿನಲಿ
ಹೂಂಕರಿಸಲೂಬಹುದು;
ಆದರೆ,
ಗಾಂಧಿಯ ಕೊಂದವರೆಂಬ
ಕಳಂಕವ ತೊಳೆದುಕೊಳ್ಳಲಿ
ನೋಡೋಣ….
ಹೇಳಿದ್ದು ಯಾರು,
ನಾಥೂರಾಮನ ಗುಂಡಿಗೆ
ಗಾಂಧಿ ಬಲಿಯಾದರೆಂದು?
ಅವರು ಗೋಡ್ಸೆಗೆ
ಗುಡಿ ಕಟ್ಟಿ ಪೂಜಿಸಬಹುದು;
ಶೂರ-ವೀರ-ಪರಾಕ್ರಮಿ ಎಂಬ
ಸುಳ್ಳಿನ ಪರಾಕು ಮೊಳಗಿಸಬಹುದು;
ಪುತ್ಥಳಿ, ಪ್ರತಿಕೃತಿಯ ಹೊತ್ತು
ಊರೂರು ಮೆರೆಸಲೂಬಹುದು;
ಆದರೆ,
ಗಾಂಧಿ ಸಮಾಧಿಗೆ
ಪುಷ್ಪಾರ್ಚನೆ ಮಾಡದೆ
ಬೆನ್ನುತಿರುಗಿಸಿ ಕೂರುವ
ಧೈರ್ಯ ತೋರಲಿ
ನೋಡೋಣ…
ಹೇಳಿದ್ದು ಯಾರು,
ನಾಥೂರಾಮನ ಗುಂಡಿಗೆ
ಗಾಂಧಿ ಬಲಿಯಾದರೆಂದು?
ಅಷ್ಟೆಲ್ಲ ಯಾಕೆ, ಒಳಗೊಳಗೆ
ಆರಾಧಿಸಿ, ಆಲಂಗಿಸುವ
ನಾಥೂರಾಮನನು
ದಿಟ್ಟವಾಗಿ ಧೈರ್ಯವಾಗಿ
ತಮ್ಮವನೆಂದು ಒಪ್ಪಿಕೊಂಡುಬಿಡಲಿ
ನೋಡೋಣ… ಈ ಜಗದ ಮುಂದೆ!
ಹೇಳಿದ್ದು ಯಾರು,
ನಾಥೂರಾಮನ ಗುಂಡಿಗೆ
ಗಾಂಧಿ ಬಲಿಯಾದರೆಂದು?
ಜಗದ ಮುಂದೆ
ಬಲಿಹಾಕಿ ಹೋಗಿದ್ದಾರೆ ಗಾಂಧಿ
ದುಷ್ಟ ಸಂತಾನವನ್ನು!




